ADC Rishabh Sambial | ಸಾಮಾನ್ಯ ಜನರಿಗೂ ಇದೆಯಾ ರಾಷ್ಟ್ರಪತಿಗಳ ಭೇಟಿಗೆ ಅವಕಾಶ..? 
ದೇಶ

ಸಾಮಾನ್ಯ ಜನರಿಗೂ ಇದೆಯಾ ರಾಷ್ಟ್ರಪತಿಗಳ ಭೇಟಿಗೆ ಅವಕಾಶ..? ಪ್ರಕ್ರಿಯೆ ಮತ್ತು ರಕ್ಷಣಾ ಶಿಸ್ತಿನ ಕುರಿತು ಮಾಜಿ ಎಡಿಸಿ ವಿವರಣೆ ಹೀಗಿದೆ! | ADC Rishabh Sambial

ನವದೆಹಲಿ: ಭಾರತದ ಪ್ರಥಮ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅತ್ಯಂತ ಸಮೀಪದಲ್ಲಿ ಕಾರ್ಯನಿರ್ವಹಿಸುವುದು ಸಾಮಾನ್ಯ ಸಂಗತಿಯಲ್ಲ. ರಾಷ್ಟ್ರಪತಿಗಳ ರಕ್ಷಣೆ, ಅವರ ಕಾರ್ಯಕ್ರಮಗಳ ಯೋಜನೆ ಹಾಗೂ ಪ್ರತಿಯೊಂದು ಹೆಜ್ಜೆಯ ಮೇಲೆಯೂ ನಿಗಾ ಇಡುವುದು ಅತ್ಯಂತ ಜವಾಬ್ದಾರಿಯುತ ಕೆಲಸ. ರಾಷ್ಟ್ರಪತಿಗಳ ಮಾಜಿ ಎಡಿಸಿ ಮತ್ತು ವಿಶೇಷ ಪಡೆಗಳ ಮಾಜಿ ಅಧಿಕಾರಿಯಾದ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ (ADC Rishabh Sambial) ಅವರು ರಾಜ್ ಶಮಾನಿ ಅವರೊಂದಿಗಿನ ಸಂವಾದದಲ್ಲಿ ತಮ್ಮ ಸೇವಾವಧಿಯ ರೋಚಕ ಅನುಭವಗಳು, ಭದ್ರತಾ ಶಿಷ್ಟಾಚಾರಗಳು ಮತ್ತು ತಮ್ಮ ಸಶಸ್ತ್ರ ಪಡೆಗಳ ತರಬೇತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ರಾಷ್ಟ್ರಪತಿಗಳ ಜೊತೆ ಯಾರೂ ಹಸ್ತಲಾಘವ ಮಾಡುವಂತಿಲ್ಲ ಅಥವಾ ಅವರ ಪಾದ ಮುಟ್ಟಿ ನಮಸ್ಕರಿಸುವಂತಿಲ್ಲ. ಇದರ ಹಿಂದಿನ ಕಾರಣ ಅತ್ಯಂತ ಸರಳ ಹಾಗೂ ಮುನ್ನೆಚ್ಚರಿಕೆಯದ್ದಾಗಿದೆ. ಯಾರ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ ಎಂದು ಸಂಬ್ಯಾಲ್ ಹೇಳಿದ್ದಾರೆ.
ಯಾರೋ ಒಬ್ಬರು ಅಭಿನಂದಿಸುವ ನೆಪದಲ್ಲಿ ಬಂದು ಸಾರ್ವಜನಿಕವಾಗಿ ದೈಹಿಕವಾಗಿ ಹಾನಿ ಮಾಡಿದರೆ, ಆ ವ್ಯಕ್ತಿಯನ್ನು ಜೈಲಿಗೆ ಕಳುಹಿಸಬಹುದು. ಆದರೆ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿಗಳ ಗೌರವ ಮತ್ತು ಘನತೆಗೆ ಭಂಗ ಉಂಟಾಗುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನರು ಭಾವನಾತ್ಮಕವಾಗಿ ರಾಷ್ಟ್ರಪತಿಗಳತ್ತ ಧಾವಿಸಿದಾಗ, ಅವರಿಗೆ ಯಾವುದೇ ಮುಜುಗರ ಅಥವಾ ನೋವಾಗದಂತೆ ಪರಿಸ್ಥಿತಿಯನ್ನು ನಿಯಂತ್ರಿಸುವುದು ಎಡಿಸಿ ಅಧಿಕಾರಿಗಳ ಅತ್ಯಂತ ಕಠಿಣ ಜವಾಬ್ದಾರಿಯಾಗಿರುತ್ತದೆ ಸಂಬ್ಯಾಲ್ ತಿಳಿಸಿದ್ದಾರೆ.

1 ಕಿಲೋಮೀಟರ್ ಸುತ್ತಳತೆಯ ಭದ್ರತೆ!

ರಾಷ್ಟ್ರಪತಿಗಳು ಭೇಟಿ ನೀಡುವ ಯಾವುದೇ ಸ್ಥಳದ 1 ಕಿಲೋಮೀಟರ್ ಪ್ರದೇಶವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ. ಅಂದರೆ ಆ ಸುತ್ತಳತೆಯಲ್ಲಿ ಯಾವುದೇ ಅಕ್ರಮ ಶಸ್ತ್ರಾಸ್ತ್ರ, ಲೋಹ ಅಥವಾ ಅಪಾಯಕಾರಿ ವಸ್ತುಗಳು ಇರದಂತೆ ನಿಗಾ ವಹಿಸಲಾಗುತ್ತದೆ. ದೆಹಲಿಯಿಂದ ಹೊರಗೆ ಪ್ರಯಾಣಿಸುವಾಗ ದೈಹಿಕ ಭದ್ರತೆಯ ಜವಾಬ್ದಾರಿಯನ್ನು ಆಯಾ ರಾಜ್ಯಗಳ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ವಹಿಸಿಕೊಳ್ಳುತ್ತವೆ.
ರಾಷ್ಟ್ರಪತಿಗಳು ತಮ್ಮ ಅಧಿಕೃತ ಕೊಠಡಿಯಿಂದ ಹೊರಬಂದ ಕ್ಷಣದಿಂದ ಹಿಡಿದು ಮತ್ತೆ ಕಾರು ಹತ್ತುವವರೆಗೆ ಪ್ರತಿಯೊಂದು ಹೆಜ್ಜೆಯೂ ಮುಂಚಿತವಾಗಿಯೇ ಯೋಜಿಸಲ್ಪಟ್ಟಿರುತ್ತದೆ. ಯಾರು ಭೇಟಿಯಾಗಬೇಕು, ಎಲ್ಲಿ ನಡೆಯಬೇಕು, ಫೋಟೋ ಎಲ್ಲಿ ತೆಗೆಸಿಕೊಳ್ಳಬೇಕು ಎಂಬುದು ಸೇರಿದಂತೆ ಎಲ್ಲವನ್ನೂ ರಿಹರ್ಸಲ್ ಮಾಡಿ ವಿಡಿಯೋ ಅನುಮೋದನೆ ಪಡೆಯಲಾಗುತ್ತದೆ. ಪ್ರತಿಯೊಂದು ಭೇಟಿಯಲ್ಲೂ ನೂರಾರು ಮುನ್ನೆಚ್ಚರಿಕೆ ಅಂಶಗಳನ್ನು ಒಳಗೊಂಡ 11 ರಿಂದ 12 ಪುಟಗಳ ಚೆಕ್‌ಲಿಸ್ಟ್ ಅನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ನೀರಿನ ಗ್ಲಾಸ್​ಗೂ ಕೂಡ ಭದ್ರತೆ!

ರಾಷ್ಟ್ರಪತಿಗಳು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿಗೂ ಅತ್ಯುನ್ನತ ಭದ್ರತೆ ಇರುತ್ತದೆ. ಅವರು ಕುಡಿಯುವ ನೀರಿನ ಗ್ಲಾಸ್ ಅನ್ನು ಮೊದಲೇ ಪರಿಶೀಲಿಸಲಾಗುತ್ತದೆ, ಏಕೆಂದರೆ ಅದಕ್ಕೆ ಯಾರಾದರೂ ವಿಷ ಅಥವಾ ಅಪಾಯಕಾರಿ ವಸ್ತುವನ್ನು ಬೆರೆಸಿರುವ ಸಾಧ್ಯತೆಯೂ ಇರಬಹದು. ಭೋಜನಕೂಟಗಳಲ್ಲಿ ರಾಷ್ಟ್ರಪತಿಗಳ ವೈಯಕ್ತಿಕ ಶೆಫ್‌ಗಳು (ಅಡುಗೆಯವರು) ಮುಂಚಿತವಾಗಿಯೇ ಪರಿಶೀಲನೆ ನಡೆಸಿ ಆಹಾರವನ್ನು ಸಿದ್ಧಪಡಿಸುತ್ತಾರೆ.

ಅತ್ಯಂತ ಕಠಿಣ ತರಬೇತಿ ಮತ್ತು ಆಯ್ಕೆ ಪ್ರಕ್ರಿಯೆ ಹೀಗಿರುತ್ತೆ!

ವಿಶೇಷ ಪಡೆಗಳ ತರಬೇತಿಯು ಕಲ್ಪನೆಗೂ ಮೀರಿದ್ದಾಗಿದ್ದು, ಅಭ್ಯರ್ಥಿಗಳು 70 ರಿಂದ 80 ಕೆಜಿ ತೂಕದ ಉಪಕರಣಗಳನ್ನು ಹೊತ್ತು, ಆಹಾರ, ನೀರು ಮತ್ತು ನಿದ್ರೆಯಿಲ್ಲದೆ 30 ರಿಂದ 40 ದಿನಗಳ ಕಾಲ ತರಬೇತಿ ಪಡೆಯುತ್ತಾರೆ. ತೀವ್ರ ದೈಹಿಕ ಆಯಾಸದ ನಡುವೆಯೂ ಸುತ್ತಮುತ್ತಲಿನ ಸಣ್ಣ ವಿಷಯಗಳನ್ನು ಗಮನಿಸುವ ಮಾನಸಿಕ ಜಾಗರೂಕತೆಯನ್ನು ಅವರಿಗೆ ಕಲಿಸಲಾಗುತ್ತದೆ. ದೇಶದ ಮೂರೂ ಸೇನೆಗಳಿಂದ ಅತ್ಯುತ್ತಮ ಸೇವಾ ದಾಖಲೆ ಹೊಂದಿರುವ ಅಧಿಕಾರಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಸುದೀರ್ಘ ಸಂದರ್ಶನ ಮತ್ತು ಹಿನ್ನೆಲೆ ತನಿಖೆಯ ನಂತರವೇ ಒಬ್ಬರನ್ನು ಎಡಿಸಿ ಅಧಿಕಾರಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಸಂಬ್ಯಾಲ್ ತಿಳಿಸಿದ್ದಾರೆ.
ತಮ್ಮ ಅಧಿಕಾರದ ಅವಧಿಯಲ್ಲಿ ಜನರ ನಡವಳಿಕೆಯಲ್ಲಿ ಕಂಡುಬರುವ ಸ್ವಾರ್ಥ ಮತ್ತು ಕುತಂತ್ರಗಳನ್ನು ಗಮನಿಸಿದ ಮೇಜರ್ ಸಂಬ್ಯಾಲ್, ಈ ಸೇವಾ ಅನುಭವವು ತಮ್ಮಲ್ಲಿ ಜಾಗರೂಕತೆ ಮತ್ತು ಬಲವಾದ ರಕ್ಷಣಾತ್ಮಕ ಮನೋಭಾವವನ್ನು ಬೆಳೆಸಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರಾಷ್ಟ್ರಪತಿಗಳ ಭೇಟಿ ಹೇಗೆ...?

ದೇಶದ ಯಾವುದೇ ಪ್ರಜೆಯೂ ಅಧಿಕೃತ ಇಮೇಲ್ ವ್ಯವಸ್ಥೆಯ ಮೂಲಕ ರಾಷ್ಟ್ರಪತಿಗಳ ಭೇಟಿಗೆ ಅಪಾಯಿಂಟ್‌ಮೆಂಟ್ ಕೋರಿ ವಿನಂತಿ ಕಳುಹಿಸಬಹುದು. ರಾಷ್ಟ್ರಪತಿಗಳ ಕಚೇರಿಯ ಸಿಬ್ಬಂದಿ ಈ ವಿನಂತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಅವರೊಂದಿಗೆ ಚರ್ಚಿಸಿದ ನಂತರವಷ್ಟೇ ಭೇಟಿಗೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ. ಈ ಭೇಟಿಗಳು ಪ್ರತ್ಯೇಕವಾದ ಸಭಾಂಗಣದಲ್ಲಿ ನಡೆಯುತ್ತವೆ. ಆದರೆ ರಾಷ್ಟ್ರಪತಿಗಳ ಖಾಸಗಿ ಕೊಠಡಿಗೆ ಸಿಬ್ಬಂದಿ ಮತ್ತು ಪ್ರಧಾನಮಂತ್ರಿಗಳು ಸೇರಿದಂತೆ ಅತ್ಯುನ್ನತ ಹುದ್ದೆಯಲ್ಲಿರುವ ಹಿರಿಯ ಅಧಿಕಾರಿಗಳಿಗೆ ಮಾತ್ರ ಅಧಿಕೃತ ಕೆಲಸದ ನಿಮಿತ್ತ ಪ್ರವೇಶವಿರುತ್ತದೆ.
ಹಿರಿಯ ನಾಯಕರೊಂದಿಗಿನ ಸಂವಹನವೂ ಸಹ ಎಡಿಸಿ ಮೂಲಕವೇ ಹಾದುಹೋಗುತ್ತದೆ. ಉದಾಹರಣೆಗೆ, ರಾಷ್ಟ್ರಪತಿಯವರು ಪ್ರಧಾನಮಂತ್ರಿಯವರೊಂದಿಗೆ ಮಾತನಾಡಲು ಬಯಸಿದರೆ, ಅವರು ಎಡಿಸಿಗೆ ತಿಳಿಸುತ್ತಾರೆ. ತಕ್ಷಣವೇ ಎಡಿಸಿ ತಂಡವು ಪ್ರಧಾನ ಮಂತ್ರಿಗಳ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಿ, ಪ್ರಧಾನಿಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಂಡ ನಂತರ ಕರೆಯನ್ನು ಜೋಡಿಸುತ್ತದೆ(ಏಜೆನ್ಸೀಸ್).