Amit Shah | ಪ್ರತಿಯೊಬ್ಬ ನುಸುಳುಕೋರನನ್ನು ಹುಡುಕಿ ವಾಪಸ್ ಕಳಿಸ್ತೀವಿ ಎಂದ ಅಮಿತ್ ಷಾ
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಕ್ರಮ ನುಸುಳುವಿಕೆ ತಡೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಗುರುವಾರ ಮಹತ್ವದ ಹೇಳಿಕೆ ನೀಡಿದ್ದು, ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.
ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಷಾ, ಗಡಿ ಮೂಲಸೌಕರ್ಯ ಮತ್ತು ಭದ್ರತೆಯನ್ನು ಬಲಪಡಿಸಲು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ರಾಜ್ಯ ಸರ್ಕಾರವು ಕೇವಲ ಏಳು ದಿನಗಳಲ್ಲಿ ಸುಮಾರು 600 ಹೆಕ್ಟೇರ್ ಭೂಮಿಯನ್ನು ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸಿದೆ ಎಂದು ಶ್ಲಾಘಿಸಿದರು.
ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ಚಿಕನ್ ನೆಕ್ ಕಾರಿಡಾರ್ ಮೇಲೆ ವಿಶೇಷ ಗಮನ ಹರಿಸಲಾಗಿದ್ದು, ಅಲ್ಲಿ ಕಣ್ಗಾವಲು ಮತ್ತು ರಾಷ್ಟ್ರೀಯ ಭದ್ರತಾ ಕ್ರಮಗಳನ್ನು ಬಲಪಡಿಸಲು ಸುಮಾರು 121 ಹೆಕ್ಟೇರ್ ಭೂಮಿಯನ್ನು ಬಿಎಸ್‌ಎಫ್‌ಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಕ್ರಮದಿಂದಾಗಿ ಅಕ್ರಮ ನುಸುಳುಕೋರರ ಮೇಲೆ ಈಗಾಗಲೇ ಒತ್ತಡ ಸೃಷ್ಟಿಯಾಗಿದ್ದು, ಕಠಿಣ ಕಣ್ಗಾವಲಿನ ಹಿನ್ನೆಲೆಯಲ್ಲಿ ಅನೇಕ ನುಸುಳುಕೋರರು ತಾವಾಗಿಯೇ ಬಾಂಗ್ಲಾದೇಶಕ್ಕೆ ಹಿಂತಿರುಗುತ್ತಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.
ಇದೇ ವೇಳೆ, ಅಕ್ರಮ ವಲಸೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪಶ್ಚಿಮ ಬಂಗಾಳದಾದ್ಯಂತ ಡಿಟೆನ್ಷನ್ ಸೆಂಟರ್ಗಳನ್ನು (Detention Centres) ಅಭಿವೃದ್ಧಿಪಡಿಸಲಾಗುತ್ತಿದೆ, ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿರುವ ಬೇಲಿ ನಿರ್ಮಾಣ ಕಾರ್ಯವು ಶೀಘ್ರದಲ್ಲೇ ಪುನಾರಂಭಗೊಳ್ಳಲಿದ್ದು, ನುಸುಳುವಿಕೆಯ ಮಾರ್ಗಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಮತ್ತು ದೇಶದಲ್ಲಿರುವ ಪ್ರತಿಯೊಬ್ಬ ಅಕ್ರಮ ವಲಸಿಗನನ್ನು ಗುರುತಿಸಿ, ಅವರ ದೇಶಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಷಾ ಕೇಂದ್ರ ಸರ್ಕಾರದ ಕಠಿಣ ನಿಲುವನ್ನು ಪುನರುಚ್ಚರಿಸಿದರು.
ನುಸುಳುಕೋರರಿಗೆ ಸಿಎಂ ಸುವೇಂದು ಅಧಿಕಾರಿ ಖಡಕ್ ವಾರ್ನಿಂಗ್
ಇದಕ್ಕೂ ಮುನ್ನ ಮಂಗಳವಾರ ಮಾತನಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ರಾಜ್ಯದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ಬಾಂಗ್ಲಾ ಪ್ರಜೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದ್ದರು. ಇಂತಹ ಪ್ರಕರಣಗಳನ್ನು ನಿರ್ವಹಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಹೋಲ್ಡಿಂಗ್ ಕೇಂದ್ರಗಳನ್ನು (Holding Centres) ಸ್ಥಾಪಿಸುವ ಅಗತ್ಯವಿದೆ ಎಂದಿದ್ದರು. ವಿದೇಶಿಯರ ಕಾಯ್ದೆಯನ್ನು (Foreigners Act) ಉಲ್ಲೇಖಿಸಿದ ಸಿಎಂ ಸುವೇಂದು, ಈ ಕಾಯ್ದೆಯು ಹಲವು ವರ್ಷಗಳಿಂದ ಜಾರಿಯಲ್ಲಿದ್ದು, ಇದನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಬೇಕು, ಅಕ್ರಮ ನುಸುಳುಕೋರರನ್ನು ಸಾಮಾನ್ಯ ಜೈಲುಗಳಲ್ಲಿ ಇಡದೆ, ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಬೇಕು ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿಸಿದರು(ಏಜೆನ್ಸೀಸ್).