ವಾರದ ಅಹವಾಲು ಸಭೆಗೆ ನಾಯಿ ಮುಖವಾಡ ಧರಿಸಿ ಬಂದ ವ್ಯಕ್ತಿ 
ದೇಶ

ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ಜನ; ಡಾಗ್​ ಮಾಸ್ಕ್​ ಹಾಕಿ ಡಿಸಿ ಕಚೇರಿಗೆ ಬಂದ ವ್ಯಕ್ತಿ | A man wearing a dog mask

ಪ್ರಮುಖ ಮುಖ್ಯಾಂಶಗಳು

  • ಬೀದಿ ನಾಯಿಗಳ ಕಾಟದ ವಿರುದ್ಧ ವಿನೂತನ ಪ್ರತಿಭಟನೆ
  • ನಾಯಿ ಮುಖವಾಡ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
  • ಜನ ಅಹವಾಲು ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗೆ ದೂರು
ಮಧ್ಯಪ್ರದೇಶ: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ಬೇಸತ್ತ ಜನರು ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳ ಗಮನ ಸೆಳೆಯಲು ಖಾಂಡ್ವಾದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಖಾಂಡ್ವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ವಾರದ ಅಹವಾಲು ಸಭೆಗೆ ವ್ಯಕ್ತಿಯೊಬ್ಬರು ನಾಯಿ ಮುಖವಾಡ ಧರಿಸಿ ಬಂದಿದ್ದರು. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ದೀಪಕ್ ರಾಥೋಡ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಯಿ ವೇಷಧಾರಿ ಜಿಲ್ಲಾಧಿಕಾರಿಗೆ ಸಾರ್ವಜನಿಕರ ಪರವಾಗಿ ದೂರು ನೀಡಿದರು. ನಾಯಿ ವೇಷದಲ್ಲಿ ವ್ಯಕ್ತಿಯೊಬ್ಬರು ಸಭೆಗೆ ಆಗಮಿಸಿದ್ದನ್ನು ಕಂಡು ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಚ್ಚರಿಗೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಯಿಗಳ ಸಂತಾನಹರಣ ಕಾರ್ಯಕ್ರಮದಲ್ಲಿ ಅಕ್ರಮ?

ಇದೇ ವೇಳೆ, ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಹರಣ ಕಾರ್ಯದಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ನಾಯಿಗಳ ಸಂತಾನಹರಣಕ್ಕಾಗಿ ಸುಮಾರು 40 ಲಕ್ಷ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಆದರೆ ಇದೇ ಅವಧಿಯಲ್ಲಿ ನಗರದಲ್ಲಿ 13,225 ನಾಯಿ ಕಡಿತ ಕೇಸ್​ಗಳು ದಾಖಲಾಗಿವೆ ಎಂದು ಅವರು ಅಂಕಿ-ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಬೀದಿ ನಾಯಿಗಳ ನಿಯಂತ್ರಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಸಾರ್ವಜನಿಕರ ಸುರಕ್ಷತೆ ಇಲ್ಲದಂತಾಗಿದ್ದು, ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ,(ಏಜನ್ಸೀಸ್​).