ಪಂಜಾಬ್: "ದಾನ ಮಾಡಲು ಶ್ರೀಮಂತಿಕೆಯ ಅಗತ್ಯವಿಲ್ಲ, ದೊಡ್ಡ ಮನಸ್ಸಿದ್ದರೆ ಸಾಕು" ಎಂಬ ಮಾತಿಗೆ ಪಂಜಾಬ್‌ನ ಫಜಿಲ್ಕಾ ಜಿಲ್ಲೆಯ ಒಬ್ಬ ವೃದ್ಧ ಭಿಕ್ಷುಕ(Beggar) ಜೀವಂತ ಉದಾಹರಣೆಯಾಗಿದ್ದಾರೆ. ಕಳೆದ ಹಲವು ದಶಕಗಳಿಂದ ರಸ್ತೆಬದಿಯಲ್ಲಿ ಭಿಕ್ಷೆ ಬೇಡುತ್ತಿರುವ ಇವರು, ತಾವು ಕಷ್ಟಪಟ್ಟು ಸಂಗ್ರಹಿಸಿದ ಹಣದಿಂದ ಚಳಿಯಲ್ಲಿ ನಡುಗುತ್ತಿರುವ 500ಕ್ಕೂ ಹೆಚ್ಚು ಬಡವರಿಗೆ ಬೆಚ್ಚಗಿನ ಕಂಬಳಿಗಳನ್ನು ವಿತರಿಸಿದ ಹೃಯದಯಸ್ಪರ್ಶಿ ಘಟನೆ ನಡೆದಿದೆ.
ರಾಜು ಎಂಬ ವೃದ್ಧ ಭಿಕ್ಷುಕ ದಾರಿಯಲ್ಲಿ ಹೋಗುವವರಿಂದ ಕೇವಲ 10 ರೂಪಾಯಿಗಳನ್ನಷ್ಟೇ ಕೇಳುತ್ತಿದ್ದರು. ಯಾರಾದರೂ ಹೆಚ್ಚಿನ ಹಣ ನೀಡಲು ಬಂದರೂ ಅವರು ನಿರಾಕರಿಸುತ್ತಿದ್ದರು. "ನನ್ನ ಗುರಿ ಹಣ ಮಾಡುವುದಲ್ಲ, ಕಷ್ಟದಲ್ಲಿರುವವರಿಗೆ ನೆರವಾಗುವುದು" ಎನ್ನುವುದು ಅವರ ಸರಳ ಸಿದ್ಧಾಂತವಾಗಿತ್ತು. ಹೀಗೆ ಹತ್ತು ಹತ್ತು ರೂಪಾಯಿಗಳನ್ನು ತಿಂಗಳುಗಟ್ಟಲೆ ಕೂಡಿಟ್ಟು, ಸಾವಿರಾರು ರೂಪಾಯಿಗಳನ್ನು ಕೂಡಿ ಇಟ್ಟಿದ್ದಾರೆ.
ಚಳಿಯ ಹೊಡೆತಕ್ಕೆ ಮಿಡಿದ ಹೃದಯ
ಉತ್ತರ ಭಾರತದಲ್ಲಿ ಚಳಿಗಾಲದ ತೀವ್ರತೆ ಹೆಚ್ಚಾದಂತೆ, ಫುಟ್‌ಪಾತ್‌ಗಳಲ್ಲಿ ವಾಸಿಸುವ ನಿರ್ಗತಿಕರು ಅನುಭವಿಸುವ ಕಷ್ಟವನ್ನು ಕಂಡು ಇವರು ಈ ನಿರ್ಧಾರಕ್ಕೆ ಬಂದರು. ತಮ್ಮ ಬಳಿ ಸಂಗ್ರಹವಾಗಿದ್ದ ಒಟ್ಟು ಮೊತ್ತದಿಂದ ಮಾರುಕಟ್ಟೆಯಲ್ಲಿ ಸುಮಾರು 500 ಗುಣಮಟ್ಟದ ಕಂಬಳಿಗಳನ್ನು ಖರೀದಿಸಿ, ನಗರದ ಮೂಲೆ ಮೂಲೆಗಳಲ್ಲಿ ಮಲಗಿದ್ದ ಬಡವರಿಗೆ ತಾವೇ ಖುದ್ದಾಗಿ ಹಂಚಿದ್ದಾರೆ.
ಈ ವೃದ್ಧನ ನಿಸ್ವಾರ್ಥ ಸೇವೆಯನ್ನು ಕಂಡು ಸ್ಥಳೀಯರು ಮತ್ತು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಾವು ತಿನ್ನಲು ಸರಿಯಾದ ಆಹಾರವಿಲ್ಲದಿದ್ದರೂ, ಮೈತುಂಬಾ ಬಟ್ಟೆಯಿಲ್ಲದಿದ್ದರೂ ಇತರರ ಹಸಿವು ಮತ್ತು ಚಳಿಯನ್ನು ಹೋಗಲಾಡಿಸಲು ಇವರು ತೋರಿಸಿದ ಕಾಳಜಿ ದೊಡ್ಡ ಶ್ರೀಮಂತರನ್ನೂ ನಾಚಿಸುವಂತಿದೆ.ಬದುಕಲು ನನಗೇನು ಬೇಕಿಲ್ಲ, ಆದರೆ ನನ್ನ ಕಣ್ಣಮುಂದೆ ಜನರು ಚಳಿಯಿಂದ ನರಳಬಾರದು ಎಂದು ಅವರು ಸರಳವಾಗಿ ಹೇಳುತ್ತಾರೆ.
ಈ ಘಟನೆಯು ಸಮಾಜದಲ್ಲಿ ಇನ್ನೂ ಮಾನವೀಯತೆ ಬದುಕಿದೆ ಎಂಬುದನ್ನು ಸಾಬೀತುಪಡಿಸಿದೆ. ತಮ್ಮ ಜೀವನವನ್ನೇ ಭಿಕ್ಷಾಟನೆಗೆ ಮೀಸಲಿಟ್ಟರೂ, ಸಮಾಜಕ್ಕೆ ಅವರು ನೀಡಿದ ಈ ಕೊಡುಗೆ ಕೋಟ್ಯಂತರ ರೂಪಾಯಿಗಳ ದಾನಕ್ಕಿಂತಲೂ ಮೌಲ್ಯಯುತವಾಗಿದೆ,(ಏಜೆನ್ಸೀಸ್).