ಆಪರೇಷನ್ ಥಿಯೇಟರ್ ಪಕ್ಕದಲ್ಲೇ ಕುಳಿತು 'ಎಣ್ಣೆ ಹೀರುತ್ತಿದ್ದ' ಆಸ್ಪತ್ರೆ ಸಿಬ್ಬಂದಿ: ವೈದ್ಯಕೀಯ ಕಾಲೇಜಿನ ಆಘಾತಕಾರಿ ವಿಡಿಯೋ ವೈರಲ್! Hospital Scandal

ಬಿಹಾರದ ದರ್ಭಾಂಗಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಪಕ್ಕದಲ್ಲೇ ಕುಳಿತು ಮದ್ಯ ಸೇವಿಸುತ್ತಿದ್ದ ನಾಲ್ವರು ಸಿಬ್ಬಂದಿ. ಸಿಸಿಟಿವಿ ವಿಡಿಯೋ ವೈರಲ್, ನಾಲ್ವರ ವಿರುದ್ಧ ಕೇಸ್ ದಾಖಲು.
CCTV footage of staff consuming alcohol near the operation theatre at a hospital in Darbhanga, Bihar.
ಬಿಹಾರದ ದರ್ಭಾಂಗಾ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಬಳಿ ಮದ್ಯ ಸೇವಿಸುತ್ತಿರುವ ಸಿಬ್ಬಂದಿಯ ಸಿಸಿಟಿವಿ ದೃಶ್ಯ
Published on: 

ಬಿಹಾರ: ಭಾರತದಲ್ಲಿ ಇಂಟರ್ನೆಟ್​​ ಕ್ರಾಂತಿಯಾದ ದಿನದಿಂದ ಒಂದಿಲ್ಲೊಂದು ವಿಡಿಯೋಗಳು ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ಕೆಲ ವಿಡಿಯೋಗಳು ಹಾಸ್ಯಭರಿತವಾಗಿದ್ದರೆ, ಇನ್ನು ಕೆಲವು ಆತಂಕಕ್ಕೆ ಕಾರಣವಾಗುತ್ತದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಆಸ್ಪತ್ರೆಗೆ ದಾಖಲಾಗುವ ಮೊದಲು ಹತ್ತು ಬಾರಿ ಯೋಚಿಸುವ ಸ್ಥಿತಿ ನಿರ್ಮಾಣವಾಗಲಿದೆ.

ಬಿಹಾರದ ದರ್ಭಾಂಗಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗಳು ಆಪರೇಷನ್​ ವಾರ್ಡಿನ ಪಕ್ಕದಲ್ಲಿ ಕುಳಿತು ಮದ್ಯ ಸೇವಿಸುತ್ತಿರುವ ಆಘಾತಕಾರಿ ವಿಡಿಯೋವೊಂದು ಈಗ ಎಲ್ಲಡೆ ವೈರಲ್​ ಆಗುತ್ತಿದೆ. ವಿಡಿಯೋನಲ್ಲಿ ಮೂವರು ಮಹಿಳಾ ಸ್ಪಚ್ಚತಾ ಕೆಲಸದವರು ಹಾಗೂ ಒಬ್ಬ ಯುವಕ ಆಸ್ಪತ್ರೆ ಆವರಣದಲ್ಲಿ 'ಎಣ್ಣೆ ಹೀರುತ್ತಿರುವ' ದೃಶ್ಯವನ್ನು ಕಂಡು ನೆಟ್ಟಿಗರು ಗಾಬರಿಯಾಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಕುಕೃತ್ಯ!

ಆಸ್ಪತ್ರೆ ಸಿಬ್ಬಂದಿಗಳು ಒಟ್ಟಿಗೆ ಕುಳಿತುಕೊಂಡು, ಮದ್ಯ ಸೇವಿಸುತ್ತಿರುವ ವಿಡಿಯೋ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಲ್ಲಿ ಒಬ್ಬ ಮಹಿಳೆ ಸಾರಾಯಿ ಪ್ಯಾಕೆಟ್​ ಅನ್ನು ಹರಿದು, ಗ್ಲಾಸ್​​ಗೆ ಮದ್ಯವನ್ನು ಸುರಿಯುತ್ತಿದ್ದರೆ, ಇನ್ನೊಬ್ಬಳು ಕೂಲ್ ಡ್ರಿಂಕ್​ಅನ್ನು ಮದ್ಯಕ್ಕೆ ಬೆರೆಸುತ್ತಿದ್ದಾಳೆ. ನಂತರ ಇಲ್ಲಿಗೆ ಆಗಮಿಸುವ ಮೂರನೇ ಮಹಿಳೆ ಹಾಗೂ ಯುವಕ ಸೇರಿ ನಾಲ್ವರು ಕುಳಿತು ಕುಡಿದಿದ್ದಾರೆ.

ಈ ಎಲ್ಲಾ ಘಟನೆ ಆಪರೇಷನ್​ ಥಿಯೇಟರ್​ ಆಚೆಗಿನ ವರಾಂಡಾದಲ್ಲಿಯೇ ನಡೆದಿದೆ ಎಂದು ಹೇಳಲಾಗುತ್ತಿದ್ದು, ಮದ್ಯದ ಮಾರಾಟಕ್ಕೆ ಅನುಮತಿ ಇಲ್ಲದ, ಡ್ರೈ ಸ್ಟೇಟ್​ ಬಿಹಾರದಲ್ಲಿ ಈ ಮದ್ಯದ ಪ್ಯಾಕೆಟ್​ ಹೇಗೆ ದೊರೆಯಿತು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಮಾಹಿತಿ ಪ್ರಕಾರ, ಮದ್ಯ ಸೇವಿಸಿದ ಈ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ಹಾಗೆಯೇ, ಆಸ್ಪತ್ರೆ ಆಡಳಿತ ಕೂಡ ತನ್ನದೇ ಆದ ಪ್ರತ್ಯೇಕ ತನಿಖೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

Also Read
"ಮೈಕ್ ಹಿಡಿದವರೆಲ್ಲಾ ಪತ್ರಕರ್ತರಲ್ಲ, ಕೇವಲ ರೀಲ್ ಮೇಕರ್ಸ್!": ಸುಪ್ರೀಂ ಕೋರ್ಟ್‌ನಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕಿಡಿ! Tushar Mehta
CCTV footage of staff consuming alcohol near the operation theatre at a hospital in Darbhanga, Bihar.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ, ನೋಡಿದ ನೆಟ್ಟಿಗರು ಹೌಹಾರಿದ್ದಾರೆ. ಆಸ್ಪತ್ರೆ ಆವರಣದಲ್ಲೇ ಎಣ್ಣೆ ಹೀರುತ್ತಾರೆಂದರೆ, ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.

ಇವರು ಹೀಗೆ ನಶೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ತೊಂದರೆ ಕೊಡುವುದಿಲ್ಲ ಎನ್ನುವುದುಕ್ಕೆ ಯಾವ ಗ್ಯಾರಂಟಿ ಇದೆ ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಮೊದಲು ಈ ನಾಲ್ವರನ್ನು ಕೆಲಸದಿಂದ ತೆಗೆದು ಹಾಕಿ. ಹಾಗೆಯೇ, ಇವರ ಮೇಲೆ ಕಠಿಣ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕೆಂದು ಮತ್ತೊಬ್ಬರು ಆಗ್ರಹಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net