ಸ್ಕಾಲರ್‌ಶಿಪ್ ಹಣ ಪಡೆಯಲು ಹೋದ 7ನೇ ತರಗತಿ ವಿದ್ಯಾರ್ಥಿನಿ ಬ್ಯಾಂಕ್ ಖಾತೆಯಲ್ಲಿ 759 ಕೋಟಿ ರೂ. ಪತ್ತೆ! ಮುಂದೇನಾಯ್ತು? Scholarship 
ದೇಶ

ಸ್ಕಾಲರ್‌ಶಿಪ್ ಹಣ ಪಡೆಯಲು ಹೋದ 7ನೇ ತರಗತಿ ವಿದ್ಯಾರ್ಥಿನಿ ಬ್ಯಾಂಕ್ ಖಾತೆಯಲ್ಲಿ 759 ಕೋಟಿ ರೂ. ಪತ್ತೆ! ಮುಂದೇನಾಯ್ತು? Scholarship

ಪ್ರಮುಖ ಮುಖ್ಯಾಂಶಗಳು

  • ಸ್ಕಾಲರ್‌ಶಿಪ್ ಹಣ ಪಡೆಯಲು ಹೋದ ಏಳನೇ ತರಗತಿ ವಿದ್ಯಾರ್ಥಿನಿ ಬ್ಯಾಂಕ್ ಖಾತೆಯಲ್ಲಿ ಪತ್ತೆಯಾಯಿತು 759 ಕೋಟಿ ರೂಪಾಯಿ
  • ಹರಿದ ಶೂ ಬದಲಿಸಲು 800 ರೂಪಾಯಿ ಡ್ರಾ ಮಾಡಲು ಹೋದ ಬಡ ಬಾಲಕಿಗೆ ಕಾದಿತ್ತು ಕೋಟ್ಯಂತರ ರೂಪಾಯಿಯ ಶಾಕ್
  • ಬಾಲಕಿಯ ಖಾತೆಗೆ ಬಂದ 759 ಕೋಟಿ ರೂಪಾಯಿ ಬೆನ್ನಲ್ಲೇ ದೇಶದ ವಿವಿಧೆಡೆ ಬ್ಯಾಂಕ್ ಗ್ರಾಹಕರಿಗೆ ಸಿಕ್ಕಿತು ನೂರಾರು ಕೋಟಿ
  • ವೃದ್ಧ ಮತ್ತು ಬಾಲಕಿ ಖಾತೆಗೆ ನೂರಾರು ಕೋಟಿ ಜಮೆ ಬ್ಯಾಂಕಿಂಗ್ ವ್ಯವಸ್ಥೆಯ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಮೂಡಿದ ಆತಂಕ
ಕೋಲ್ಕತ: ಬ್ಯಾಂಕ್ ಖಾತೆಗೆ ಜಮೆ ಆಗುವ ಸ್ಕಾಲರ್‌ಶಿಪ್ ( Scholarship ) ಹಣವನ್ನಷ್ಟೇ ನಂಬಿಕೊಂಡು ಬ್ಯಾಂಕ್ ಮೆಟ್ಟಿಲೇರಿದ್ದ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಹಾಲ್ಬರಿ ನಿವಾಸಿ, ಏಳನೇ ತರಗತಿ ವಿದ್ಯಾರ್ಥಿನಿ ಸುಪರ್ಣಾ ರಾಯ್‌ಗೆ ಅಲ್ಲಿ ಕಾದಿದ್ದು ಬದುಕಿನ ಅತ್ಯಂತ ದೊಡ್ಡ ಶಾಕ್!
ತನ್ನ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಹೋದ ಪುಟ್ಟ ಬಾಲಕಿ, ಬ್ಯಾಂಕ್ ಬ್ಯಾಲೆನ್ಸ್ ತಪಾಸಣೆ ಮಾಡಿದಾಗ ಅಲ್ಲಿ ಬರೋಬ್ಬರಿ 759 ಕೋಟಿ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿದ್ದು, ಇದನ್ನು ಕಂಡು ಸ್ವತಃ ಬಾಲಕಿ ಮತ್ತು ಬ್ಯಾಂಕ್ ಅಧಿಕಾರಿಗಳು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಪುಟ್ಟ ಬಾಲಕಿ ಸುಪರ್ಣಾ ತಂದೆ ಕೇರಳದಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅತ್ಯಂತ ಬಡತನದ ಕುಟುಂಬ ಇವರದ್ದಾಗಿದೆ. ಸರ್ಕಾರದ ವತಿಯಿಂದ ಬರಬೇಕಿದ್ದ ಕೇವಲ 800 ರೂಪಾಯಿ ವಿದ್ಯಾರ್ಥಿವೇತನ (ಸ್ಕಾಲರ್‌ಶಿಪ್) ಜಮೆಯಾಗಿದೆ ಎಂಬ ಮೊಬೈಲ್ ಸಂದೇಶ ಬಂದ ತಕ್ಷಣ ಇಡೀ ಕುಟುಂಬ ಸಡಗರದಿಂದ ಬ್ಯಾಂಕ್‌ನತ್ತ ಹೆಜ್ಜೆ ಹಾಕಿತ್ತು.
ಈ ಬಡ ಕುಟುಂಬಕ್ಕೆ ಆ 800 ರೂಪಾಯಿ ಕೂಡ ಅತ್ಯಂತ ದೊಡ್ಡ ಮೊತ್ತವಾಗಿತ್ತು. ಬಾಲಕಿಯ ಹರಿದುಹೋಗಿದ್ದ ಹಳೆಯ ಶಾಲಾ ಶೂಗಳ ಜಾಗಕ್ಕೆ ಹೊಸ ಶೂಗಳನ್ನು ಖರೀದಿಸಬೇಕು ಎನ್ನುವ ಹಂಬಲ ಅವರದ್ದಾಗಿತ್ತು. ಇದೇ ಕಾರಣಕ್ಕಾಗಿ ಶನಿವಾರದಂದು ಸುಪರ್ಣಾ ತನ್ನ ಅಣ್ಣನೊಂದಿಗೆ ಸಮೀಪದ ಗ್ರಾಹಕ ಸೇವಾ ಕೇಂದ್ರಕ್ಕೆ (ಸಿಎಸ್‌ಸಿ) ತೆರಳಿ ತನ್ನ ಖಾತೆಯಿಂದ 900 ರೂಪಾಯಿಗಳನ್ನು ಹಿಂಪಡೆದಿದ್ದಾಳೆ. ಆದರೆ, ಹಣ ಡ್ರಾ ಮಾಡಿದ ನಂತರ ಖಾತೆಯಲ್ಲಿದ್ದ ಒಟ್ಟು ಮೊತ್ತವನ್ನು ಪರಿಶೀಲಿಸಿದಾಗ ಅಲ್ಲಿ ಬರೋಬ್ಬರಿ 759 ಕೋಟಿ ರೂಪಾಯಿಗೂ ಅಧಿಕ ಬ್ಯಾಲೆನ್ಸ್ ಇರುವುದು ಪತ್ತೆಯಾಗಿದ್ದು, ಇಡೀ ಕುಟುಂಬವೇ ದಿಗಿಲುಗೊಂಡಿದೆ.
ಈ ಅಚ್ಚರಿಯ ವಿಷಯ ತಿಳಿಯುತ್ತಿದ್ದಂತೆಯೇ ಹಳದಿಹಾರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದು ಅತ್ಯಂತ ದೊಡ್ಡ ಚರ್ಚೆಯ ವಿಷಯವಾಯಿತು. ತಮ್ಮಂತಹ ಕಡುಬಡವರ ಖಾತೆಗೆ ಇಷ್ಟೊಂದು ಬೃಹತ್ ಮೊತ್ತದ ಹಣ ಹೇಗೆ ಬಂತು ಎಂಬುದರ ಬಗ್ಗೆ ತಮಗೆ ಯಾವುದೇ ಕಲ್ಪನೆಯೇ ಇಲ್ಲ ಮತ್ತು ಈ ಅನಿರೀಕ್ಷಿತ ಘಟನೆಯಿಂದ ತಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ ಎಂದು ಬಾಲಕಿಯ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಈ ನಿಗೂಢ ವಿದ್ಯಮಾನದ ಕುರಿತು ತನಿಖೆ ಆರಂಭಿಸಿದ್ದಾರೆ. ಬ್ಯಾಂಕಿನ ತಾಂತ್ರಿಕ ದೋಷ ಅಥವಾ ಸಿಸ್ಟಮ್ ಸಾಫ್ಟ್‌ವೇರ್‌ನಲ್ಲಿ ಉಂಟಾಗಿರುವ ತಪ್ಪುಗಳಿಂದ ಈ ರೀತಿ ಆಗಿದೆಯೇ ಎಂಬ ಆಯಾಮದಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸೇರಿ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ. ಆದರೆ, ಆತಂಕದ ವಿಷಯವೆಂದರೆ ಇದೇ ರೀತಿಯ ವಿಚಿತ್ರ ಪ್ರಕರಣಗಳು ದೇಶದ ಇತರೆಡೆಗಳಲ್ಲೂ ಸಾಲು ಸಾಲಾಗಿ ವರದಿಯಾಗುತ್ತಿರುವುದು ತನಿಖಾಧಿಕಾರಿಗಳ ನಿದ್ದೆಗೆಡಿಸಿದೆ.
ಇದಕ್ಕೆ ಪೂರಕವೆಂಬಂತೆ ಜಲ್ಪೈಗುರಿ ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಯ ಲಾಭ ಪಡೆಯಲು ಬ್ಯಾಂಕ್‌ಗೆ ಬಂದಿದ್ದ ಮಹಿಳೆಯೊಬ್ಬರ ಖಾತೆಯಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿದೆ. ಮತ್ತೊಂದೆಡೆ ಬಿಹಾರದಲ್ಲಿ ಪಿಂಚಣಿ ಹಣ ಪಡೆಯಲು ಬಂದಿದ್ದ 82 ವರ್ಷದ ವೃದ್ಧ ಕಾಮೇಶ್ವರ್ ಮಿಶ್ರಾ ಅವರ ಖಾತೆಯಲ್ಲೂ ಬರೋಬ್ಬರಿ 759 ಕೋಟಿ ರೂಪಾಯಿ ಪತ್ತೆಯಾಗಿ ಭೀತಿ ಸೃಷ್ಟಿಸಿದೆ. ಒಂದರ ಹಿಂದೊಂದರಂತೆ ವರದಿಯಾಗುತ್ತಿರುವ ಇಂತಹ ಗಂಭೀರ ಪ್ರಕರಣಗಳು ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಅನುಮಾನಗಳನ್ನು ಮೂಡಿಸಿದೆ, (ಏಜೆನ್ಸೀಸ್​).