

ನವದೆಹಲಿ: ನಾಳೆಯ(ನ. 30) ಸಂಸತ್ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಪ್ರಸ್ತಾವಿತ ಡಿಲಿಮಿಟೇಶನ್ ಮಸೂದೆಯನ್ನು ಬೆಂಬಲಿಸದಂತೆ ಮಿತ್ರಪಕ್ಷಗಳ ಮನವೊಲಿಸಲು ಕಾಂಗ್ರೆಸ್ ಕೊನೆಯ ಕಸರತ್ತು ನಡೆಸಿದ್ದು, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಚೆನ್ನೈ ಮತ್ತು ಮುಂಬೈಗೆ ಪ್ರಯಾಣಿಸಿದ್ದಾರೆ.
ಚೆನ್ನೈನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮತ್ತು ಮುಂಬೈನಲ್ಲಿ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಈ ಮೂವರು ನಾಯಕರು ಮಾತುಕತೆ ನಡೆಸಲಿದ್ದಾರೆ. ಮತ್ತು ಮಸೂದೆ ಬೆಂಬಲಿಸುವ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ಒತ್ತಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಉನ್ನತ ನಾಯಕತ್ವವು ಮಧ್ಯಾಹ್ನ 2 ಗಂಟೆಗೆ ಚೆನ್ನೈನಲ್ಲಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಲಿದ್ದು, ಬಳಿಕ ಮುಂಬೈಗೆ ಪ್ರಯಾಣಿಸಿ ರಾತ್ರಿ 8 ಗಂಟೆಗೆ ಶರದ್ ಪವಾರ್ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಅವರ ಜೊತೆ ಕಾಂಗ್ರೆಸ್ ಸಿಎಂಗಳಾದ ರೇವಂತ್ ರೆಡ್ಡಿ, ಡಿ.ಕೆ. ಶಿವಕುಮಾರ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ಇಂಡಿಯಾ ಬ್ಲಾಕ್ ನಾಯಕರು ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ.
ದಕ್ಷಿಣ ರಾಜ್ಯಗಳು ಸೇರಿದಂತೆ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಶೇಕಡಾ 50ರಷ್ಟು ಹೆಚ್ಚಿಸಬೇಕೆಂಬ ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದ ಬಳಿಕ ಡಿಎಂಕೆ ಮಸೂದೆ ಬೆಂಬಲಿಸುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದೆ. ಅದೇ ರೀತಿ ಎನ್‌ಸಿಪಿ (ಎಸ್‌ಪಿ) ಮಸೂದೆಯನ್ನು ಬೆಂಬಲಿಸುವ ತನ್ನ ನಿರ್ಧಾರ ಅಂತಿಮ ಎಂದು ತಿಳಿಸಿದೆ.
ಈ ಹಿನ್ನೆಲೆ ಕೊನೆಯ ಕ್ಷಣದ ಕಸರತ್ತಾಗಿ ಮಸೂದೆಯನ್ನು ಬೆಂಬಲಿಸದಂತೆ ಕಾಂಗ್ರೆಸ್ ನಾಯಕರು ಈ ಇಬ್ಬರು ಉನ್ನತ ನಾಯಕರನ್ನು ಭೇಟಿಯಾಗಿ ಮನವೊಲಿಸಲು ಯತ್ನಿಸಲಿದ್ದಾರೆ (ಏಜೆನ್ಸೀಸ್).