ಬಿಸಿಲಿನಲ್ಲಿ ಸೈಕಲ್ ತುಳಿಯುತ್ತಿದ್ದ ವಿದೇಶಿಗನನ್ನು ಮಜ್ಜಿಗೆ ಕುಡಿಯಲು ಮನೆಗೆ ಆಹ್ವಾನಿಸಿದ ಭಾರತೀಯ
- ಹರಿಯಾಣದ ಹಳ್ಳಿಯೊಂದರಲ್ಲಿ ಸೈಕಲ್ ತುಳಿಯುತ್ತಿದ್ದ ಡಂಕನ್ ಇವಾನ್ಸ್
- ಬಿಸಿಲಿನಲ್ಲಿ ಸೈಕಲ್ ತುಳಿಯುತ್ತಿದ್ದ ವಿದೇಶಿಗನನ್ನು ಮಜ್ಜಿಗೆ ಕುಡಿಯಲು ಮನೆಗೆ ಆಹ್ವಾನಿಸಿದ ಭಾರತೀಯ
- ಮಜ್ಜಿಗೆ ಕುಡಿದು ಭಾರತೀಯರ ಹೃದಯವಂತಿಕೆಗೆ ಮರುಳಾದ ಡಂಕನ್
ವೈರಲ್: ವಸುದೈವ ಕುಟುಂಬಕಂ, ಅತಿಥಿ ದೇವೋ ಭವ ಎನ್ನುವುದು ಭಾರತೀಯರು ನಂಬುವ ಸಿದ್ದಾಂತವಾಗಿದೆ. ಈಗ ಈ ಸಿದ್ದಾಂತವನ್ನು ಪಾಲಿಸಿದ ವ್ಯಕ್ತಿಯೊಬ್ಬನ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಬಿಸಿಲಿದೆ ಸ್ವಲ್ಪ ಮಜ್ಜಿಗೆ ಕುಡಿ!
ಬ್ರಿಟಿಷ್ ಪ್ರವಾಸಿಗ ಡಂಕನ್ ಇವಾನ್ಸ್ ಎನ್ನುವಾತ ಭಾರತದ ಪ್ರವಾಸದಲ್ಲಿದ್ದಾನೆ. ಇವಾನ್ಸ್ ತನ್ನ ಸೈಕಲ್ ಮೂಲಕ ಭಾರತದ ಪರ್ಯಟನೆ ಮಾಡುತ್ತಿದ್ದು, ಹರಿಯಾಣಾದ ಹಳ್ಳಿಗಳಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾಗ, ಇವಾನ್ಸ್ಗೆ ಒಬ್ಬ ವೃದ್ಧ ಎದುರಾಗಿದ್ದಾನೆ.
ವಿದೇಶಿಗನೊಬ್ಬ ಬಿರು ಬಿಸಿಲಿನಲ್ಲಿ ಸೈಕಲ್ ತುಳಿಯುತ್ತಿರುವುದನ್ನು ಕಂಡ ವೃದ್ಧ, ನಮ್ಮೂರಿನಲ್ಲಿ ಬಹಳ ಬಿಸಿಲಿದೆ ನಮ್ಮ ಮನಗೆ ಬಾ, ಒಂದು ಲೋಟ ಮಜ್ಜಿಗೆ ಕುಡಿಯುವಂತೆ ಎಂದು ಆಹ್ವಾನಿಸಿದ್ದಾರೆ. ವಿದೇಶಿಗನೊಂದಿಗೆ ಇಂಗ್ಲೀಷಿನಲ್ಲಿಯೇ ಮಾತನಾಡಿದ ವೃದ್ಧನ ಮಾತಿಗೆ ಬೆಲೆಕೊಟ್ಟು, ಡಂಕನ್ ಭಾರತೀಯನ ಮನೆಗೆ ತೆರಳಿದ್ದಾನೆ.
ಭಾರತೀಯರು ಹೃದಯವಂತರು
ವೃದ್ಧನ ಮಾತಿನಂತೆ ಅವನ ಮನೆಗೆ ತೆರೆಳಿದ ಡಂಕನ್ನಿಗೆ ವೃದ್ಧ ದಂಪತಿಗಳು ಒಂದು ದೊಡ್ಡ ಲೋಟದಲ್ಲಿ ತಾಜಾ, ತಂಪಾದ ಮಜ್ಜಿಗೆಯನ್ನು ನೀಡಿದರು.
ಅದನ್ನು ಕುಡಿದ ಡಂಕನ್, ವೃದ್ಧನಿಗೆ ಧನ್ಯವಾದ ತಿಳಿಸಿ ತನ್ನ ಪ್ರಯಾಣವನ್ನು ಮುಂದುವರೆಸಿದ್ದಾನೆ. ನಂತರ ಈ ಕುರಿತು ವಿಡಿಯೋ ಹಂಚಿಕೊಂಡಿರುವ ಡಂಕನ್, ನನಗೆ ರಸ್ತೆ ಮಧ್ಯೆ ಒಬ್ಬ ವೃದ್ಧ ಮನೆಗೆ ಕರೆದುಕೊಂಡು ಹೋಗಿ ಮಜ್ಜಿಗೆ ಕೊಟ್ಟರು. ಆ ಮಜ್ಜಿಗೆ ತುಂಬಾ ರುಚಿಕರವಾಗಿತ್ತು. ಭಾರತೀಯರು ತುಂಬಾ ಹೃದಯವಂತರು ಮತ್ತು ಭಾರತದಲ್ಲಿ ಈ ರೀತಿಯ ಜನ ಪ್ರತಿ ಊರಿನಲ್ಲಿ ಸಿಗುತ್ತಾರೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
ನೆಟ್ಟಿಗರು ಫುಲ್ ಖುಷ್!
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಹರಿದಾಡಲು ಪ್ರಾರಂಭಿಸಿದ ನಂತರ ನೆಟ್ಟಿಗರು ವೃದ್ಧನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅತಿಥಿ ದೇವೋ ಭವ ಎನ್ನುವುದು ಭಾರತೀಯರ ರಕ್ತದಲ್ಲೇ ಇರುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನಬಹುದು ಎಂದು ಒಬ್ಬ ಬಳಕೆದಾರ ಹೇಳಿದರೆ, ಈ ಅಜ್ಜ ನನ್ನೂರಿನವರು, ಇವರು ಭಾರತೀಯ ಸೇವೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಎಂದು ವೃದ್ಧನ ಪರಿಚಯವನ್ನು ಇನ್ನೊಬ್ಬರು ಮಾಡಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ತಾತನಿಂದಾಗಿ ಭಾರತದ ಖ್ಯಾತಿ ಇನ್ನಷ್ಟು ಹೆಚ್ಚಿದೆ ಎಂದರೆ ಅತಿಶಯೋಕ್ತಿಯಲ್ಲ,(ಏಜನ್ಸೀಸ್).