ರಸ್ತೆ ಸಂಪರ್ಕವಿಲ್ಲದ ಕಾರಣ ಭಾರವಾದ ಮದುವೆ ಲೆಹೆಂಗಾದಲ್ಲೇ 18 ಕಿಲೋಮೀಟರ್ ಬೆಟ್ಟದ ಹಾದಿ ಕ್ರಮಿಸಿದ ನವವಧು ಶರ್ಮಿಳಾ. 
ದೇಶ

ಮದುವೆ ಲೆಹೆಂಗಾದಲ್ಲೇ 18 ಕಿ.ಮೀ. ನಡಿಗೆ! ರಸ್ತೆಗಾಗಿ ಸಿಎಂಗೆ ಕಣ್ಣೀರಿನ ಮನವಿ ಮಾಡಿದ ನವವಧು; ವಿಡಿಯೋ ವೈರಲ್​! Viral Video

ಉತ್ತರಾಖಂಡದಲ್ಲಿ ರಸ್ತೆ ಸಂಪರ್ಕವಿಲ್ಲದೆ ಮದುವೆ, ಲೆಹೆಂಗಾದಲ್ಲೇ 18 ಕಿ.ಮೀ ನಡೆದು ಗಂಡನ ಮನೆ ಸೇರಿದ ನವವಧು. ರಸ್ತೆಗಾಗಿ ಸಿಎಂಗೆ ಕಣ್ಣೀರಿಟ್ಟು ಮನವಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್!

ಉಂಡಾವಾ: ಹಸೆಮಣೆ ಏರಿ, ಕೈತುಂಬಾ ಬಳೆ, ಮೈತುಂಬಾ ಒಡವೆ, ದುಬಾರಿ ರೇಷ್ಮೆ ಸೀರೆ ಉಟ್ಟು, ಗಂಡನ ಮನೆಗೆ ಹೂವಿನಂತೆ ಹೆಜ್ಜೆ ಇಡಬೇಕು ಅನ್ನೋದು ಪ್ರತಿಯೊಬ್ಬ ಹೆಣ್ಣಿನ ಕನಸು. ಆದರೆ, ಕೆಲ ದಿನಗಳ ಹಿಂದೆ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ನವವಧುವೊಬ್ಬಳ ಪಾಡು ಯಾರಿಗೂ ಬೇಡಪ್ಪಾ ಎನ್ನುವಂತಿತ್ತು. ಮದುವೆಯಾದ ಖುಷಿಗಿಂತ, ಗಂಡನ ಮನೆ ತಲುಪಲು ಆಕೆ ಪಟ್ಟ ಕಷ್ಟ ನೋಡಿ ನೆಟ್ಟಿಗರು ಕಂಗೆಟ್ಟಿದ್ದಾರೆ.

ಇತ್ತೀಚೆಗೆ ಉತ್ತರಾಖಂಡನಲ್ಲಿ ಹೊಸದಾಗಿ ಮದುವೆಯಾದ ಯುವತಿಯೊಬ್ಬಳು, ವಿವಾಹದಂದು ಧರಿಸಿದ್ದ ಭಾರವಾದ ಲೆಹೆಂಗಾದಲ್ಲಿಯೇ ಬರೋಬ್ಬರಿ 18 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

ರಸ್ತೆಯೇ ಇಲ್ಲದ ಊರಿಗೆ ಸೊಸೆ ಎಂಟ್ರಿ!

ಉತ್ತರಾಖಂಡದ ಬುಲ್ಹಾರ್ ಗ್ರಾಮದ ಶರ್ಮಿಳಾ ಎಂಬ ಯುವತಿ ಡೆಹ್ರಾಡೂನ್ ಸಮೀಪದ ಉಂಡಾವಾ ಎಂಬ ಗ್ರಾಮದ ಯುವಕನನ್ನು ವರಿಸಿದ್ದಾಳೆ. ಮದುವೆ ಶಾಸ್ತ್ರಗಳೆಲ್ಲಾ ಮುಗಿದ ಮೇಲೆ ಗಂಡನ ಮನೆ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿತ್ತು. ಆದರೆ, ಆ ಊರಿಗೆ ಹೋಗಲು ಯಾವುದೇ ವಾಹನ ಸೌಕರ್ಯ ಹಾಳಾಗಲೀ, ಕನಿಷ್ಠ ಓಡಾಡಲು ಸರಿಯಾದ ರಸ್ತೆಯೇ ಇರಲಿಲ್ಲ.

ಲೋಖಂಡಿ ಎಂಬ ಊರಿನವರೆ ವಾಹನದಲ್ಲಿ ಬಂದ ವಧು-ವರರು, ಅಲ್ಲಿಂದ ಮುಂದಕ್ಕೆ ಸಾಗಲು ರಸ್ತೆಯೇ ಇಲ್ಲದೆ ಕಂಗಾಲಾಗಿದ್ದಾರೆ. ಕೊನೆಗೆ ಬೇರೆ ಯಾವುದೇ ದಾರಿ ಕಾಣದೆ, ಹೊಸ ಮದುಮಗಳು ಶರ್ಮಿಳಾ, ಭಾರವಾದ ಲೆಹೆಂಗಾ, ಆಭರಣಗಳನ್ನೆಲ್ಲಾ ಹೊತ್ತುಕೊಂಡೇ ಕಡಿದಾದ ಬೆಟ್ಟದ ದಾರಿಯಲ್ಲಿ ಕಾಲ್ನಡಿಗೆ ಆರಂಭಿಸಿದರು. ಕಲ್ಲು ಮುಳ್ಳಿನ ಹಾದಿಯಲ್ಲಿ ಬರೋಬ್ಬರಿ 18 ಕಿಲೋಮೀಟರ್ ನಡೆದು ಅತ್ತೆಮನೆ ತಲುಪುವ ಹೊತ್ತಿಗೆ ಆಕೆ ಸಂಪೂರ್ಣ ಹೈರಾಣಾಗಿ ಹೋಗಿದ್ದಾಳೆ.

ಸಿಎಂಗೆ ವಿಡಿಯೋ ಮಾಡಿ ಮನವಿ!

ನಡೆಯುವಾಗ ಶರ್ಮಿಳಾ ಅವರ ಕಷ್ಟವನ್ನು ನೋಡಿದ ಊರಿನವರು ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಈ ವೇಳೆ ದಣಿದ ಧ್ವನಿಯಲ್ಲೇ ಮಾತನಾಡಿದ ಶರ್ಮಿಳಾ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮನವಿ ಮಾಡಿದ್ದಾರೆ. "ಸ್ವಾಮಿ, ನಾನಂತೂ ಮದುವೆ ಉಡುಗೆಯಲ್ಲಿಯೇ 18 ಕಿಲೋಮೀಟರ್ ನಡೆದುಬಿಟ್ಟೆ. ಆದರೆ ನಮ್ಮೂರಿನ ಜನ ಪ್ರತಿದಿನ ಇದೇ ನರಕವನ್ನು ಅನುಭವಿಸುತ್ತಿದ್ದಾರೆ. ದಯವಿಟ್ಟು ನಮ್ಮ ಊರಿಗೆ ಒಂದು ರಸ್ತೆ ಮಾಡಿಸಿಕೊಡಿ" ಎಂದು ಕಣ್ಣೀರಿಡುತ್ತಲೇ ಕೇಳಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ವಾತಂತ್ರ್ಯ ಬಂದು ದಶಕಗಳಾದರೂ ತಪ್ಪದ ನರಕಯಾತನೆ!

ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟೊಂದು ವರ್ಷಗಳಾದರೂ, ಇಂದಿಗೂ ಮೂಲಸೌಕರ್ಯವಿಲ್ಲದೆ ನರಳುತ್ತಿರುವ ಹಳ್ಳಿಗಳು ನಮ್ಮಲ್ಲಿವೆ ಅನ್ನೋದಕ್ಕೆ ಈ ಘಟನೆಯೇ ಜೀವಂತ ಸಾಕ್ಷಿಯಾಗಿದೆ. ಉಂಡಾವಾ ಗ್ರಾಮಕ್ಕೆ ಇಂದಿಗೂ ಸರಿಯಾದ ರಸ್ತೆ ಸಂಪರ್ಕವಿಲ್ಲ.

ಮದುವೆ, ಹಬ್ಬ-ಹರಿದಿನಗಳಿರಲಿ, ಕನಿಷ್ಠ ತುರ್ತು ಪರಿಸ್ಥಿತಿ ಅಥವಾ ಅನಾರೋಗ್ಯ ಎದುರಾದರೆ ಇಲ್ಲಿನ ಜನರ ಸ್ಥಿತಿ ಹೇಳತೀರದಾಗಿದೆ. ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರು ಆಸ್ಪತ್ರೆಗೆ ಹೋಗಬೇಕೆಂದರೆ ಜೋಳಿಗೆ ಕಟ್ಟಿ ಹೊತ್ತುಕೊಂಡೇ ಸಾಗಬೇಕಾದ ದುಃಸ್ಥಿತಿ ಇಲ್ಲಿದೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ, ಹೊಸ ಬಾಳಿಗೆ ಕಾಲಿಡಬೇಕಿದ್ದ ವಧುವೊಬ್ಬಳು ರಸ್ತೆಗಾಗಿ ಸರ್ಕಾರಕ್ಕೆ ಅಂಗಲಾಚುವ ಪರಿಸ್ಥಿತಿ ಬಂದಿದ್ದು ನಿಜಕ್ಕೂ ದುರಂತ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಹಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸುತ್ತಾರಾ ಕಾದು ನೋಡಬೇಕಿದೆ, (ಏಜೆನ್ಸೀಸ್​).