- 32 ಕೋಟಿ ರೂ. ಸಾಲ ತೀರಿಸುವುದರಿಂದ ತಪ್ಪಿಸಿಕೊಳ್ಳಲು ಕೊಲೆ ಸಂಚು
- ಉದ್ಯಮಿಯ ಹತ್ಯೆಗೆ ಸಂಚು ರೂಪಿಸಿದ್ದ ಕಿಡಿಗೇಡಿಗಳು ಕಡೆಗೂ ಅರೆಸ್ಟ್
ಮುಂಬೈ: 32 ಕೋಟಿ ರೂ. ಸಾಲ ತೀರಿಸುವುದರಿಂದ ತಪ್ಪಿಸಿಕೊಳ್ಳಲು ಉದ್ಯಮಿಯ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣವನ್ನು ಕಡೆಗೂ ಮಹಾರಾಷ್ಟ್ರ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಮಾಸ್ಟರ್ಮೈಂಡ್ ಸೇರಿ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ.
ವಸಾಯಿ ಮೂಲದ ಉದ್ಯಮಿ ಮೋಹನ್ ಸಿಂಗ್ ಲಕ್ಷ್ಮಣ್ ಸಿಂಗ್ ಪರ್ಮಾರ್ರನ್ನು ಟಾರ್ಗೆಟ್ ಮಾಡಿದ್ದ ಕಿಡಿಗೇಡಿಗಳು, ಹಣವನ್ನು ಪೀಕಲು ಕೊಲೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 32 ಕೋಟಿ ರೂ. ಸಾಲವನ್ನು ಹಿಂತಿರುಗಿಸಲು ಪರದಾಡುತ್ತಿದ್ದ ಆರೋಪಿಗಳು, ಕೇವಲ ಕೊಡಬೇಕಾದ ಹಣದಿಂದ ತಪ್ಪಿಸಿಕೊಳ್ಳುವುದರ ಜತೆಗೆ ಅವರ ಕಂಪನಿಯ ಸಂಪೂರ್ಣ ನಿಯಂತ್ರಣವನ್ನು ತಮ್ಮ ಕೈಗೆ ವಶಪಡಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯಕ್ಕೆ ಮುಂದಾಗಿದ್ದರು ಎಂದು ತನಿಖೆಯಲ್ಲಿ ವಿವರಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಸಾಗರ್ ಗಿರೀಶ್ ಭಾನುಶಾಲಿ, ವಸಾಯಿಯ ಡೈಮಂಡ್ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಜಿಎಸ್‌ಎಂ ಫಾಯಿಲ್ಸ್ ಲಿಮಿಟೆಡ್ ಕಂಪನಿಯ ಪಾಲುದಾರ ಎನ್ನಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ ಅನುಭವಿಸಿ, ಸಾಲದ ಸುಳಿಯಲ್ಲಿ ಸಿಲುಕಿದ್ದ ಭಾನುಶಾಲಿ, 32 ಕೋಟಿ ರೂ. ಹಣವನ್ನು ವಾಪಾಸ್ ಮಾಡಲು ತಲೆಮರಿಸಿಕೊಳ್ಳುವ ಹಾದಿಯನ್ನು ಹಿಡಿದಿದ್ದ ಎನ್ನಲಾಗಿದೆ.
ಜುಲೈ 24ರ ರಾತ್ರಿ ವಸಾಯಿ ಪೂರ್ವದ ನಾಯಕ್‌ಪಾಡ ಪ್ರದೇಶದಲ್ಲಿರುವ ಕಂಪನಿ ಆವರಣದಿಂದ ಪರ್ಮಾರ್ ಹೊರಬರುತ್ತಿದ್ದಂತೆ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಬುಲೆಟ್ ಭುಜಕ್ಕೆ ತಗುಲಿ ಗಂಭೀರ ಗಾಯಗಳಾಗಿವೆ. ಮೊದಲ ಗುಂಡು ಹಾರಿದ ಬಳಿಕ ಪಿಸ್ತೂಲ್ ವರ್ಕ್ ಆಗಿಲ್ಲ. ತಕ್ಷಣವೇ ಆರೋಪಿಯು ಪಿಸ್ತೂಲಿನ ಹಿಂಭಾಗದಿಂದ ಪರ್ಮಾರ್ ಮೇಲೆ ಹಲ್ಲೆಗೈದು, ಭಯದಿಂದ ತನ್ನ ಗ್ಯಾಂಗ್ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ ಎಂದು ವರದಿಯಾಗಿದೆ.
ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನು ಸುಜಿತ್ ದೇವೇಂದ್ರಭಾಯಿ ಪಾಂಡೆ ಮತ್ತು ಅನುಪ್ ವೀರೇಂದ್ರ ಪ್ರಜಾಪತಿ ಎಂದು ಪೊಲೀಸರು ಗುರುತಿಸಿದ್ದು, ಉತ್ತರ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯ, ಕಾಲ್ ಲೀಸ್ಟ್ ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದ್ದು, ದಾಳಿಗೆ ಬಳಸಿದ ಬೈಕ್‌ನಲ್ಲಿ ನಕಲಿ ನಂಬರ್ಪ್ಲೇಟ್ ಅಳವಡಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ,(ಏಜೆನ್ಸೀಸ್).