- ಜಂತರ್-ಮಂತರ್ ಸೀಸನ್ 2 ಆರಂಭ
- ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಘೋಷಣೆ
- ಸರ್ಕಾರಿ ಶಾಲೆಗಳು ಮತ್ತು ಪ್ರಮುಖ ವಿದ್ಯಾರ್ಥಿ ಸಮಸ್ಯೆಗಳನ್ನು ಗುರಿಯಾಗಿಸಿ ನೂತನ ಹೋರಾಟ
ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸ್ವಯಂಸೇವಕರ ಸಭೆಯನ್ನು ದೆಹಲಿಯಲ್ಲಿ ಆಯೋಜಿಸಲು ಸಭಾಂಗಣ ನೀಡದಂತೆ ಮೇಲಿನಿಂದ ತೀವ್ರ ಒತ್ತಡ ಹೇರಲಾಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijit Dipke on Jantar Mantar Season 2) ಬುಧವಾರ (ಆ.12) ಗಂಭೀರ ಆರೋಪ ಮಾಡಿದ್ದಾರೆ.
ಕಾರ್ಯಕ್ರಮ ಆಯೋಜಿಸಲು ಮುಂಚಿತವಾಗಿ ಬುಕ್ ಮಾಡಿದ್ದ ಸಭಾಂಗಣದ ಮಾಲೀಕರಿಗೂ ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿದ್ದಾರೆ. ಮೂಲಗಳ ಪ್ರಕಾರ, ದೆಹಲಿಯ ನಾರಾಯಣ ಪ್ರದೇಶದಲ್ಲಿ ಸಿಜೆಪಿ ಸ್ವಯಂಸೇವಕರ ಸಭೆ ನಿಗದಿಯಾಗಿತ್ತು.
ಆದರೆ ಕೊನೆ ಕ್ಷಣದಲ್ಲಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ದೀಪ್ಕೆ , ನಾವು ಇಂದು ದೆಹಲಿಯಲ್ಲಿ ಸ್ವಯಂಸೇವಕರ ಸಭೆ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆವು. ಸಭಾಂಗಣಕ್ಕಾಗಿ ಹುಡುಕಾಡಿದಾಗ ಯಾರೂ ನಮಗೆ ಜಾಗ ನೀಡಲು ಮುಂದೆ ಬರಲಿಲ್ಲ. ಎಲ್ಲರಿಗೂ ಮೇಲಿನಿಂದ ಒತ್ತಡವಿದೆ ಎಂದು ಸಭಾಂಗಣದ ಮಾಲೀಕರು ಹೇಳಿದರು ಎಂದು ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿಂದೆ ಆಡಳಿತಾರೂಢ ಬಿಜೆಪಿಯ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿರುವ ಅವರು, ಇಂತಹ ಸಣ್ಣತನದ ಕ್ರಮಗಳು ಬಿಜೆಪಿ ದೇಶದ ಯುವಕರಿಗೆ ಎಷ್ಟು ಹೆದರುತ್ತದೆ ಎಂದು ತೋರಿಸುತ್ತದೆ ಎಂದಿದ್ದಾರೆ.
ಜಂತರ್-ಮಂತರ್ ಸೀಸನ್ 2 ಆರಂಭ!
ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ದೀಪ್ಕೆ, ಸಿಜೆಪಿಯ ಜನಪ್ರಿಯ ಜಂತರ್-ಮಂತರ್ ಪ್ರತಿಭಟನೆಯ ಎರಡನೇ ಸೀಸನ್ ಅತಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಸುಳಿವು ನೀಡಿದ್ದಾರೆ.
ಇನ್ನು ಜಾರ್ಖಂಡ್‌ನ ರಾಂಚಿಯಲ್ಲಿ ದೇವೇಂದ್ರ ಮಹ್ತೊ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿ ಸ್ವಯಂಸೇವಕರು ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ರಾಷ್ಟ್ರವ್ಯಾಪಿ ಅಭಿಯಾನ
ಈ ಕುರಿತು ಮಾತನಾಡಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಪ್ರಸ್ತುತ ಪ್ರತಿಭಟನೆಗಳು "ಸೀಸನ್ 2" ರ ಭಾಗವಾಗಿದ್ದು, ದೇಶಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು. ಸ್ವಾತಂತ್ರ್ಯ ದಿನಾಚರಣೆಯಿಂದ ಪಕ್ಷವು ಶಿಕ್ಷಣ ಕ್ಷೇತ್ರದ ಮೇಲೆ ವಿಶೇಷ ಗಮನಹರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ನಾಗರಿಕರು ನೇರವಾಗಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು ಹಾಗೂ ಶಾಲೆಗಳ ನೈಜ ಸ್ಥಿತಿಗತಿಗಳನ್ನು ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಿಜೆಪಿಯ ಮತ್ತೊಬ್ಬ ಮುಖಂಡ ಅಶುತೋಷ್ ರಾಂಕಾ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದಲೂ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಸಿಜೆಪಿ ಹೊಸ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಆಯಾ ಗ್ರಾಮಗಳ ಸರಪಂಚರು ಮತ್ತು ಸ್ಥಳೀಯ ಮುಖ್ಯಸ್ಥರು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಿದ್ದಾರೆ. ಒಂದು ವೇಳೆ ಅವರು ಕ್ರಮ ಕೈಗೊಳ್ಳಲು ವಿಫಲವಾದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್).