ದೇಶ

ಮತ್ತೊಮ್ಮೆ ಅಧಿಕಾರ ಹಿಡಿಯಲು ಆಪ್ ರಣತಂತ್ರ: 31 ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಸ್; ಹಾಲಿ ಸಚಿವ ಸೇರಿ 8 ಶಾಸಕರಿಗೆ ಟಿಕೆಟ್ ಮಿಸ್! | AAP Second List

ಚಂಡೀಗಢ: ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ ಭರ್ಜರಿ ಸಿದ್ಧತೆ ನಡೆಸಿದ್ದು, ಗುರುವಾರ (ನವೆಂಬರ್ 12) 31 ಅಭ್ಯರ್ಥಿಗಳ ತನ್ನ ಎರಡನೇ ಪಟ್ಟಿಯನ್ನು (AAP Second List) ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪಕ್ಷವು ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಕೃಷಿ ಸಚಿವ ಗುರ್ಮೀತ್ ಸಿಂಗ್ ಖುದಿಯನ್ ಸೇರಿದಂತೆ ಒಟ್ಟು ಎಂಟು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ, ಇಬ್ಬರು ಸಂಸದರನ್ನು ಕಣಕ್ಕಿಳಿಸಿದೆ.

ಆಪ್ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಕುಮಾರ್ ಗುಪ್ತಾ ಅವರು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅಕ್ಟೋಬರ್ 31ರಂದು 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದ ಆಪ್, ಈಗ 31 ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಪಂಜಾಬ್‌ನ ಒಟ್ಟು 117 ವಿಧಾನಸಭಾ ಕ್ಷೇತ್ರಗಳ ಪೈಕಿ 71 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದಂತಾಗಿದೆ. ಉಳಿದ 46 ಕ್ಷೇತ್ರಗಳ ಘೋಷಣೆ ಬಾಕಿ ಇದೆ. ವಿಶೇಷವೆಂದರೆ, 2022ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸೋತಿದ್ದ 21 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನೂ ಈ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ.

ಎಂಟು ಹಾಲಿ ಶಾಸಕರಿಗೆ ಕೊಕ್: ಸಚಿವರಿಗೂ ಟಿಕೆಟ್ ಮಿಸ್​

ಮೊದಲ ಪಟ್ಟಿಯಲ್ಲಿ ಎಲ್ಲಾ 40 ಹಾಲಿ ಶಾಸಕರನ್ನು ಉಳಿಸಿಕೊಂಡಿದ್ದ ಆಪ್, ಎರಡನೇ ಪಟ್ಟಿಯಲ್ಲಿ ಗೆಲುವಿನ ಮಾನದಂಡಕ್ಕೆ ಒತ್ತು ನೀಡಿ ಎಂಟು ಹಾಲಿ ಶಾಸಕರನ್ನು ಬದಲಾಯಿಸಿದೆ.

ಲಂಬಿ: ಮುಕ್ತಸರ್ ಜಿಲ್ಲೆಯ ಲಂಬಿ ಕ್ಷೇತ್ರದಿಂದ ಹಾಲಿ ಕೃಷಿ ಸಚಿವ ಗುರ್ಮೀತ್ ಸಿಂಗ್ ಖುದಿಯನ್ ಅವರನ್ನು ಕೈಬಿಟ್ಟು, ಅವರ ಸಂಬಂಧಿ ರಣಧೀರ್ ಸಿಂಗ್ ಧೀರಾ ಅವರಿಗೆ ಟಿಕೆಟ್ ನೀಡಲಾಗಿದೆ.

ಪಟ್ಟಿ: ತರ್ನ್ ತರಣ್ ಜಿಲ್ಲೆಯ ಪಟ್ಟಿ ಕ್ಷೇತ್ರದಲ್ಲಿ ಹಾಲಿ ಶಾಸಕ ಮತ್ತು ಮಾಜಿ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಬದಲಿಗೆ ಕುಸ್ತಿಪಟು ಜಸ್ ಕನ್ವರ್ ಸಿಂಗ್ ಅವರನ್ನು ಕಣಕ್ಕಿಳಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಮಾರ್ಚ್ 2026ರಲ್ಲಿ ಬಂಧನಕ್ಕೊಳಗಾದ ಭುಲ್ಲರ್ ಪ್ರಸ್ತುತ ಜೈಲಿನಲ್ಲಿದ್ದಾರೆ.

ಅಮೃತಸರ ಉತ್ತರ: ಇತ್ತೀಚೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಕುನ್ವರ್ ವಿಜಯ್ ಪ್ರತಾಪ್ ಅವರ ಸ್ಥಾನಕ್ಕೆ ಕರಮ್‌ಜಿತ್ ಸಿಂಗ್ ರಿಂಟು ಎನ್ನುವವರಿಗೆ ಟಿಕೆಟ್ ನೀಡಲಾಗಿದೆ.

ಖರಾರ್: ಮಾಜಿ ಸಚಿವ ಅನ್ಮೋಲ್ ಗಗನ್ ಮಾನ್ ಬದಲಿಗೆ ಪರ್ಮಿಂದರ್ ಸಿಂಗ್ ಗೋಲ್ಡಿಗೆ ಮಣೆ ಹಾಕಲಾಗಿದೆ.

ಚಮ್ಕೌರ್ ಸಾಹಿಬ್: ಹಾಲಿ ಶಾಸಕ ಡಾ. ಚರಣ್‌ಜಿತ್ ಸಿಂಗ್ ಬದಲಿಗೆ, ಬಹುಜನ ಸಮಾಜ ಪಕ್ಷ ತೊರೆದು ಆಪ್ ಸೇರಿದ ಜಸ್ಬೀರ್ ಸಿಂಗ್ ಗರ್ಹಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಇದಲ್ಲದೆ, ಜಲಂಧರ್ ಸೆಂಟ್ರಲ್‌ನಲ್ಲಿ ರಮಣ್ ಅರೋರಾ ಬದಲಿಗೆ ನಿತಿನ್ ಕೊಹ್ಲಿ, ಬಟಿಂಡಾ ಗ್ರಾಮಾಂತರದಲ್ಲಿ ಅಮಿತ್ ರತ್ತನ್ ಬದಲಿಗೆ ಗೋಪಾಲ್ ಸಿಂಗ್ ಮತ್ತು ಶುತ್ರಾನಾದಲ್ಲಿ ಕುಲ್ವಂತ್ ಸಿಂಗ್ ಬಾಜಿಗರ್ ಬದಲಿಗೆ ವರಿಂದರ್ ಕೌರ್ ಲುಂಬಾ ಅವರಿಗೆ ಟಿಕೆಟ್ ನೀಡಲಾಗಿದೆ.

ಇಬ್ಬರು ಸಂಸದರಿಗೆ ಚಾನ್ಸ್!

ಪಕ್ಷದ ಬಲ ಹೆಚ್ಚಿಸಲು ಇಬ್ಬರು ಹಾಲಿ ಲೋಕಸಭಾ ಸಂಸದರನ್ನು ವಿಧಾನಸಭಾ ಚುನಾವಣೆಗೆ ಟಿಕೆಟ್​ ನೀಡಲಾಗಿದೆ. ಸಂಸದ ಗುರ್ಮೀತ್ ಸಿಂಗ್ ಮೀತ್ ಹೇಯರ್ ಬರ್ನಾಲಾ ಕ್ಷೇತ್ರದಿಂದ ಹಾಗೂ ಹೋಶಿಯಾರ್‌ಪುರ ಸಂಸದ ಡಾ. ರಾಜ್ ಕುಮಾರ್ ಚಬ್ಬೆವಾಲ್ ಫಗ್ವಾರಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಉಳಿದಂತೆ ಜಗ್ರಾಂವ್‌ನಿಂದ ಸರ್ವಜಿತ್ ಕೌರ್ ಮಾನುಕೆ, ಅಬೋಹರ್‌ನಿಂದ ಡಾ. ಸುಹಾನಿ ದೋಡಾ ಹಾಗೂ ರಾಜಾ ಸಾನ್ಸಿ ಕ್ಷೇತ್ರದಿಂದ ಪಂಜಾಬಿ ನಟಿ ಸೋನಿಯಾ ಮಾನ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ

ಪಂಜಾಬ್‌ನ ಮಾಝಾ, ದೋವಾಬಾ ಮತ್ತು ಮಾಳ್ವಾ ಪ್ರಾಂತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮಾಝಾ ಪ್ರಾಂತ್ಯದ ಸುಜನ್‌ಪುರ, ಪಠಾಣ್‌ಕೋಟ್, ಗುರುದಾಸ್‌ಪುರ, ಮಜೀಠಾ ಸೇರಿ ಹಲವು ಕ್ಷೇತ್ರಗಳಿಗೆ, ದೋವಾಬಾದ ಕಪುರ್ತಲಾ, ಫಗ್ವಾರಾ, ಫಿಲ್ಲೌರ್, ಜಲಂಧರ್‌ನ ವಿವಿಧ ಕ್ಷೇತ್ರಗಳಿಗೆ ಹಾಗೂ ಮಾಳ್ವಾ ಪ್ರಾಂತ್ಯದ ಚಮ್ಕೌರ್ ಸಾಹಿಬ್, ಖರಾರ್, ಲಂಬಿ, ಬರ್ನಾಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

2022ರ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆದ್ದು ಭಗವಂತ್ ಮಾನ್ ನೇತೃತ್ವದಲ್ಲಿ ಸರ್ಕಾರ ರಚಿಸಿದ್ದ ಆಪ್, 2027ರಲ್ಲೂ ಅಧಿಕಾರ ಉಳಿಸಿಕೊಳ್ಳಲು ತಂತ್ರ ರೂಪಿಸಿದೆ. ಮೊದಲ ಪಟ್ಟಿಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ (ಧುರಿ) ಮತ್ತು ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ (ಕೋಟ್ಕಪುರ) ಅವರಿಗೆ ಟಿಕೆಟ್ ಘೋಷಿಸಲಾಗಿತ್ತು. ಮುಂಬರುವ ಚುನಾವಣೆಯಲ್ಲಿ ಆಪ್‌ಗೆ ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿಯಿಂದ ಪ್ರಬಲ ಪೈಪೋಟಿ ನೀಡಲಿದೆ ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಜೋರಾಗಿದೆ(ಏಜೆನ್ಸೀಸ್​).