ದೀಪಾವಳಿ ಪಟಾಕಿ ನಿಷೇಧ ಕುರಿತು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ 
ದೇಶ

ದೀಪಾವಳಿ ಹಬ್ಬಕ್ಕೂ ಮುನ್ನವೇ ಬಿಗ್ ಶಾಕ್!: ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ಬಾಂಬೆ ಹೈಕೋರ್ಟ್ ನಿಷೇಧ! Firecrackers Ban

ದೀಪಾವಳಿ ಹಬ್ಬಕ್ಕೂ ಮುನ್ನವೇ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು. ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದು, ಡಿಜೆ ಮತ್ತು ಲೇಸರ್ ಬಳಕೆ ನಿಷೇಧಿಸಿ ಆದೇಶ; ಮಾರಾಟಕ್ಕಿಲ್ಲ ನಿರ್ಬಂಧ.

ಮುಂಬೈ: ಇನ್ನೇನು ಕೆಲವೇ ದಿನಗಳು ಕಳೆದರೆ ಬೆಳಕಿನ ಹಬ್ಬ ದೀಪಾವಳಿ ಬರುತ್ತಿದೆ. ಆದರೆ ಹಬ್ಬಕ್ಕೂ ಮುನ್ನವೇ ಬಾಂಬೆ ಹೈಕೋರ್ಟ್​ ಶಾಕಿಂಗ್​ ತೀರ್ಪೊಂದನ್ನು ನೀಡಿದೆ. ಶಬ್ದ ಮತ್ತು ಗಾಳಿ ಮಾಲಿನ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಾದ್ಯಂತ ರಸ್ತೆ ಸೇರಿದಂತೆ, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ಹೈಕೋರ್ಟ ನಿಷೇಧ ಹೇರಿ ಆದೇಶಿಸಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ, ಗಿರೀಶ್​ ಕುಲಕರ್ಣಿ ಹಾಗು ನ್ಯಾಯಮೂರ್ತಿ ನೀಲಾ ಗೋಖಲೆ ಅವರ ನ್ಯಾಯಪೀಠ, ಪಟಾಕಿ ನಿಷೇಧದ ಜತೆಗೆ ಡಿಜೆ, ಲೇಸರ್​ ಲೈಟ್​, ಡಾಲ್ಬಿ ಸೌಂಡ್​ಗಳ ಬಳಕೆ ಮಿತಿಯನ್ನು ಕಡಿಮೆ ಮಾಡುವಂತೆ ತಿಳಿಸಿದ್ದು. ಇನ್ನೊಂದು ವಾರದಲ್ಲಿ ಈ ಬಗ್ಗೆ ಕ್ರಮವನ್ನು ಕೈಗೊಂಡು ವರದಿ ಸಲ್ಲಿಸುವಂತೆ ಅಧಿಕಾರ ವರ್ಗಕ್ಕೆ ಕೋರ್ಟ್​ ಖಡಕ್​ ಸೂಚನೆ ನೀಡಿದೆ.

ಗಣೇಶ ಚೌತಿಗೂ ಇದೇ ತೀರ್ಪು!

ಈ ಹಿಂದೆ ನಡೆದಿದ್ದ, ಗೌರಿ-ಗಣೇಶ ಚತುರ್ಥೀ ಸಮಯದಲ್ಲಿ ಕೂಡ ಬಾಂಬೆ ಹೈಕೋರ್ಟ್​ ಇದೇ ಮಾದರಿಯ ತೀರ್ಪನ್ನು ಪ್ರಕಟಿಸಿತ್ತು. ಹಬ್ಬದ ಸಂದರ್ಭದಲ್ಲಿ ಪಟಾಕಿ ಬಳಕೆಯಿಂದಾಗಿ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾದ ಹಿನ್ನಲೆ ಹೈಕೋರ್ಟ್​ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಮಾರಾಟಕ್ಕೆ ಯಾವುದೇ ನಿರ್ಭಂದವಿಲ್ಲ!

ಇದೇ ಸಮಯದಲ್ಲಿ ತನ್ನ ತೀರ್ಪಿನ ಮರ್ಮವನ್ನು ತಿಳಿಸಿದ ನ್ಯಾಯಪೀಠ, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದನ್ನು ನಿರ್ಬಂಧಿಸಿದ ಹಿನ್ನಲೆ, ಪಟಾಕಿ ಮಾರಾಟಕ್ಕೆ ಯಾವುದೇ ನಿಷೇಧ ಹೇರಿಲ್ಲ. ಇಂದಿಗೂ ಸಾವಿರಾರು ಬಡ ಕುಟುಂಬಗಳು ಈ ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಈ ಹಿನ್ನಲೆ ಪಟಾಕಿ ತಯಾರಿಕೆ ಹಾಗೂ ಮಾರಾಟಕ್ಕೆ ಯಾವುದೇ ತೊಂದರೆ ನೀಡಲಾಗುತ್ತಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಯದಂತೆ ನಿಗಾ ವಹಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಹಸಿರು ಪಟಾಕಿಯನ್ನು ಪ್ರೋತ್ಸಾಹಿಸಿ!

ಇದೇ ಸಂದರ್ಭದಲ್ಲಿ ಪಟಾಕಿ ತಯಾರಿಕಾ ಕಂಪನಿಗಳು, ಆದಷ್ಟು ಹಸಿರು ಪಟಾಕಿಗಳನ್ನು ತಯಾರಿಸಿ ಮತ್ತು ಅದನ್ನೇ ಜನರು ಬಳಸುವಂತೆ ನೀವು ಜಾಹೀರಾತನ್ನು ನೀಡಿ, ಪ್ರೋತ್ಸಾಹಿಸಬೇಕೆಂದು ನ್ಯಾಯಪೀಠ ಕಿವಿಮಾತನ್ನು ಹೇಳಿದೆ. ಹಾನಿಕಾರಕ ರಾಸಾಯನಿಕಗಳುಳ್ಳ ಪಟಾಕಿಗಳನ್ನು ಬಳಸುವ ಕಾರಣ, ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಹೀಗಾಗಿ ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಬಳಕೆಗೆ ನಿಷೇಧ ಹೆರಿದ್ದಾಗಿ ನ್ಯಾಯಾಲಯ ತಿಳಿಸಿದೆ, (ಏಜೆನ್ಸೀಸ್​).