ಪ್ರತಿಭಟನೆ ವೇಳೆ ಹರಡಿದ್ದ ಪೆಲೆಟ್ ಗನ್, ಲಾಠಿಚಾರ್ಜ್ ಸೇರಿದಂತೆ 9 ಸುಳ್ಳು ವದಂತಿಗಳ ಬಣ್ಣ ಬಯಲು ಮಾಡಿದ ದೆಹಲಿ ಪೊಲೀಸ್
- ಸೋಮವಾರ ನಡೆದಿದ್ದ ಸಂಸದ್ ಚಲೋ ಪ್ರತಿಭಟನೆ
- ಪ್ರತಿಭಟನೆ ವೇಳೆ ಹರಡಿದ್ದ ಪೆಲೆಟ್ ಗನ್, ಲಾಠಿಚಾರ್ಜ್ ಸೇರಿದಂತೆ 9 ಸುಳ್ಳು ವದಂತಿಗಳ ಬಣ್ಣ ಬಯಲು ಮಾಡಿದ ದೆಹಲಿ ಪೊಲೀಸ್
- ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಅಸಲಿಯತ್ತು ಇಲ್ಲಿದೆ!
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ (ಜುಲೈ 20) ಮತ್ತು ಮಂಗಳವಾರ (ಜುಲೈ 21) ರಂದು ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದ ಪ್ರತಿಭಟನೆ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಲಾಗಿದ್ದ ಸಾಲು ಸಾಲು ವದಂತಿಗಳನ್ನು ದೆಹಲಿ ಪೊಲೀಸರು (Delhi Police Fact Check) ಒಂದೊಂದಾಗಿ ಭೇದಿಸಿದ್ದಾರೆ.
"ಪೆಲೆಟ್ ಗನ್ ಬಳಸಿದ್ದಾರೆ", "ಮೊಳೆ ಜೋಡಿಸಿದ ಲಾಠಿಗಳಿಂದ ಹೊಡೆದಿದ್ದಾರೆ", "3,000 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ" ಎಂದೆಲ್ಲಾ ಬಿಂಬಿಸಲಾಗಿದ್ದ ಬರೋಬ್ಬರಿ 9 ದೊಡ್ಡ ಸುಳ್ಳು ಹಕ್ಕುಗಳಿಗೆ ಪೊಲೀಸರು ಸಕ್ಷಮ ಸಾಕ್ಷ್ಯಗಳೊಂದಿಗೆ ಕೌಂಟರ್ ಕೊಟ್ಟಿದ್ದಾರೆ.
ಸಿಜೆಪಿ ವಕ್ತಾರ ಸೌರವ್ ದಾಸ್, ಆಲ್ಟ್ ನ್ಯೂಸ್‌ನ ಮೊಹಮ್ಮದ್ ಜುಬೈರ್ ಸೇರಿದಂತೆ ಹಲವು ಪ್ರಮುಖ ಸಾಮಾಜಿಕ ಮಾಧ್ಯಮ ಖಾತೆಗಳು ಪ್ರಸಾರ ಮಾಡಿದ್ದ ಸುಳ್ಳು ಪ್ರತಿಪಾದನೆಗಳ ಅಸಲಿಯತ್ತು ಈಗ ಹೊರಬಿದ್ದಿದೆ.
1. ಪೆಲೆಟ್ ಗನ್ ಹಾಗೂ ಮೊಳೆ ಲಾಠಿ ವದಂತಿ!
ಸಿಜೆಪಿ ವಕ್ತಾರ ಸೌರವ್ ದಾಸ್, ಪೊಲೀಸರು ಶಾಂತಿಯುತ ಪ್ರತಿಭಟನಾಕಾರರ ಮೇಲೆ ‘ಪೆಲೆಟ್ ಗನ್’ ಪ್ರಯೋಗಿಸಿದ್ದಾರೆ ಎಂದು ಗಾಯಗಳ ದೃಶ್ಯದೊಂದಿಗೆ ವೀಡಿಯೊ ಹಂಚಿಕೊಂಡಿದ್ದರು. ಇತ್ತ ಮೊಹಮ್ಮದ್ ಜುಬೈರ್, ಮೊಳೆ ಹೊಡೆದ ಲಾಠಿಗಳಿಂದ ಹೊಡೆದು ಪ್ರತಿಭಟನಾಕಾರರ ತಲೆ ಸೀಳಲಾಗಿದೆ ಎಂಬ ವೀಡಿಯೊ ಪೋಸ್ಟ್ ಮಾಡಿದ್ದರು.
ಆದರೆ, ದೆಹಲಿ ಪೊಲೀಸರು ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಈ ವೀಡಿಯೊಗಳಿಗೂ ಅಂದಿನ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಜನರನ್ನು ದಾರಿ ತಪ್ಪಿಸಲು ಹಳೆಯ ಮತ್ತು ಬೇರೆ ಘಟನೆಯ ದೃಶ್ಯಗಳನ್ನು ಬಳಸಿ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
2. 12 ವರ್ಷದ ಬಾಲಕಿ ಮೇಲಿನ ದಾಳಿ, 3000 ಬಂಧನ?
ಮಹಿಳೆ ಮತ್ತು ಮಗುವಿನ ಮೇಲಿನ ಹಲ್ಲೆ: ಗೀತಾಂಜಲಿ ಎಂಬ ಮಹಿಳೆಯ ಕೂದಲನ್ನು ಎಳೆದು ಹಲ್ಲೆ ನಡೆಸಲಾಗಿದೆ, 12 ವರ್ಷದ ಬಾಲಕಿಯ ತಲೆಗೆ ಗಾಯವಾಗಿದೆ ಮತ್ತು 40 ರಿಂದ 50 ಜನರ ತಲೆ ಒಡೆಯಲಾಗಿದೆ ಎಂದು ಸೌರವ್ ದಾಸ್ ಆರೋಪಿಸಿದ್ದರು. ಪೊಲೀಸರು ಈ ಪ್ರತಿಯೊಂದು ಆರೋಪವನ್ನೂ ತನಿಖೆ ನಡೆಸಿ, ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಖಚಿತಪಡಿಸಿದ್ದಾರೆ.
ಎಎಪಿ ನಾಯಕ ಸಂಜಯ್ ಸಿಂಗ್ ಅವರು 3,000 ವಿದ್ಯಾರ್ಥಿಗಳನ್ನು ಬಂಧಿಸಿ ಅಹಾರ-ನೀರಿಲ್ಲದೆ ಕ್ರೀಡಾಂಗಣಗಳಲ್ಲಿ ಬಂಧಿಸಿಡಲಾಗಿದೆ ಎಂದು ಆರೋಪಿಸಿದ್ದರು. ಇದನ್ನು ‘ಸಂಪೂರ್ಣ ಸುಳ್ಳು ಮತ್ತು ಗೊಂದಲಕಾರಿ’ ಎಂದು ನವದೆಹಲಿ ಡಿಸಿಪಿ ಖಾತೆ ನಿರಾಕರಿಸಿದೆ.
ಅಭಿಜಿತ್ ದಿಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ವದಂತಿಗೂ ಕೌಂಟರ್ ನೀಡಿದ ಪೊಲೀಸರು, ಅವರು ಪ್ರತಿಭಟನಾ ವೇದಿಕೆಯಲ್ಲೇ ಲಭ್ಯವಿದ್ದರು, ಅವರನ್ನು ಬಂಧಿಸಿಯೇ ಇರಲಿಲ್ಲ ಎಂದು ತಿಳಿಸಿದ್ದಾರೆ.
ಸೋನಮ್ ವಾಂಗ್ಚುಕ್ ಹೆಂಡತಿ ಮೇಲಿನ ದಾಳಿ:
'ಕಾಕ್ರೋಚ್ ಈಸ್ ಬ್ಯಾಕ್' ಎಂಬ ಖಾತೆಯು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಪತ್ನಿಯ ಕೂದಲು ಎಳೆದು ಹಲ್ಲೆ ಮಾಡಲಾಗಿದೆ ಎಂದು ಪೋಸ್ಟ್ ಮಾಡಿತ್ತು. ಈ ಆರೋಪವನ್ನೂ ಪೊಲೀಸರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
3. ಹಳೆಯ ವೀಡಿಯೋಗಳನ್ನೇ ಹೊಸದೆಂದು ಹಂಚಿಕೊಂಡ ಕಿಡಿಗೇಡಿಗಳು
ಪ್ರತಿಭಟನೆಯ ಹೆಸರಿನಲ್ಲಿ ಹಳೆಯ ಹಾಗೂ ಸಂದರ್ಭಕ್ಕೆ ಸಂಬಂಧಿಸದ ದೃಶ್ಯಗಳನ್ನು ಹಂಚಿಕೊಳ್ಳಲಾಗಿತ್ತು. ಜೂನ್ 18, 2026 ರ ಹಳೆಯ ಇನ್‌ಸ್ಟಾಗ್ರಾಮ್ ವೀಡಿಯೊವನ್ನು ಜುಲೈ 20 ರ ಘಟನೆ ಎಂದು ಬಿಂಬಿಸಲಾಗಿತ್ತು. ವಾಸ್ತವವಾಗಿ, ಜುಲೈ 20 ರಂದು ಸಿಜೆಪಿಗೆ ಪ್ರತಿಭಟನೆ ನಡೆಸಲು ಯಾವುದೇ ಅಧಿಕೃತ ಅನುಮತಿಯೇ ಇರಲಿಲ್ಲ. ಪೊಲೀಸರು ಸತ್ಯಾಸತ್ಯತೆ ಬಹಿರಂಗಪಡಿಸುತ್ತಿದ್ದಂತೆ, ಹಲವು ಖಾತೆಗಳು ತಮ್ಮ ಸುಳ್ಳು ಪೋಸ್ಟ್ ಮತ್ತು ವೀಡಿಯೊಗಳನ್ನು ಡಿಲೀಟ್ ಮಾಡಿವೆ.
ಪೊಲೀಸರ ಎಚ್ಚರಿಕೆ!
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಯೊಂದು ಮಾಹಿತಿಯನ್ನೂ ಅಧಿಕೃತ ಮೂಲಗಳಿಂದ ಪರಿಶೀಲಿಸದೇ ನಂಬಬೇಡಿ ಅಥವಾ ಶೇರ್ ಮಾಡಬೇಡಿ ಎಂದು ದೆಹಲಿ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಸುಳ್ಳು ಸುದ್ದಿ ಮತ್ತು ವದಂತಿ ಹರಡುವ ಖಾತೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್).