ಮಾಜಿ ಸಿಎಂ ಮಮತಾ ಬ್ಯಾನರ್ಜಿ 
ದೇಶ

ಹೆಲ್ಮೆಟ್ ಧರಿಸದೇ ಇದ್ದಿದ್ರೆ ಅಭಿಷೇಕ್ ಸಾಯುತ್ತಿದ್ರು; ಮಾಜಿ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ | Mamata Banerjee

ಕೋಲ್ಕತ್ತಾ: ಪಶ್ವಿಮ ಬಂಗಾಳದ ಸೋನಾಪುರದಲ್ಲಿ ಶನಿವಾರ(ಮೇ 30) ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಮಮತಾ ಬ್ಯಾನರ್ಜಿ(Mamata Banerjee), ಅಭಿಷೇಕ್ ಹೆಲ್ಮೆಟ್ ಧರಿಸದೇ ಇದ್ದಿದ್ರೆ ಸಾಯುತ್ತಿದ್ದರು ಎಂದು ಹೇಳಿದ್ದಾರೆ.
ದಕ್ಷಿಣ 24 ಪರಗಣದಲ್ಲಿ ಮೃತಪಟ್ಟ ಪಕ್ಷದ ಕಾರ್ಯಕರ್ತರ ಕುಟುಂಬವನ್ನು ಭೇಟಿ ಮಾಡಲು ಹೋದಾಗ, ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು ಅಭಿಷೇಕ್ ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆದು ಹಾಗೂ ಎಳೆದಾಡಿ ಮನಬಂದಂತೆ ಹಲ್ಲೆ ಮಾಡಿದ್ದರು. ಅಭಿಷೇಕ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿಬ್ಬಂದಿ ಅಭಿಷೇಕ್ ಅವರನ್ನು ರಾತ್ರಿ ಆಸ್ಪತ್ರೆಗೆ ದಾಖಲಿಸಿದೆ. ತಡರಾತ್ರಿ ತಮ್ಮ ಸೋದರಳಿಯನ ಮೇಲಿನ ದಾಳಿಯ ಬಗ್ಗೆ ತಿಳಿದ ನಂತರ, ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಧಾವಿಸಿದರು. ಅಳಿಯನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಆಸ್ಪತ್ರೆಗೆ ಹೊರಗೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 
ಘಟನೆಯ ವಿಡಿಯೋವನ್ನು ನಾನು ನೋಡಿದೆ. ಅವನ ಪಕ್ಕದಲ್ಲಿದ್ದ ಯುವಕ ಅವನಿಗೆ ಹೆಲ್ಮೆಟ್ ಕೊಟ್ಟನು. ಅವನಿಗೆ ಹೆಲ್ಮೆಟ್ ನೀಡದಿದ್ದರೆ, ಅಭಿಷೇಕ್ ಸ್ಥಳದಲ್ಲೇ ಸಾಯುತ್ತಿದ್ದನು. ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಇಲ್ಲದಿದ್ದರೆ, ವೈದ್ಯರು ಅವನನ್ನು ಎರಡು ಗಂಟೆಗಳ ಕಾಲ ಐಸಿಯುನಲ್ಲಿ ಯಾಕೆ ಇರಿಸಿದರು ಎಂದು ಪ್ರಶ್ನಿಸಿದ್ದಾರೆ. ಅವನ ಮುಖ, ಬೆನ್ನು, ಎದೆ ಮತ್ತು ಕುತ್ತಿಗೆಯ ಮೇಲೆ ಆಳವಾದ ಗಾಯಗಳಾಗಿವೆ ಇದೇ ವೇಳೆ ವೈದ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೆಟ್ಟ ವಿಷಯವೆಂದರೆ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡದಂತೆ ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತೋರುತ್ತದೆ. ರಾಜಕೀಯವನ್ನು ರಾಜಕೀಯವಾಗಿ ನೋಡಬೇಕು. ರಾಜಕೀಯವನ್ನು ಹಿಂಸೆ, ಆಯುಧಗಳು ಮತ್ತು ಭಯದಿಂದ ಉತ್ತರಿಸಬಾರದು. ವಿಶ್ವಾಸಾರ್ಹ ವೈದ್ಯರು ಮತ್ತು ಕುಟುಂಬ ವೈದ್ಯರ ಮಾರ್ಗದರ್ಶನದಲ್ಲಿ ಅಭಿಷೇಕ್‌ಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೆರವು ನೀಡಲು ಕರೆ ಮಾಡಿದ್ದರು ಎಂದು ಹೇಳಿದ್ದು, ಏನಾದರೂ ಅಗತ್ಯವಿದ್ದರೆ ತಿಳಿಸುವಂತೆ ಹೇಳಿದ್ದಾರೆ. ಮತ್ತು ಅವರು ಅಭಿಷೇಕ್ ಬ್ಯಾನರ್ಜಿ ಅವರನ್ನು ಚಿಕಿತ್ಸೆಗಾಗಿ ಹೈದರಾಬಾದ್ ಅಥವಾ ಬೇರೆಲ್ಲಿಗಾದರೂ ಕರೆದೊಯ್ಯಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ (ಏಜೆನ್ಸೀಸ್).