ಲಖನೌ: ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ಹೆದರಿ ಪಿಜ್ಜಾ ಅಂಗಡಿಯೊಂದರ ಎರಡನೇ ಮಹಡಿಯಿಂದ ಯುವಕ-ಯುವತಿಯ ಜೋಡಿಯೊಂದು ಜಿಗಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಭಾನುವಾರ(ಜ. 25) ವರದಿಯಾಗಿದೆ.
ಶನಿವಾರ ಸಂಜೆ ಕಾಂತಾ ಪೊಲೀಸ್ ಠಾಣಾ ವ್ಯಾಪ್ತಿಯ ಬರೇಳಿ ಮೋರ್ಹ್ ಬಳಿಯ ಪಿಜ್ಜಾ ಅಂಗಡಿ ಕಟ್ಟಡದಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಯುವಕ ಮತ್ತು 19 ವರ್ಷದ ಯುವತಿ ಒಟ್ಟಿಗೆ ಕುಳಿತು ಪಿಜ್ಜಾ ಆರ್ಡರ್ ಮಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಯುವಕ-ಯುವತಿಯನ್ನು ಪ್ರಶ್ನೆ ಮಾಡಿದ್ದಾರೆ.
ನೂಡಲ್ಸ್ ಆರ್ಡರ್ ಮಾಡಿದ್ದು, ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ. ಬಳಿಕ ಕಾರ್ಯಕರ್ತರು, ಇಬ್ಬರ ಜಾತಿ, ಧರ್ಮ ಕೇಳಿದ್ದಾರೆ. ಇಬ್ಬರು ಹಿಂದೂ ಧರ್ಮದವರು ಎಂದು ಹೇಳಿಕೊಂಡಿದ್ದಾರೆ. ಆದರೆ ಈ ವೇಳೆ ಕಾರ್ಯಕರ್ತನೊಬ್ಬ ಇಬ್ಬರ ವಿಡಿಯೋ ಮಾಡಿಕೊಳ್ಳುವುದನ್ನು ನೋಡಿದ ಯುವಕ ಭಯಬಿದ್ದ ಕಟ್ಟಡದ ಕಿಟಕಿಯಿಂದ ಹಾರಿದ್ದಾನೆ. ಯುವತಿಯೂ ಆ ಯುವಕನನ್ನೇ ಫಾಲೋ ಮಾಡಿ ಕಿಟಕಿಯಿಂದ ಹಾರಿದ್ದಾಳೆ. ನೆಲಕ್ಕೆ ಬಿದ್ದು ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ಪಿ ರಾಜೇಶ್ ದ್ವಿವೇದಿ, ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಿ, ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಇನ್ನೂ ಯಾವುದೇ ದೂರು ದಾಖಲಾಗಿಲ್ಲ. ದೂರು ಬಂದ ತಕ್ಷಣ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).