Telangana wedding for Dead Son
- 2003ರಲ್ಲಿ ಮೃತಪಟ್ಟ ಮಗನಿಗಾಗಿ ಪ್ರತಿವರ್ಷ ಮದುವೆ ವಾರ್ಷಿಕೋತ್ಸವ ಮಾಡಿಸುವ ಕುಟುಂಬ
- ಪ್ರೀತಿಯ ಮದುವೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳು
- ಮನೆಯಲ್ಲೇ ದೇವಸ್ಥಾನ ಕಟ್ಟಿ ವಿಗ್ರಹ ಪ್ರತಿಷ್ಠಾಪಿಸಿ ವಿವಾಹ ಶಾಸ್ತ್ರ ಮಾಡಿಸುವ ಕುಟುಂಬ
ಮಹಬೂಬಾಬಾದ್: ಭಾರತದಲ್ಲಿ ಜಾತಿ ಕಾರಣಕ್ಕೆ ಅಥವಾ ಆಸ್ತಿ, ಅಂತಸ್ತಿನ ಕಾರಣಕ್ಕೆ ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಬಿಡದ ಘಟನೆಗಳು ಎಷ್ಟೋ ಇವೆ. ಕುಟುಂಬಸ್ಥರ ವಿರುದ್ಧವಾಗಿ ಮದುವೆಯಾದವರನ್ನು ಕೊಂದ ಉದಾಹರಣೆಯೂ ಇವೆ. ಪ್ರೇಮಿಗಳು ಆತ್ಮಹತ್ಯೆ (Lovers Suicide) ಮಾಡಿಕೊಂಡಿರುವ ಪ್ರಸಂಗವೂ ಇದೆ.
ತೆಲಂಗಾಣದಲ್ಲೊಂದು ಕುಟುಂಬವು ಪ್ರೀತಿ ಸಾವನ್ನು ಮೀರಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. ಹೌದು ಮಹಬೂಬಾಬಾದ್ನಲ್ಲಿ 23 ವರ್ಷಗಳಿಂದ ಮೃತ ಮಗನಿಗೆ ಶಾಸ್ತ್ರೋಕ್ತವಾಗಿ (Telangana wedding for Dead Son) ಮದುವೆ ಮಾಡುತ್ತಿರುವ ಘಟನೆಯೂ ಸದ್ಯ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.
ಪ್ರೀತಿ ಸಿಗದೆ ಆತ್ಮಹತ್ಯೆ
ಮೃತ ರಾಮ್ ಕೋಟಿ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಲಾಲು ಮತ್ತು ಸುಕ್ಕಮ್ಮ ದಂಪತಿಯ ಪುತ್ರ. ತಾನು ಪ್ರೀತಿಸಿದ ಹುಡುಗಿಯ ಮನೆಯವರು ಮದುವೆ ನಿರಾಕರಿಸಿದರು ಎಂಬ ನೋವಿನಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಕೆಲವು ದಿನಗಳ ನಂತರ ಆತನ ಅಗಲಿಕೆ ತಡೆಯಲಾಗದೆ ಆಕೆಯೂ ಪ್ರಾಣ ಬಿಟ್ಟಳು. ಇದರಿಂದ ಎರಡೂ ಕುಟುಂಬವೂ ನೊಂದು, ತಾವು ಮಾಡಿದ ತಪ್ಪಿನ ಬಗ್ಗೆ ಪಶ್ಚಾತಾಪ ಪಟ್ಟರು.
ಮಗನ ನೆನಪಿನಲ್ಲಿ ದಿನ ದೂಡುತ್ತಿದ್ದ ತಾಯಿಗೆ ಒಮ್ಮೆ ಆತನೇ ಕನಸಿನಲ್ಲಿ ಬಂದು, ತನಗೊಂದು ದೇವಸ್ಥಾನ ನಿರ್ಮಿಸಿ, ಶಾಸ್ತ್ರೋಕ್ತವಾಗಿ ಮದುವೆ ಮಾಡುವಂತೆ ಕೇಳಿಕೊಂಡಿದ್ದನಂತೆ. ಮಗನ ಆಸೆಯಂತೆ ಆಕೆ ತಮ್ಮ ಮನೆಯಲ್ಲಿಯೇ ಒಂದು ಗುಡಿ ನಿರ್ಮಿಸಿ. ಮಗ ರಾಮ್ ಕೋಟಿ ಹಾಗೂ ಆತನ ಪ್ರೇಯಸಿಯ ಪ್ರತಿಮೆ ಮಾಡಿ ಮದುವೆ ಮಾಡಿಸುತ್ತಿದ್ದಾರೆ. ಕಳೆದ 23 ವರ್ಷಗಳಿಂದ ಈ ಸಂಪ್ರದಾಯ ರೂಢಿಸಿಕೊಂಡು ಬಂದಿದ್ದಾರೆ.
ರಾಮನವಮಿ ದಿನದಂದು ಮದುವೆ ಸಂಭ್ರಮ
ರಾಮನವಮಿಯಂದು ರಾಮ ಕಲ್ಯಾಣ ವಿವಾಹೋತ್ಸವದಂತೆ, ಮಗ ಮತ್ತು ಸೊಸೆಯ ವಿವಾಹವನ್ನು ನೆರವೇರಿಸುತ್ತಾರೆ. ಅರಿಶಿನ-ಕುಂಕುಮ, ಪೂಜೆ ಮಾಡಿ ವಿವಾಹ ಶಾಸ್ತ್ರವನ್ನು ಮುಗಿಸುತ್ತಾರೆ. ಮೊದಲು ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ಈ ಆಚರಣೆ ಸದ್ಯ ಇಡೀ ಗ್ರಾಮವನ್ನೇ ಗಮನ ಸೆಳೆಯುವಂತೆ ಮಾಡಿದೆ. ಪ್ರತಿವರ್ಷವೂ ಈ ವಾರ್ಷಿಕೋತ್ಸವ ನೋಡಲು ಊರಿನ ಜನರ ದಂಡೇ ಅವರ ಮನೆಗೆ ಬರುವ ಪ್ರತೀತಿ ಇದೆ.
ನಾಂದೇಡ್ನಲ್ಲಿ ಮೃತ ಪ್ರಿಯಕರನ್ನೇ ಮದುವೆಯಾಗಿದ್ದ ಯುವತಿ
ಮಹಾರಾಷ್ಟ್ರದ ನಾಂದೇಡ್ನಲ್ಲಿ ಯುವತಿಯೊಬ್ಬಳು ಮೃತ ಪ್ರಿಯಕರನ ಜೊತೆ ಮದುವೆ ಮಾಡಿಕೊಂಡ ಘಟನೆ ನಡೆದದಿತ್ತು. ದಲಿತ ಯುವಕನನ್ನು ಮಗಳು ಪ್ರೇಮಿಸುತ್ತಿದ್ದಾಳೆ ಎಂದು ಕುಟುಂಬ ಯುವಕನನ್ನು ಮದುವೆ ವಿಚಾರದ ಮಾತುಕತೆ ಎಂದು ಕರೆಸಿಕೊಂಡು ಕೊಲೆ ಮಾಡಿದ್ದ ಘಟನೆ 2025 ನವೆಂಬರ್ನಲ್ಲಿ ನಡೆದಿತ್ತು. ಕುಟುಂಬದ ನೀಚ ಕೃತ್ಯಕ್ಕೆ ಆಕ್ರೋಶಗೊಂಡ ಯುವತಿ. ಆತನ ಮೃತದೇಹವನ್ನೇ ಮದುವೆಯಾಗಿ ನೋಡು ನಾವು ಅವರನ್ನು ಸೋಲಿಸಿದ್ದೇವೆ. ನಮ್ಮ ಪ್ರೀತಿ ಗೆದ್ದಿದೆ. ನನ್ನ ಸಹೋದರರು, ತಂದೆ ಸೋತಿದ್ದಾರೆ ಎಂದು ಅತ್ತಿದ್ದಳು. ಕೊನೆಗೆ ಅವರ ಮನೆಯ ಸೊಸೆಯಾಗಿ ಕೊನೆಗಾಲದವರೆಗೂ ಬದುಕುತ್ತೇನೆ ಎಂದು ಶಪಥ ಹೂಡಿದ್ದಳು. ಈ ಘಟನೆಯೂ ಎಲ್ಲರ ಕರುಳು ಕಿವುಚುವಂತೆ ಮಾಡಿತ್ತು, (ಏಜೆನ್ಸೀಸ್).