ನಕಲಿ ಐಎಎಸ್​ ಅಧಿಕಾರಿ ರಾಹುಲ್ ಕೌಶಿಕ್ ಬಂಧನ  
ದೇಶ

ಐಎಎಸ್ ಪೋಸ್ ಕೊಟ್ಟ ಕಿಲಾಡಿ ಜೈಲುಪಾಲು: ನಕಲಿ ಅಧಿಕಾರಿಯ ಅಸಲಿ ಬಣ್ಣ ಬಯಲು ಮಾಡಿದ ಮೀರಟ್​ ಪೊಲೀಸ್​! Fake IAS Officer

ಮೀರಟ್​: ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಒಂದಾದ ಐಎಎಸ್ ಅಧಿಕಾರಿ (Fake IAS Officer) ಎಂದು ಸುಳ್ಳು ಹೇಳಿ, ಜನರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ ಮೀರಟ್​ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರಾಹುಲ್ ಕೌಶಿಕ್ ಎಂಬ ವ್ಯಕ್ತಿ ಕಳೆದ ಹಲವು ದಿನಗಳಿಂದ ತನ್ನನ್ನು ತಾನು 2008ರ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಸಾರ್ವಜನಿಕರನ್ನು ಮಾತ್ರವಲ್ಲ, ಸರ್ಕಾರಿ ಅಧಿಕಾರಿಗಳನ್ನೂ ದಾರಿ ತಪ್ಪಿಸುತ್ತಿದ್ದ ಎಂದು ತಿಳಿದು ಬಂದಿದೆ.

ಮದ್ಯದ ಅಮಲಿನಲ್ಲಿ ಅಟ್ಟಹಾಸ!

ಬುಧವಾರ (ಮಾ.11) ತಡರಾತ್ರಿ ಫೂಲ್‌ಬಾಗ್ ಕಾಲೋನಿಯಲ್ಲಿ ರಾಹುಲ್ ಕೌಶಿಕ್ ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದನು. ಅಷ್ಟೇ ಅಲ್ಲದೆ, ತನ್ನ ಪ್ರಭಾವವನ್ನು ತೋರಿಸಲು ಸ್ಥಳೀಯ ಪೊಲೀಸರ ನಿಯಂತ್ರಣ ಕೊಠಡಿ (112) ಮತ್ತು ಹಿರಿಯ ಅಧಿಕಾರಿಗಳ ಸಿ.ಯು.ಜಿ (CUG) ಸಂಖ್ಯೆಗಳಿಗೆ ಫೋನ್ ಮಾಡಿ ಬೆದರಿಕೆ ಹಾಕಲು ಪ್ರಾರಂಭಿಸಿದನು. ಇದರಿಂದ ಆತಂಕಗೊಂಡ ಸ್ಥಳೀಯರು ತಕ್ಷಣವೇ ನೌಚಂಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಪೊಲೀಸರ ತನಿಖೆಯಲ್ಲಿ ಬಯಲಾದ ಅಸಲಿ ಬಣ್ಣ
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ವಿಚಾರಣೆಯ ಸಮಯದಲ್ಲಿ, ಆತ ತಾನು 2008ರ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಆದರೆ, ಆತನ ಮಾತಿನಲ್ಲಿನ ಸಂಶಯದಿಂದ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದಾಗ, ಆತನ ಐಎಎಸ್ ಪದವಿಯು ಸಂಪೂರ್ಣ ಸುಳ್ಳು ಎಂದು ದೃಢಪಟ್ಟಿದೆ. ಪೊಲೀಸರು ಆತನ ಮನೆಯಲ್ಲಿ ಐಎಎಸ್, ಉಪ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಎಂಬ ಬಿರುದುಗಳನ್ನು ಹೊಂದಿರುವ ನಾಮಫಲಕವನ್ನು ಸಹ ವಶಪಡಿಸಿಕೊಂಡಿದ್ದಾರೆ.

ಹಳೆಯ ಕ್ರಿಮಿನಲ್!

ಪೊಲೀಸರ ತನಿಖೆಯಲ್ಲಿ ಆತ ಕೇವಲ ನಕಲಿ ಅಧಿಕಾರಿಯಷ್ಟೇ ಅಲ್ಲ, ಕ್ರಿಮಿನಲ್ ಹಿನ್ನೆಲೆಯೂ ಹೊಂದಿದ್ದಾನೆ ಎಂಬುದು ಬಯಲಾಗಿದೆ. ಈ ಹಿಂದೆ 2013ರಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಈತ ಬಂಧನಕ್ಕೊಳಗಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವ್ಯಕ್ತಿ ಈ ರೀತಿ ನಕಲಿ ಐಎಎಸ್ ಅಧಿಕಾರಿ ಎಂದು ಎಷ್ಟು ಸಮಯದಿಂದ ಜನರ ಬಳಿ ಸುಳ್ಳು ಹೇಳಿ ಲಾಭ ಪಡೆದಿದ್ದಾನೆ ಮತ್ತು ಯಾರ್ಯಾರನ್ನು ಮೋಸಗೊಳಿಸಿದ್ದಾನೆ ಎಂಬ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪ್ರಸ್ತುತ ಆರೋಪಿಯ ವಿರುದ್ಧ ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಅಧಿಕಾರಿಗಳ ಮೇಲೆ ಒತ್ತಡ ಹೇರಲು ಈ ರೀತಿ ನಾಟಕವಾಡುತ್ತಿದ್ದ, ಎಂದು ಹೆಚ್ಚುವರಿ ಎಸ್‌ಪಿ ಆಯುಷ್ ವಿಕ್ರಮ್ ತಿಳಿಸಿದ್ದಾರೆ,(ಎಜನ್ಸೀಸ್​).