ತಾಯಿಯ ಶವದ ಮುಂದೆ ಬಾಲಕನ ಕಣ್ಣೀರು
- ಏಡ್ಸ್ ಒಂದು ಅಂಟು ರೋಗವಲ್ಲ ಎಂದು ಎಷ್ಟೇ ಹೇಳಿದರೂ ಜನರ ಅಜ್ಞಾನ ಮಾತ್ರ ಕಡಿಮೆಯಾಗುತ್ತಿಲ್ಲ
- ಎಚ್‌ಐವಿ ಪೀಡಿತರನ್ನು ಅನ್ಯಗ್ರಹದ ಜೀವಿಗಳಂತೆ ನೋಡುವ ಜನರ ಮನಸ್ಥಿತಿ ಬದಲಾಗಬೇಕಿದೆ
- ಉತ್ತರ ಪ್ರದೇಶದ ಎತಾಹ್ ಜಿಲ್ಲೆಯಲ್ಲಿ ಇಡೀ ಮನುಕುಲ ತಲೆತಗ್ಗಿಸುವಂತಹ ಘಟನೆ ನಡೆದಿದೆ
ಲಖನೌ: ಏಡ್ಸ್ ( HIV ) ಒಂದು ಅಂಟು ರೋಗವಲ್ಲ ಎಂದು ಎಷ್ಟೇ ಹೇಳಿದರೂ ಜನರ ಅಜ್ಞಾನ ಮಾತ್ರ ಕಡಿಮೆಯಾಗುತ್ತಿಲ್ಲ. ಎಚ್‌ಐವಿ ಪೀಡಿತರನ್ನು ಅನ್ಯಗ್ರಹದ ಜೀವಿಗಳಂತೆ ನೋಡುವ ಜನರ ಮನಸ್ಥಿತಿ ಬದಲಾಗಬೇಕಿದೆ. ಸಂಕಷ್ಟದಲ್ಲಿರುವ ಜನರಿಗೆ ಧೈರ್ಯ ತುಂಬುವ ಭರವಸೆಗಳಾಗಬೇಕೇ ಹೊರತು, ಅವರನ್ನು ದೂರವಿಟ್ಟು ಮಾನಸಿಕ ಹಿಂಸೆ ನೀಡಬಾರದು. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಮತ್ತೆ ಮತ್ತೆ ಅದೇ ರೀತಿಯ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಇದೀಗ ಉತ್ತರ ಪ್ರದೇಶದಲ್ಲಿ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ.
ಉತ್ತರ ಪ್ರದೇಶದ ಎತಾಹ್ ಜಿಲ್ಲೆಯಲ್ಲಿ ಇಡೀ ಮನುಕುಲ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಈ ಘಟನೆ ಎಚ್‌ಐವಿ ಅಥವಾ ಏಡ್ಸ್ ಕುರಿತಾದ ಸಾಮಾಜಿಕ ಕಳಂಕ ಮತ್ತು ಅಜ್ಞಾನವನ್ನು ಮತ್ತೊಮ್ಮೆ ಬಯಲು ಮಾಡಿದೆ. ಅಷ್ಟಕ್ಕೂ ಏನಾಯಿತು ಅಂದರೆ, ಕಳೆದ ಬುಧವಾರ (ಜ. 15,) ಎಚ್‌ಐವಿ ಪೀಡಿತ ತನ್ನ ತಾಯಿಯ ಮರಣದ ನಂತರ, 10 ವರ್ಷದ ಬಾಲಕ ತನ್ನ ತಾಯಿಯ ಮೃತದೇಹವನ್ನು ಒಂಟಿಯಾಗಿ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾನೆ. ಈ ಘಟನೆ, ಜನವರಿ 16 ರಂದು ಬೆಳಕಿಗೆ ಬಂದಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಾಲಕನ 52 ವರ್ಷದ ಎಚ್‌ಐವಿ ಮತ್ತು ಕ್ಷಯರೋಗ ಪೀಡಿತ ತಾಯಿ, ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಎತಾಹ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜನವರಿ 15 ರಂದು ಸಂಜೆ ಕೊನೆಯುಸಿರೆಳೆದರು. ತನ್ನ ತಾಯಿಯ ಸಾವಿನ ಸುದ್ದಿ ತಿಳಿದ ಮಗ, ಆಕೆಯ ಶವದ ಪಕ್ಕದಲ್ಲೇ ಕುಳಿತು ಕಣ್ಣೀರು ಹಾಕುತ್ತಿದ್ದ. ಮತ್ತೊಂದು ನೋವಿನ ಸಂಗತಿ ಏನೆಂದರೆ, ಆ ಬಾಲಕನ ತಂದೆ ಒಂದು ವರ್ಷದ ಹಿಂದೆಯೇ ಮೃತಪಟ್ಟಿದ್ದಾರೆ. ಆತನ ತಂದೆಯು ಕೂಡ ಎಚ್‌ಐವಿಯಿಂದ ಸಾವಿಗೀಡಾಗಿದ್ದಾರೆ.
ನನ್ನ ತಂದೆಗೆ ಎಚ್‌ಐವಿ ರೋಗ ಇರುವುದು ಗೊತ್ತಾದ ಬಳಿಕ ನನ್ನ ಕುಟುಂಬವನ್ನು ಸಮಾಜದಿಂದಲೇ ಬಹಿಷ್ಕರಿಸಲಾಯಿತು. ಸಂಬಂಧಿಕರು ಮತ್ತು ಗ್ರಾಮಸ್ಥರು ನಮ್ಮಿಂದ ದೂರವೇ ಉಳಿದರು ಎಂದು ಆ ಬಾಲಕ ತನ್ನ ನೋವನ್ನು ತೋಡಿಕೊಂಡಿದ್ದಾನೆ. ನನ್ನ ತಂದೆ ಜೀವಂತ ಇದ್ದಾಗ ನಾನು ಶಾಲೆಗೆ ಹೋಗುತ್ತಿದ್ದೆ. ಆತನ ಸಾವಿನ ಬಳಿಕ ನಾನು ಶಾಲೆಯನ್ನು ಬಿಟ್ಟು ನನ್ನ ತಾಯಿಯ ಆರೈಕೆ ಮಾಡುತ್ತಿದ್ದೆ ಎಂದು ಬಾಲಕ ಹೇಳಿದ್ದಾನೆ.
ಇನ್ನು ತಾಯಿಯ ಮರಣದ ನಂತರ, ಏನು ಮಾಡಬೇಕೆಂದು ತೋಚದೇ ಹಲವು ಗಂಟೆಗಳ ಕಾಲ ತನ್ನ ತಾಯಿಯ ಮೃತದೇಹದ ಬಳಿ ಒಂಟಿಯಾಗಿ ಕುಳಿತು ಬಾಲಕ ಅಳುತ್ತಿದ್ದ. ತುಂಬಾ ಹೊತ್ತು ಕಣ್ಣೀರು ಹಾಕಿದ ಬಾಲಕ ಕೊನೆಗೆ, ತಾಯಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋದನು. ಎಲ್ಲಿ ಎಚ್‌ಐವಿ ತಮಗೂ ಅಂಟಿಕೊಂಡುಬಿಡುತ್ತದೆ ಎಂಬ ಭಯದಲ್ಲಿ ಗ್ರಾಮಸ್ಥರು ಮತ್ತು ಸಂಬಂಧಿಕರು ಬಾಲಕನಿಗೆ ಸಹಾಯ ಮಾಡಲು ಮುಂದಾಗಲಿಲ್ಲ. ಇದನ್ನು ನೋಡಿದರೆ ನಮ್ಮ ಜನರು ಇನ್ನೂ ಅಪನಂಬಿಕೆಯಲ್ಲಿ ಮುಳುಗಿರುವುದನ್ನು ತೋರಿಸುತ್ತದೆ. ವಾಸ್ತವವಾಗಿ ಎಚ್‌ಐವಿ ಅಂಟು ರೋಗ ಅಲ್ಲ. ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಈ ಬಗ್ಗೆ ಸರ್ಕಾರ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರು ಮಾತ್ರ ಇನ್ನೂ ಬದಲಾಗುತ್ತಿಲ್ಲ.
ಅಮ್ಮನನ್ನು ಕಳೆದುಕೊಂಡು ಅನಾಥನಾದ ಮಗನಿಗೆ ಆಸ್ಪತ್ರೆಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ನೆರವು ನೀಡಿದರು. ತಾಯಿಯ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಿ, ಅಂತ್ಯಕ್ರಿಯೆಯನ್ನು ಸಹ ನಡೆಸಿದರು. ಇದೀಗ, ಅನಾಥನಾಗಿರುವ ಬಾಲಕನ ಭವಿಷ್ಯಕ್ಕಾಗಿ ಸರ್ಕಾರಿ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಆತನನ್ನು ಅನಾಥಾಶ್ರಮಕ್ಕೆ ಕಳುಹಿಸುವ ಅಥವಾ ಸಂಬಂಧಿಕರೊಂದಿಗೆ ಉಳಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಆದರೆ, ಸಂಬಂಧಿಕರು ತಮ್ಮಲ್ಲಿ ಉಳಿಸಿಕೊಳ್ಳಲು ಮುಂದಾಗಿಲ್ಲ, (ಏಜೆನ್ಸೀಸ್).