ಜಲಮಂಡಳಿ ಕೊರೆದ ಗುಂಡಿಯಲ್ಲಿ ಬಿದ್ದಿರುವ ಬೈಕ್​ ಮತ್ತು ಸವಾರ ಕಮಲ್​ 
ದೇಶ

ಜಲಮಂಡಳಿ ಕೊರೆದ ಹೊಂಡಕ್ಕೆ ಬಿದ್ದ ಬೈಕ್​ ಸವಾರ: ರಾತ್ರಿಯಿಡೀ ಗುಂಡಿಯಲ್ಲೇ ಒದ್ದಾಡಿ ಪ್ರಾಣಬಿಟ್ಟ ಯುವಕ | Biker

ಪ್ರಮುಖ ಮುಖ್ಯಾಂಶಗಳು

  • ಜಲಮಂಡಳಿ ಕೊರೆದ ಹೊಂಡಕ್ಕೆ ಬಿದ್ದ ಬೈಕ್​ ಸವಾರ
  • ರಾತ್ರಿಇಡೀ ಒದ್ದಾಡಿ ಪ್ರಾಣ ಬಿಟ್ಟ ಯುವಕ
  • ದೆಹಲಿ ಪೊಲೀಸರಿಂದ ಮುಂದುವರಿದ ತನಿಖೆ
  • ಈ ಘಟನೆಗೆ ಬಿಜೆಪಿಯೇ ಕಾರಣ ಎಂದ ಆಮ್​ ಆದ್ಮಿ ಪಾರ್ಟಿ
ನವದೆಹಲಿ: ಪಶ್ಚಿಮ ದೆಹಲಿಯ ಜನಕ್‌ಪುರಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸ್ಥಳದಲ್ಲಿದ್ದ ಬೃಹತ್ ಹೊಂಡದೊಳಗೆ ಮೋಟಾರ್‌ಸೈಕಲ್ ಸವಾರ (Biker) ನೊಬ್ಬ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ (ಫೆ.6) ನಡೆದಿದೆ.
ಮೃತ ಬೈಕ್​ ಸವಾರರನನ್ನು ಕೈಲಾಶ್‌ಪುರಿಯ ನಿವಾಸಿ ಕಮಲ್ ಎಂದು ಗುರುತಿಸಲಾಗಿದ್ದು, ದೆಹಲಿ ಸರ್ಕಾರ ಈ ಪ್ರಕರಣದ ಹೆಚ್ಚಿನ ತನಿಖೆಗೆ ಆದೇಶಿಸಿದೆ ಎಂದು ನಗರಾಭಿವೃದ್ಧಿ ಸಚಿವ ಆಶಿಶ್ ಸೂದ್ ಹೇಳಿದ್ದಾರೆ. ಮೃತ ವ್ಯಕ್ತಿಯ ಸಂಬಂಧಿಕರ ಪ್ರಕಾರ, ಕಮಲ್ ಗುರುವಾರ (ಫೆ.5) ತಡರಾತ್ರಿ ರೋಹಿಣಿ ಪ್ರದೇಶದಲ್ಲಿರುವ ತನ್ನ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ಹೇಳಿದ್ದಾರೆ.
ಆದರೆ ಮಗ ಮನೆಗೆ ಬಾರದಿದ್ದಾಗ, ಮನೆ ಮಂದಿ ಕಮಲ್​ನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಜನಕಪುರಿ, ಸಾಗರ್‌ಪುರ, ವಿಕಾಸ್ ಪುರಿ ಮತ್ತು ರೋಹಿಣಿ ಸೇರಿದಂತೆ ಹಲವಾರು ಪೊಲೀಸ್ ಠಾಣೆಗಳಿಗೆ ರಾತ್ರಿಯಿಡೀ ಭೇಟಿ ನೀಡಿ ದೂರನ್ನು ದಾಖಲಿಸಿದ್ದಾರೆ. ಶುಕ್ರವಾರ (ಫೆ.6) ಬೆಳಿಗ್ಗೆ 7.30 ರ ಸುಮಾರಿಗೆ ಪೊಲೀಸರಿಂದ ಅಪಘಾತದ ಬಗ್ಗೆ ಮಾಹಿತಿ ದೊರೆತಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಅವರು ಸ್ಥಳಕ್ಕೆ ತಲುಪಿದಾಗ, ಕಮಲ್ ಮೃತದೇಹ ಮತ್ತು ಮೋಟಾರ್ ಸೈಕಲ್ ಹೊಂಡದಲ್ಲಿ ಪತ್ತೆಯಾಗಿದೆ.
ಆ ಜಾಗದಲ್ಲಿ ದೆಹಲಿ ಜಲ ಮಂಡಳಿ ಕಾರ್ಯ ನಡೆಯುತ್ತಿದ್ದು, ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ಅಪಘಾತ ಸಂಭವಿದೆ, ಇಲ್ಲವೇ ಯಾರಾದರೂ ಕಮಲ್​ನನ್ನು ಕೊಲೆ ಮಾಡಿ ಈ ಹೊಂಡದಲ್ಲಿ ಎಸೆದು ಹೋಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಎಲ್ಲಾ ಕೋನಗಳಲ್ಲಿ ತನಿಖೆ ನಡೆಯುತ್ತಿದೆ: ದೆಹಲಿ ಪೊಲೀಸ್​

ಘಟನೆಗೆ ಪ್ರತಿಕ್ರಿಯಿಸಿದ ದೆಹಲಿ ಜಲ ಮಂಡಳಿ, ಜನಕಪುರಿಯ ಪೈಪ್‌ಲೈನ್ ಪುನರ್ವಸತಿ ಯೋಜನಾ ಸ್ಥಳದಲ್ಲಿ ಸಂಭವಿಸಿದ ದುರಂತ ಅಪಘಾತದ ಬಗ್ಗೆ ದುಃಖ ವ್ಯಕ್ತ ಪಡಿಸುತ್ತಾ, ಮೃತರ ಕುಟುಂಬಕ್ಕೆ ತನ್ನ ಸಂತಾಪ ಸೂಚಿಸಿದೆ.
ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ಮಂಡಳಿ ತಿಳಿಸಿದೆ ಮತ್ತು ಯಾವುದೇ ಮಟ್ಟದಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ. ಎಲ್ಲಾ ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ನಿಯಮಿತ ತಪಾಸಣೆ ನಡೆಸಲಾಗುತ್ತಿದೆ ಎಂದು ಅದು ಹೇಳಿದೆ.
ಪ್ರಾಥಮಿಕ ತನಿಖೆಗಳು ಈ ಗುಂಡಿ ದೆಹಲಿ ಜಲ ಮಂಡಳಿಯ ಕೆಲಸದ ಸ್ಥಳದ ಭಾಗವಾಗಿದೆ ಮತ್ತು ಅದನ್ನು ಸರಿಯಾಗಿ ಬ್ಯಾರಿಕೇಡ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಗೆ ನಿಖರವಾದ ಕಾರಣಗಳನ್ನು ಖಚಿತಪಡಸಿಕೊಳ್ಳಲು ನಾವು ಎಲ್ಲಾ ರೀತಿಯಲ್ಲಿ ತನಿಖೆ ನಡೆಸುತ್ತಿದೆವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಈ ಘಟನೆಗೆ ಬಿಜೆಪಿಯೇ ಕಾರಣ: ಎಎಪಿ

ಕಮಲ್​ ಅವರ ಸಾವಿಗೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್, ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಅಪಘಾತದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, ಭಾರದ್ವಾಜ್ ಒಬ್ಬ ಅಮಾಯಕ ಬೈಕ್ ಸವಾರ ರಸ್ತೆಯ ಆಳವಾದ ಗುಂಡಿಗೆ ಬಿದ್ದು, ಸಿಲುಕಿಕೊಂಡು, ರಾತ್ರಿಯಿಡೀ ಅಲ್ಲಿಯೇ ಒದ್ದಾಡಿ ಸಾವನ್ನಪ್ಪಿದ್ದಾನೆ ಎಂದು ಬರೆದುಕೊಂಡಿದ್ದಾರೆ. ದೆಹಲಿಯ ಬಿಜೆಪಿ ಸರ್ಕಾರ ನೋಯ್ಡಾ ಘಟನೆಯಿಂದ ಏನನ್ನೂ ಕಲಿಯಲಿಲ್ಲ. ಅವರು ಪ್ರತಿದಿನ ಸುಳ್ಳು ಹೇಳುತ್ತಲೇ ಇರುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
ನೋಯ್ಡಾದಲ್ಲಿ ಇದೇ ರೀತಿಯ ಪ್ರಕರಣ ನಡೆದ ವಾರಗಳ ನಂತರ ಈ ಘಟನೆ ನಡೆದಿದೆ, ಅಲ್ಲಿ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಅವರ ಕಾರು ನಿರ್ಮಾಣ ಸ್ಥಳದ ಬಳಿ ನೀರು ತುಂಬಿದ ಗುಂಡಿಗೆ ಬಿದ್ದು ಸಾವನ್ನಪ್ಪಿದರು,(ಏಜನ್ಸೀಸ್​).