- 'ಅಪ್ಪ-ಅಮ್ಮನ ನೋವು ನೋಡಲಾಗಲಿಲ್ಲ'; ಇಸ್ಲಾಂ ತೊರೆದು ಮತ್ತೆ ಸನಾತನ ಧರ್ಮಕ್ಕೆ ಮರಳಿದ ಯುವಕ
- ಪ್ರೇಮಕ್ಕಾಗಿ ಧರ್ಮ ಬದಲಿಸಿದ್ದ ಯುವಕ ಮತ್ತೆ ಹಿಂದೂ ಧರ್ಮಕ್ಕೆ; ವಿಡಿಯೋ ವೈರಲ್
- ಉತ್ತರ ಪ್ರದೇಶದಲ್ಲಿ ಮತಾಂತರ ಪ್ರಕರಣಕ್ಕೆ ಹೊಸ ತಿರುವು; ಆಯುಷ್ ಮಲಿಕ್ ಹಿಂದೂ ಧರ್ಮಕ್ಕೆ ವಾಪಸ್
ಶಾಮ್ಲಿ (ಉತ್ತರ ಪ್ರದೇಶ): ಪ್ರೇಮ ಸಂಬಂಧದ(ಲವ್) ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಉತ್ತರ ಪ್ರದೇಶದ ಶಾಮ್ಲಿಯ ಯುವಕ ಆಯುಷ್ ಮಲಿಕ್(Ayush Malik) ಇದೀಗ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಕುಟುಂಬದ ನೋವನ್ನು ನೋಡಿ ಹಾಗೂ ಸ್ವಇಚ್ಛೆಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಈ ಪ್ರಕರಣ ಈಗಾಗಲೇ ಉತ್ತರ ಪ್ರದೇಶದ ಅಕ್ರಮ ಮತಾಂತರ ನಿಷೇಧ ಕಾಯ್ದೆಯಡಿ ತನಿಖೆಗೆ ಒಳಪಟ್ಟಿದೆ. ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸಿದ ಬಳಿಕ ಆಯುಷ್ ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
'ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮರಳಿದ್ದೇನೆ'
ವಿಡಿಯೋದಲ್ಲಿ ಮಾತನಾಡಿರುವ ಆಯುಷ್, ತಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದುದನ್ನು ಒಪ್ಪಿಕೊಂಡಿದ್ದಾರೆ. "ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಧರ್ಮ ಬದಲಿಸಿಕೊಂಡಿದ್ದೆ. ಆದರೆ ನಿಮ್ಮ ನೋವನ್ನು ನೋಡಿ ಹಾಗೂ ನನ್ನ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು, ನನ್ನ ಸ್ವಇಚ್ಛೆಯಿಂದ ಮತ್ತೆ ಸನಾತನ ಧರ್ಮಕ್ಕೆ ಮರಳಿದ್ದೇನೆ. ಇನ್ನು ಮುಂದೆ ಕುಟುಂಬದೊಂದಿಗೆ ಅವರ ಆಶ್ರಯದಲ್ಲಿ ಬದುಕಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
ತಂದೆಯ ಆರೋಪ ಏನು?
ಆಯುಷ್ ತಂದೆ ದೇವರಾಜ್ ಮಲಿಕ್, ತಮ್ಮ ಪುತ್ರ ಅಧಿಕೃತವಾಗಿ ಮತ್ತೆ ಸನಾತನ ಧರ್ಮವನ್ನು ಸ್ವೀಕರಿಸಿದ್ದಾನೆ ಎಂದು ಹೇಳಿದ್ದಾರೆ. ಈ ಹಿಂದೆ ಅವರು, ಫಿಸಿಯೋಥೆರಪಿಸ್ಟ್ ಚಾಂದಿನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿ ತಮ್ಮ ಮಗನನ್ನು ಸಂಚು ರೂಪಿಸಿ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಕೋಟ್ಯಂತರ ರೂಪಾಯಿ ಮೌಲ್ಯದ ಕುಟುಂಬದ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಮಗನ ಬ್ರೈನ್‌ವಾಶ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈಗಾಗಲೇ ಇಬ್ಬರ ಬಂಧನ
ದೇವರಾಜ್ ಮಲಿಕ್ ನೀಡಿದ ದೂರಿನ ಆಧಾರದ ಮೇಲೆ ಉತ್ತರ ಪ್ರದೇಶ ಪೊಲೀಸರು ಚಾಂದಿನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿ ಅವರನ್ನು ಬಂಧಿಸಿದ್ದರು. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಉತ್ತರ ಪ್ರದೇಶ ಅಕ್ರಮ ಮತಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ದಾಖಲಿಸಲಾಗಿದೆ.
ತನಿಖೆಯಲ್ಲಿ ಏನು ಗೊತ್ತಾಗಿದೆ?
ಪೊಲೀಸರ ಮಾಹಿತಿ ಪ್ರಕಾರ, ಬಿ-ಫಾರ್ಮಾ ಪದವೀಧರನಾಗಿರುವ ಆಯುಷ್ ತನ್ನ ಕುಟುಂಬದ ಮೆಡಿಕಲ್ ಸ್ಟೋರ್ ನಿರ್ವಹಣೆಯಲ್ಲಿ ಸಹಾಯ ಮಾಡುತ್ತಿದ್ದರು. 2018ರಲ್ಲಿ ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯುವ ವೇಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಾಂದಿನಿ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿದ್ದು, ಬಳಿಕ ಚಾಂದಿನಿ ಹಾಗೂ ಆಕೆಯ ಕುಟುಂಬದ ಸದಸ್ಯರು ಆಯುಷ್ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, 2023ರಲ್ಲಿ ಆಯುಷ್ ಅವರನ್ನು ದೆಹಲಿಗೆ ಕರೆದೊಯ್ದು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಆಗ ಅವರಿಗೆ ಮೊಹಮ್ಮದ್ ಅಲಿ ಎಂಬ ಹೆಸರು ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಅಲ್ಲದೆ, ದೆಹಲಿಯಲ್ಲಿ ನಿಕಾಹ್ ಕೂಡ ನಡೆದಿತ್ತು ಎಂದು ದೂರಿನಲ್ಲಿ ಹೇಳಲಾಗಿದ್ದರೂ, ತನಿಖೆ ವೇಳೆ ಮದುವೆಯ ಯಾವುದೇ ಪ್ರಮಾಣಪತ್ರ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಸ್ಲಾಮಿಕ್ ಆಚರಣೆಗಳನ್ನು ಪಾಲಿಸುತ್ತಿದ್ದ ಆರೋಪ
ಪೊಲೀಸ್ ಮೂಲಗಳ ಪ್ರಕಾರ, ಮತಾಂತರದ ಬಳಿಕ ಆಯುಷ್ ಗಡ್ಡ ಬೆಳೆಸಿಕೊಂಡಿದ್ದು, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು. ಉಡುಗೆ-ತೊಡುಗೆಯಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಆಯುಷ್ ಮತ್ತೆ ಹಿಂದೂ ಧರ್ಮಕ್ಕೆ ಮರಳಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ,(ಏಜೆನ್ಸೀಸ್).