ವಾರಣಾಸಿ: 'ಕಾಶಿ ತಮಿಳು ಸಂಗಮಂ'ನ ಐದನೇ ಆವೃತ್ತಿ ಕಾರ್ಯಕ್ರಮಕ್ಕೆ ಗೈರಾದ ಹಿನ್ನೆಲೆ ತಮಿಳುನಾಡು ಸಿಎಂ ವಿಜಯ್ ವಿರುದ್ಧ ಕಿಡಿಕಾರಿರುವ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ, ಅವರು ಜನರನ್ನು ತಮ್ಮ ಧರ್ಮಕ್ಕೆ ಮತಾಂತರಿಸುವ ಗುರಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಶನಿವಾರ(ನ. 28) ವಾರಣಾಸಿಯಲ್ಲಿ ಮಾತನಾಡಿರುವ ಜೋಶಿ, ತಿರುಪರಂಕುಂದ್ರಂ ವಿವಾದವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು 'ವೋಟ್ ಬ್ಯಾಂಕ್ ರಾಜಕೀಯ' ಮಾಡುತ್ತಿದ್ದಾರೆ. 'ಕಾಶಿ ತಮಿಳು ಸಂಗಮಂ'ನ ಐದನೇ ಆವೃತ್ತಿಯಲ್ಲಿ ಭಾಗವಹಿಸಲು ನೀಡಿದ್ದ ಆಹ್ವಾನವನ್ನು ವಿಜಯ್ ನಿರ್ಲಕ್ಷಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ವಿಷಯವೇ ಎಂದು ಕೇಳಿದಾಗ, ತಾವು ಕೇವಲ ಕ್ರೈಸ್ತ ಧರ್ಮ ಅಥವಾ ಇಸ್ಲಾಂ ಧರ್ಮದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲವೆಂದೂ, ಈ ವಿಷಯವು ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಸೀಮಿತವಾಗಿಲ್ಲವೆಂದೂ ಜೋಶಿ ಸ್ಪಷ್ಟಪಡಿಸಿದರು. ಇದು ವೋಟ್ ಬ್ಯಾಂಕ್ ರಾಜಕೀಯ. ಅವರು (ವಿಜಯ್) ಆ ಸಮುದಾಯಗಳನ್ನು ಓಲೈಸಲು ಮತ್ತು ಜನರನ್ನು ಮತಾಂತರಿಸಲು ಬಯಸುತ್ತಾರೆ ಎಂದಿದ್ದಾರೆ.
ನಾನು ವಿಜಯ್ ಅವರೊಂದಿಗೆ ಖುದ್ದಾಗಿ ಮಾತನಾಡಿ ಆಹ್ವಾನ ನೀಡಿದ್ದೆ, ಅದಕ್ಕೆ ಅವರು 'ನೋಡೋಣ' ಎಂದು ಹೇಳಿದರು. ನಮ್ಮ ಕಚೇರಿಯಿಂದಲೂ ಹಲವು ಬಾರಿ ಸಂಪರ್ಕಿಸಲಾಯಿತು, ಆದರೆ ಅಂತಿಮವಾಗಿ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರದಿಂದ ಅನುದಾನ ಕೋರುವ ಮೊದಲು, ತಮಿಳುನಾಡು ಸರ್ಕಾರವು ಪಿಎಂ ಶ್ರೀ ಶಾಲೆಗಳನ್ನು ಸ್ಥಾಪಿಸಲು ಒಪ್ಪಿಕೊಳ್ಳಬೇಕು. ನೀವು ಶಾಲೆಗಳನ್ನು ನಿರ್ಮಿಸಿದರೆ, ನಾವು ಹಣ ನೀಡುತ್ತೇವೆ. ಒಂದು ವೇಳೆ ನೀವು ನಾವು ಶಾಲೆಗಳನ್ನು ನಿರ್ಮಿಸುವುದಿಲ್ಲ ಅಂದ್ರೆ, ನಾವು ಯಾಕೆ ಹಣ ನೀಡಬೇಕು? ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).