DUSU Elections | ದೆಹಲಿ ವಿಶ್ವವಿದ್ಯಾಲಯ ಚುನಾವಣೆ: 4ರಲ್ಲಿ 3 ಸ್ಥಾನ ಬಾಚಿಕೊಂಡ ಎಬಿವಿಪಿ
ನವದೆಹಲಿ: ಇಲ್ಲಿನ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ (DUSU Elections) ಎಬಿವಿಪಿಯ ಯಶ್ ದಬಾಸ್ ಅವರು ಎನ್‌ಎಸ್‌ಯುಐನ ವಿಜಯ್ ಮೀನಾ ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಿಜೆಪಿಯ ವಿದ್ಯಾರ್ಥಿ ಸಂಘಟನೆಯು ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಸಹ ಗೆದ್ದುಕೊಂಡಿದೆ. ಇನ್ನು ಸ್ವತಂತ್ರ ಅಭ್ಯರ್ಥಿ ದೀಪಾಂಶು ಶೋಕೀನ್ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಡಿಯುಎಸು ಚುನಾವಣೆಯಲ್ಲಿ ಶೇಕಡಾ 40.46 ರಷ್ಟು ಮತದಾನವಾಗಿದೆ.
ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಂಡುಬಂದ ಹಿಂಸಾಚಾರದ ಹಿನ್ನೆಲೆಯಲ್ಲಿ, ದೆಹಲಿ ಹೈಕೋರ್ಟ್ ವಿಜಯೋತ್ಸವದ ಮೆರವಣಿಗೆಗಳನ್ನು ನಿಷೇಧಿಸಿದೆ.
ನಿಯಮಗಳನ್ನು ಉಲ್ಲಂಘಿಸಿರುವ ವಿದ್ಯಾರ್ಥಿ ಸಂಘಟನೆಗಳ ವಿರುದ್ಧ ಸಾಮೂಹಿಕ ಚುನಾವಣಾ ದಂಡವನ್ನು ವಿಧಿಸಬಾರದು ಯಾಕೆ ಎಂದು ಪ್ರಶ್ನಿಸಿ ಹೈಕೋರ್ಟ್ ಎಲ್ಲಾ ವಿದ್ಯಾರ್ಥಿ ಸಂಘಟನೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಡಿಎಎಸ್‌ಯು ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೂ ನ್ಯಾಯಾಲಯ ನೋಟಿಸ್ ನೀಡಿದೆ. ಕೇವಲ ವಿದ್ಯಾರ್ಥಿಗಳು ಎಂಬ ಕಾರಣಕ್ಕಾಗಿ ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲು ದೆಹಲಿ ಪೊಲೀಸರು ಹಿಂಜರಿಯಬಾರದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅವರು ವಿದ್ಯಾರ್ಥಿಗಳಲ್ಲ ಮತ್ತು ವಿದ್ಯಾರ್ಥಿ ಸಂಘಟನೆಗಳು ಏನು ಮಾಡುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಲಿಂಗ್ಡೋ ಸಮಿತಿಯ ಶಿಫಾರಸುಗಳ ಉಲ್ಲಂಘನೆಯಾಗದಂತೆ ಅಥವಾ ಕಾಲಕಾಲಕ್ಕೆ ಹೊರಡಿಸಲಾದ ವಿವಿಧ ಆದೇಶಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ದೆಹಲಿ ವಿಶ್ವವಿದ್ಯಾಲಯ ಮತ್ತು ಇತರ ಅಧಿಕಾರಿಗಳು ಅಗತ್ಯವಿರುವ ಎಲ್ಲಾ ಹೆಜ್ಜೆಗಳನ್ನು ಹಾಗೂ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದ್ದು, ಡಿಎಎಸ್‌ಯು ಚುನಾವಣೆಯ ಸಮಯದಲ್ಲಿ ನಿಯಮ ಉಲ್ಲಂಘನೆಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ದೆಹಲಿ ಪೊಲೀಸರಿಗೆ ಮತ್ತು ಡಿಯು ಅಧಿಕಾರಿಗಳಿಗೆ ಹೈಕೋರ್ಟ್ ಮತ್ತಷ್ಟು ನಿರ್ದೇಶನ ನೀಡಿದೆ.
ಕಳೆದ ವರ್ಷದ ಡಿಯುಎಸು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್‌ನ ಎನ್‌ಎಸ್‌ಯುಐ ಒಂದು ಸ್ಥಾನವನ್ನು ಪಡೆದಿತ್ತು. ಎಬಿವಿಪಿಯ ಆರ್ಯನ್ ಮಾನ್ ಅಧ್ಯಕ್ಷ ಹುದ್ದೆಯನ್ನು ಗೆದ್ದುಕೊಂಡಿದ್ದರೆ, ದೀಪಿಕಾ ಝಾ ಜಂಟಿ ಕಾರ್ಯದರ್ಶಿ ಸ್ಥಾನ ಮತ್ತು ಕುನಾಲ್ ಚೌಧರಿ ಕಾರ್ಯದರ್ಶಿ ಸ್ಥಾನವನ್ನು ಪಡೆದಿದ್ದರು. ಎನ್‌ಎಸ್‌ಯುಐ ಕೇವಲ ಉಪಾಧ್ಯಕ್ಷ ಸ್ಥಾನವನ್ನು ಮಾತ್ರ ತನ್ನದಾಗಿಸಿಕೊಂಡಿತ್ತು. ಪ್ರಮುಖ ನಾಲ್ಕು ಕೇಂದ್ರ ಸಮಿತಿ ಸ್ಥಾನಗಳಾದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಎಬಿವಿಪಿ, ಕಾಂಗ್ರೆಸ್ ಬೆಂಬಲಿತ ರಾಷ್ಟ್ರೀಯ ವಿದ್ಯಾರ್ಥಿ ಸಂಘ ಹಾಗೂ ಐಸಾ-ಎಸ್‌ಎಫ್‌ಐ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು(ಏಜೆನ್ಸೀಸ್).