2,000 ರೂಪಾಯಿ ಕೊಟ್ಟರೆ ಒಂದು ದಿನ ಜೈಲಿನಲ್ಲಿ ವಾಸ
- 2,000 ರೂಪಾಯಿ ಕೊಟ್ಟರೆ ಒಂದು ದಿನ ಜೈಲಿನಲ್ಲಿ ವಾಸ
- ಖೈದಿಗಳ ತಟ್ಟೆಯಲ್ಲಿ, ಅವರು ತನ್ನುವ ಊಟವನ್ನು ಸವಿಯಲು ಅವಕಾಶ
- ತೆಲಂಗಾಣ ಸರ್ಕಾರದಿಂದ ಜೈಲ್ ಅನುಭವಂ ವಿಶಿಷ್ಟ ಯೋಜನೆ ಜಾರಿ
ಹೈದರಾಬಾದ್: ಜೈಲು, ಸೆರೆಮನೆ ಈ ಶಬ್ದಗಳನ್ನು ಕೇಳಿಸಿಕೊಂಡಾಗ ಅದೊಂದು ನರಕ, ಅದು ಸಮಾಜಘಾತುಕರು ಇರುವ ಸ್ಥಳ. ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಅಪರಾಧಿಗಳ ನಿವಾಸ ಎಂಬೆಲ್ಲಾ ವಿಚಾರಗಳು ನಮ್ಮ ತಲೆಗೆ ಬರುತ್ತದೆ.
ಹಾಗೆಯೇ ಈ ಜೈಲು ಹೇಗಿರುತ್ತದೆ? ಅಲ್ಲಿ ಖೈದಿಗಳು ಹೇಗೆ ವಾಸಿಸುತ್ತಾರೆ? ನಾವು ಒಂದು ದಿನದ ಮಟ್ಟಿಗೆ ಜೈಲಿನಲ್ಲಿ ಇದ್ದರೆ ಹೇಗಿರುತ್ತದೆ? ಎಂಬ ಯೋಚನೆಗಳು ಬಹುತೇಕರ ಮನಸ್ಸಿನಲ್ಲಿ ಬಂದಿರುತ್ತದೆ.
ಈಗ ಈ ರೀತಿಯ ಯೋಚನೆಗಳನ್ನೇ ಬಂಡವಾಳ ಮಾಡಿಕೊಂಡಿರುವ ತೆಲಂಗಾಣ ಸರ್ಕಾರ, 'ಜೈಲ್ ಅನುಭವಂ' (Jail Anubhavham) ಫೀಲ್ ದಿ ಜೈಲ್ (Feel The Jail) ಎನ್ನುವ ವಿಶಿಷ್ಟ ಯೋಜನೆನ್ನು ರೂಪಿಸಿದ್ದು, ಇದರ ಪ್ರಕಾರ ಕೇವಲ 2,000 ರೂಪಾಯಿಗಳನ್ನು ಪಾವತಿಸಿ ಒಂದು ದಿನ ಜೈಲಿನಲ್ಲಿ ವಾಸಿಸುವ ಅವಕಾಶವನ್ನು ಪಡೆಯಬಹುದಾಗಿದೆ.
ನಾಗರಿಕರಿಗೆ ಖೈದಿಗಳಾಗುವ ಅವಕಾಶ!
ಈ ಯೋಜನೆಗೆ ಜೈಲ್ ಅನುಭವಂ ಎಂಬ ಹೆಸರನ್ನು ಇಡಲಾಗಿದ್ದು, 1,000 ರೂಪಾಯಿ ನೀಡಿದರೆ 12 ಗಂಟೆ ಹಾಗೂ 2,000 ರೂಪಾಯಿ ನೀಡಿದರೆ 24 ಗಂಟೆಗಳ ವರೆಗೆ ಜೈಲಿನಲ್ಲಿ ಸಮಯ ಕಳೆಯ ಬಹುದಾಗಿದೆ.
ಈ ಯೋಜನೆಯ ಮೂಲಕ ನಾಗರಿಕರಿಗೆ ಖೈದಿಗಳು ಸಹ ನಮ್ಮ ಸಮಾಜದಲ್ಲಿರುವ ಜೀವಿಗಳೇ ಅವರು ನಮ್ಮಂತೆ ಮನುಷ್ಯರು ಎಂದು ತಿಳಿಸುವ ಜೊತೆಗೆ, ಸಿನಿಮಾದಲ್ಲಿ ತೋರಿಸುವಂತೆ ಜೈಲಿನ ಜೀವನ ಸುಖದಿಂದಲ್ಲ, ಬದಲಾಗಿ ಇಲ್ಲಿ ಎಷ್ಟೊಂದು ಕಷ್ಟದಿಂದ ಕೂಡಿರುತ್ತದೆ ಎನ್ನುವುದನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ.
ಈ ಯೋಜನೆಯಲ್ಲಿ ಪಲ್ಗೊಳ್ಳುವ ನಾಗರಿಕರಿಗೆ ಬೆಡ್ಶೀಟ್, ತಟ್ಟೆ, ಕುಡಿಯುವ ನೀರಿನ ಜೊತೆಗೆ ಜೈಲಿನಲ್ಲಿ ಕೈದಿಗಳು ಏನನ್ನು ತಿನ್ನುತ್ತಾರೋ ಅದನ್ನೇ ಭೋಜನವಾಗಿ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಜೈಲಿರುವುದು ಶಿಕ್ಷೆಗಲ್ಲ; ಮನಪರಿವರ್ತನೆಗೆ
ನಮ್ಮ ಜನರಲ್ಲಿ ಒಂದು ತಪ್ಪು ಕಲ್ಪನೆಯಿದೆ, ಜೈಲು ಎನ್ನುವುದು ಕೇವಲ ತಪ್ಪು ಮಾಡಿದವನಿಗೆ ಶಿಕ್ಷೆ ನೀಡಲು ಇರುವ ಸ್ಥಳವೆಂದು. ಆದರೆ ಕಾನೂನಿನ ಪ್ರಕಾರ ಜೈಲು ಇದು ಖೈದಿಯ ಮನಪರಿವರ್ತನೆಗೆ ಇರುವ ಸ್ಥಳ ಎಂದು ಕರೆಯಲಾಗುತ್ತದೆ.
ಆದ್ದರಿಂದ, ನಾಗರಿಕರಿಗೆ ಒಂದು ದಿನದ ಖೈದಿಯಾಗಲು ಚಂಚಲಗುಡದ ಕೇಂದ್ರ ಕಾರಾಗೃಹದಲ್ಲಿ ಅವಕಾಶ ಕಲ್ಪಿಸಿದ್ದು, ಇಲ್ಲಿರುವ ಕುಖ್ಯಾತ ಖೈದಿಗಳಿಗೆ, ಮಹಿಳೆ ಹಾಗೂ ಪುರುಷರಿಗೆ ಅಂತಯೇ ಈ ಯೋಜನೆಯಡಿ ಜೈಲು ಸೇರುವ ಜನರಿಗೆ ಪ್ರತ್ಯೇಕ ಬ್ಯಾರಕ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ, (ಏಜನ್ಸೀಸ್).