ಇಡೀ ದೇಶವೇ ಹಬ್ಬ ಆಚರಿಸುತ್ತಿದ್ರೆ ಈ ಹಳ್ಳಿಯಲ್ಲಿ ಮಾತ್ರ ನೀರವ ಮೌನ! ಅದೊಂದು ಕಾರಣಕ್ಕೆ ಸಂಭ್ರಮವನ್ನೇ ಮರೆತಿದೆ ಈ ಗ್ರಾಮ  
ದೇಶ

ಇಡೀ ದೇಶವೇ ಹಬ್ಬ ಆಚರಿಸುತ್ತಿದ್ರೆ ಈ ಹಳ್ಳಿಯಲ್ಲಿ ಮಾತ್ರ ನೀರವ ಮೌನ! ಅದೊಂದು ಕಾರಣಕ್ಕೆ ಸಂಭ್ರಮವನ್ನೇ ಮರೆತಿದೆ ಈ ಗ್ರಾಮ

ಹಿಮಾಚಲ ಪ್ರದೇಶ: ದೇಶಾದ್ಯಂತ ಪ್ರತಿ ಮನೆ ಮನೆಯೂ ಇಂದು ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಸಂಭ್ರಮ, ಸಡಗರದಿಂದ ದೀಪಗಳು, ಪಟಾಕಿ ಹಾಗೂ ವಿಶೇಷ ತಿಂಡಿ, ತಿನಿಸುಗಳೊಂದಿಗೆ ಆಚರಿಸುತ್ತಿದ್ದರೆ, ಅತ್ತ ಹಿಮಾಚಲದ 'ಸಮ್ಮೂ' ಎಂಬ ಗ್ರಾಮದಲ್ಲಿ ಮಾತ್ರ ಶೋಕದ ಕಗತ್ತಲಿನಲ್ಲಿ ಉಪವಾಸ ಮಾಡುತ್ತಿದೆ. ಇದು ಕೇಳಲು ಆಶ್ಚರ್ಯ, ನಂಬಲು ಅಸಾಧ್ಯ ಅನಿಸಿದರೂ ನಂಬುವಂತ ಅಸಲಿ ಸತ್ಯವೇ.

ಈ ಊರಿನಲ್ಲಿ ದೀಪದ ಬೆಳಕಿಲ್ಲ, ಪಟಾಕಿ ಶಬ್ದವಿಲ್ಲ, ಹಬ್ಬದ ಸಿದ್ಧತೆಗಳಂತು ಇಲ್ಲವೇ ಇಲ್ಲ. ಕೇವಲ ನೀರವ ಮೌನ ಅಷ್ಟೇ. ಇದಕ್ಕೆ ಒಂದು ಬಲವಾದ ಕಾರಣವೂ ಇದೆ. ತಲೆಮಾರುಗಳಿಂದ ಬಂದ ನಂಬಿಕೆ ಹಾಗೂ ಭಯದ ಭೀತಿಯ ಹಿನ್ನೆಲೆ ಇಲ್ಲಿನ ಗ್ರಾಮದ ಜನರು ದೀಪಾವಳಿ ಸಂಭ್ರಮದಿಂದ ಸಂಪೂರ್ಣವಾಗಿ ದೂರ ಸರಿದಿದ್ದಾರೆ. ನಮಗೂ ದೀಪದ ಹಬ್ಬಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವಂತೆ ಬದುಕುತ್ತಿದ್ದಾರೆ.

ಹಮೀರ್‌ಪುರ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಸಮ್ಮೂ ಗ್ರಾಮಸ್ಥರು, ಸುಮಾರು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ದೀಪಾವಳಿ ಹಬ್ಬವನ್ನು ಆಚರಿಸಿಲ್ಲ. ಒಂದು ವೇಳೆ ಹಬ್ಬವನ್ನು ಆಚರಿಸಿ ಬಿಟ್ಟರೆ ಅಗ್ನಿ ಅನಾಹುತ, ಅಕಾಲಿಕ ಸಾವು ಹಾಗೂ ಸಾಲು ಸಾಲು ದುರಂತಗಳು ಸಂಭವಿಸುತ್ತವೆ ಎಂಬ ತೀವ್ರ ಭೀತಿ ಇಲ್ಲಿನ ಜನರಲ್ಲಿ ಇಂದಿಗೂ ಆಳವಾಗಿ ಬೇರೂರಿದೆ. ಇದೇ ಅವರ ಸಂಭ್ರಮಕ್ಕೆ ಅಡ್ಡಿಯಾಗಿರುವ ಮೂಲ ಕಾರಣ.

ಹಳ್ಳಿಗೆ ಸತಿಯಾದ ಮಹಿಳೆಯ ಶಾಪ

ಸ್ಥಳೀಯ ನಂಬಿಕೆಗಳ ಪ್ರಕಾರ, ಹಿಂದೆ ಈ ಗ್ರಾಮದ ಮಹಿಳೆಯೊಬ್ಬಳು ತನ್ನ ಪತಿಯ ಚಿತೆಯ ಮೇಲೆ ಸತಿಯಾಗುವ (ಪುರಾತನ ಸತಿ ಪದ್ಧತಿ) ಸಂದರ್ಭದಲ್ಲಿ, ದೀಪಾವಳಿ ಆಚರಿಸದಂತೆ ಇಡೀ ಹಳ್ಳಿಗೆ ಶಾಪ ನೀಡಿದ್ದಳು ಎನ್ನಲಾಗಿದೆ. ಅಂದಿನಿಂದ ಈ ಗ್ರಾಮದಲ್ಲಿ ದೀಪಾವಳಿ ಆಚರಣೆ ಎನ್ನುವುದು ಸಂಪೂರ್ಣವಾಗಿ ನಿಷೇಧಗೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ.

"ಈ ಸಂಪ್ರದಾಯ ಅತ್ಯಂತ ಹಳೆಯದು. ತಲೆಮಾರುಗಳೇ ಕಳೆದುಹೋಗಿವೆ. ಆದರೆ, ಇಲ್ಲಿ ಯಾರೂ ದೀಪಾವಳಿಯನ್ನು ಆಚರಿಸಿಲ್ಲ. ಇಂದಿಗೂ ಆ ಭಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ" ಎಂದು ಗ್ರಾಮದ ಹಿರಿಯ ಮಹಿಳೆ ಸಾವಿತ್ರಿ ದೇವಿ ಎಂಬುವವರು ಹೇಳಿದ್ದಾರೆ. ಅಲ್ಲದೆ, ಹಬ್ಬ ಆಚರಿಸಲು ಪ್ರಯತ್ನಿಸಿದಾಗಲೆಲ್ಲಾ ಗ್ರಾಮದಲ್ಲಿ ಅಗ್ನಿ ಅನಾಹುತಗಳು ಹಾಗೂ ಸಾವುಗಳು ಸಂಭವಿಸಿವೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.

ಹಬ್ಬದ ಅಡುಗೆ ಇಲ್ಲ, ಉಪವಾಸ ಅಷ್ಟೇ

ಈ ಹಳ್ಳಿಯಲ್ಲಿ ದೀಪಾವಳಿಯ ನಿಯಮಗಳು ಅಡುಗೆಮನೆಗೂ ವಿಸ್ತರಿಸಿವೆ. ಹಬ್ಬದ ದಿನ ಯಾವುದೇ ವಿಶೇಷ ಸಿಹಿ ಖಾದ್ಯಗಳನ್ನು ಸಿದ್ಧಪಡಿಸುವುದಿಲ್ಲ. ಪಟಾಕಿ ಸಿಡಿಸುವುದಿಲ್ಲ ಹಾಗೂ ಮನೆಗಳಿಗೆ ಅಲಂಕಾರವನ್ನೂ ಮಾಡುವುದಿಲ್ಲ. ಶಾಪವನ್ನು ವಿಮೋಚನೆಗೊಳಿಸಲು ಈ ಹಿಂದೆ ನಡೆಸಿದ ಹಲವು ಪೂಜೆ-ಪುನಸ್ಕಾರಗಳು ಯಾವುದೂ ಯಶಸ್ವಿಯಾಗಿಲ್ಲ. ಹೀಗಾಗಿ, ಹಬ್ಬದ ದಿನ ಅನೇಕರು ಮನೆಗಳ ಒಳಗಡೆಯೇ ಎಂದಿನಂತೆ ದಿನ ಕಳೆಯುತ್ತಾರೆ.

ಪಕ್ಕದ ಊರಿಗೆ ಹೋಗಿ ಹಬ್ಬ ನೋಡುವ ಜನರು

ಮಕ್ಕಳು ಕೂಡ ತಮ್ಮ ಹಿರಿಯರು ಹೇಳಿಕೊಟ್ಟ ಈ ಆಚರಣೆಯನ್ನು ಶಿಸ್ತುಬದ್ಧವಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಊರಿನಲ್ಲಿ ಹಬ್ಬ ಆಚರಿಸಲು ಸಾಧ್ಯವಾಗದ ಹಿನ್ನೆಲೆ ಕೆಲವರಿಗೆ ತೀವ್ರ ಬೇಸರವಿದೆ. ಹೀಗಾಗಿ, ದೀಪಾವಳಿಯ ಸಂಭ್ರಮವನ್ನು ಕಣ್ಣುಂಬಿಕೊಳ್ಳಲು ಅಕ್ಕ-ಪಕ್ಕದ ಗ್ರಾಮಗಳಿಗೆ ಹೋಗುತ್ತಾರೆ ಎನ್ನಲಾಗಿದೆ. ಸಮ್ಮೂ ಗ್ರಾಮಸ್ಥರಿಗೆ ದೀಪಾವಳಿ ಎಂಬುದು ತಮ್ಮ ಮನೆಯಲ್ಲಿ ಆಚರಿಸುವ ಹಬ್ಬವಾಗದೆ, ಬೇರೆ ಊರಿನ ಮನೆಗಳಿಗೆ ಹೋಗಿ ನೋಡಿ ಬರುವ ಸಂಭ್ರಮವಾಗಿ ಉಳಿದು ಹೋಗಿರುವುದು ನಿಜಕ್ಕೂ ಬೇಸರದ ಸಂಗತಿ,(ಏಜೆನ್ಸೀಸ್).