ಸಾಂದರ್ಭಿಕ ಚಿತ್ರ 
ದೇಶ

ಮಾರ್ಕ್ಸ್‌ಗಿಂತ ಮಿಗಿಲು ಜೀವನ ಪಾಠ; ವಿದ್ಯಾರ್ಥಿಗಳನ್ನು ಭವಿಷ್ಯಕ್ಕಾಗಿ ರೆಡಿ ಮಾಡೋದು ಹೇಗೆ? | How to prepare students?

ಪ್ರಮುಖ ಮುಖ್ಯಾಂಶಗಳು

  • ಪರೀಕ್ಷೆ ಪಾಸಾಗೋದು ಮಾತ್ರ ಶಿಕ್ಷಣದ ಅಂತಿಮ ಗುರಿಯಲ್ಲ
  • ಅನುಭವದಿಂದ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ ಆತ್ಮವಿಶ್ವಾಸ
  • ಕ್ರೀಡೆ, ನಾಟಕ, ಚರ್ಚೆಗಳಿಂದ ಮಕ್ಕಳಲ್ಲಿ ಕೌಶಲ್ಯ ವೃದ್ಧಿ
Career Guidance: ಶಾಲೆಯ ಸಾಧನೆ ಅಂದ್ರೆ ಪರೀಕ್ಷೆಯಲ್ಲಿ ಗಳಿಸುವ ಅಂಕ, ಯೂನಿವರ್ಸಿಟಿಯಲ್ಲಿ ಸಿಕ್ಕ ಅಡ್ಮಿಷನ್ ಅಥವಾ ಸ್ಪರ್ಧೆಗಳಲ್ಲಿ ಗೆದ್ದ ಪ್ರಶಸ್ತಿಗಳಷ್ಟೇ ಅಲ್ಲ. ವಿದ್ಯಾರ್ಥಿ ಶಾಲೆ ಬಿಟ್ಟು ಹೊರಬಂದ ಮೇಲೆ ಬದುಕಿನ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ, ಹೊಸ ಸವಾಲುಗಳಿಗೆ ಹೇಗೆ ಒಡ್ಡಿಕೊಳ್ಳುತ್ತಾನೆ ಅನ್ನೋದೂ ಅಷ್ಟೇ ಮುಖ್ಯ.
ಇನ್ನು, ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಹಾಗೂ ಹೊಸ ಉದ್ಯೋಗಗಳ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಸಾಕಾಗುವುದಿಲ್ಲ. ಸರಿಯಾದ ಪ್ರಶ್ನೆ ಕೇಳುವ, ಸಮಸ್ಯೆಗೆ ಪರಿಹಾರ ಹುಡುಕುವ ಮತ್ತು ನಿರಂತರವಾಗಿ ಕಲಿಯುವ ಗುಣ ಬೆಳೆಸುವುದು ಶಿಕ್ಷಣದ ಪ್ರಮುಖ ಗುರಿಯಾಗಬೇಕು.

ಅಂಕಗಳ ಜತೆ ಕೌಶಲ್ಯವೂ ಅಗತ್ಯ

ವಿದ್ಯಾರ್ಥಿಗಳ ವೃತ್ತಿ ಸಿದ್ಧತೆ ಅವರು ಯಾವ ಉದ್ಯೋಗ ಆಯ್ಕೆ ಮಾಡಬೇಕು ಅನ್ನೋದರಿಂದ ಶುರುವಾಗುವುದಿಲ್ಲ. ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಹೊಸ ಅವಕಾಶಗಳನ್ನು ಸ್ವೀಕರಿಸುವ ಮನೋಭಾವವನ್ನು ಅರ್ಥಮಾಡಿಕೊಳ್ಳುವುದರಿಂದಲೇ ಆರಂಭವಾಗುತ್ತದೆ. ಮಕ್ಕಳು ಅಂಕ ಗಳಿಸುವ ಯಂತ್ರಗಳಲ್ಲ.

ಕ್ರೀಡೆ, ನಾಟಕಗಳಿಂದ ಮಕ್ಕಳಲ್ಲಿ ಕೌಶಲ್ಯ ವೃದ್ಧಿ

ತರಗತಿಯ ಚರ್ಚೆಗಳು ಸಂವಹನ ಹಾಗೂ ವಿಶ್ಲೇಷಣಾ ಸಾಮರ್ಥ್ಯ ಹೆಚ್ಚಿಸುತ್ತವೆ. ಗುಂಪು ಚಟುವಟಿಕೆಗಳು ಸಹಕಾರ ಮತ್ತು ಸಮಸ್ಯೆ ನಿಭಾಯಿಸುವ ಕೌಶಲ್ಯ ಕಲಿಸುತ್ತವೆ. ಕ್ರೀಡೆ ಶಿಸ್ತು, ನಾಯಕತ್ವ ಮತ್ತು ಸೋಲನ್ನು ಎದುರಿಸುವ ಧೈರ್ಯ ನೀಡಿದರೆ, ನಾಟಕ ಹಾಗೂ ಸಾರ್ವಜನಿಕ ಭಾಷಣ ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಸಾಮಾಜಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸಹಾನುಭೂತಿ ಬೆಳೆಸುತ್ತವೆ.

ಅನುಭವದಿಂದಲೇ ಆತ್ಮವಿಶ್ವಾಸ

ಆತ್ಮವಿಶ್ವಾಸವನ್ನು ಕೇವಲ ಭಾಷಣಗಳಿಂದ ಬೆಳೆಸಲು ಸಾಧ್ಯವಿಲ್ಲ. ವೇದಿಕೆ ಮೇಲೆ ಮಾತನಾಡುವುದು, ಕಾರ್ಯಕ್ರಮ ಆಯೋಜಿಸುವುದು, ತಂಡವನ್ನು ಮುನ್ನಡೆಸುವುದು ಸೇರಿದಂತೆ ಹಲವು ಅನುಭವಗಳ ಮೂಲಕ ಅದು ಬೆಳೆಯುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯ ಹೇಳಲು, ಜವಾಬ್ದಾರಿ ತೆಗೆದುಕೊಳ್ಳಲು ಮತ್ತು ಹೊಸ ಪ್ರಯತ್ನ ಮಾಡಲು ಸುರಕ್ಷಿತ ಹಾಗೂ ಪ್ರೋತ್ಸಾಹದ ವಾತಾವರಣ ಕಲ್ಪಿಸುವುದು ಶಾಲೆಗಳ ಜವಾಬ್ದಾರಿ.

ಭವಿಷ್ಯದ ಉದ್ಯೋಗಗಳಿಗೆ ಸಿದ್ಧತೆ

ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಾಡಬಹುದಾದ ಕೆಲಸಗಳು ಇಂದಿನ ಉದ್ಯೋಗಗಳಿಗಿಂತ ಸಂಪೂರ್ಣ ಭಿನ್ನವಾಗಿರಬಹುದು. ಹೀಗಾಗಿ ಶಾಲೆಗಳು ಅವರಿಗೆ ಕೇವಲ ವಿಷಯ ಜ್ಞಾನವಲ್ಲದೆ, ಎಲ್ಲ ಕ್ಷೇತ್ರಗಳಲ್ಲೂ ಬಳಕೆಯಾಗುವ ಕೌಶಲ್ಯಗಳನ್ನು ಕಲಿಸಬೇಕು. ಕ್ಯಾರಿಯರ್ ಕೌನ್ಸೆಲಿಂಗ್, ಯೂನಿವರ್ಸಿಟಿ ಎಕ್ಸಿಬಿಷನ್‌ಗಳು, ವಿವಿಧ ಕ್ಷೇತ್ರಗಳ ತಜ್ಞರ ಜೊತೆ ಸಂವಾದ ಸೇರಿದಂತೆ ಹಲವು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಮತ್ತು ವೃತ್ತಿ ಆಯ್ಕೆಗಳ ಬಗ್ಗೆ ಅರಿವು ಅಗತ್ಯ.

ನಾಯಕತ್ವದ ಜತೆ ಜವಾಬ್ದಾರಿಯೂ ಮುಖ್ಯ

ಆತ್ಮವಿಶ್ವಾಸಕ್ಕೆ ಜವಾಬ್ದಾರಿ ಜೊತೆಯಾಗಬೇಕು. ವಿದ್ಯಾರ್ಥಿಗಳಿಗೆ ಕೇವಲ ಹೆಸರಿನ ಹುದ್ದೆ ನೀಡುವ ಬದಲು, ಕಾರ್ಯಕ್ರಮ ನಿರ್ವಹಣೆ, ಪ್ರಾಜೆಕ್ಟ್‌ಗಳು, ಶಾಲಾ ಪ್ರತಿನಿಧಿತ್ವ ಮತ್ತು ಸಮುದಾಯ ಸೇವೆಯಂತಹ ನೈಜ ಜವಾಬ್ದಾರಿಗಳನ್ನು ನೀಡಬೇಕು. ಯಾಕಂದ್ರೆ ನಾಯಕತ್ವ ಅಂದ್ರೆ ಮುಂದೆ ನಿಂತು ಆದೇಶ ನೀಡೋದು ಮಾತ್ರವಲ್ಲ; ಇತರರ ಮಾತು ಕೇಳುವುದು, ಜವಾಬ್ದಾರಿ ಹೊರುವುದು ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವುದೂ ಹೌದು.
ಹೀಗಾಗಿ, ಒಂದು ಶಾಲೆಯ ದೊಡ್ಡ ಸಾಧನೆ ಅದರ ನೋಟಿಸ್‌ ಬೋರ್ಡ್‌ನಲ್ಲಿರುವ ಪ್ರಶಸ್ತಿಗಳಲ್ಲ. ಆ ಶಾಲೆಯಿಂದ ಹೊರಬರುವ ವಿದ್ಯಾರ್ಥಿಗಳಲ್ಲಿ ಇರುವ ಆತ್ಮವಿಶ್ವಾಸ, ಉತ್ತಮ ಗುಣ, ಸಾಮರ್ಥ್ಯ ಮತ್ತು ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಮನೋಭಾವವೇ ನಿಜವಾದ ಯಶಸ್ಸು.