- ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹಕ್ಕೆ 750ಕ್ಕೂ ಮಂದಿ ದಾರುಣ ಸಾವು
- ಪವಾಡ ಸದೃಶ ಎನ್ನುವಂತೆ 3 ದಿನಗಳ ಹಿಂದೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬಾಲಕಿ ಜೀವಂತ
- ಕೆಸರಿನಡಿ ಅವಿತು ಹೋಗಿದ್ದ ಬಾಲಕಿ ಬದುಕಿ ಬಂದಿದ್ದೇ ಆದರೂ ಹೆತ್ತವರು ಮಿಸ್ಸಿಂಗ್
ಕಾಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹಕ್ಕೆ (Nepal Floods) ನೂರಾರು ಮಂದಿ ದಾರುಣವಾಗಿ ಸಾವಿಗೀಡಾದರೆ, ಇನ್ನೂ ಸಾವಿರಾರೂ ಮಂದಿಯ ಸುಳಿವೇ ಸಿಕ್ಕಿಲ್ಲ. ಮತ್ತೊಂದೆಡೆ, ಪವಾಡ ಸದೃಶ ಎನ್ನುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಮೂರು ದಿನಗಳ ಹಿಂದೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬಾಲಕಿ ಕೆಸರಿನಡಿ ಉಸಿರಾಡುತ್ತಿರುವುದನ್ನು ಗಮನಿಸಿದ ಕೂಡಲೇ ರಕ್ಷಣಾ ಪಡೆ ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.
ರಸುವಾ ಜಿಲ್ಲೆಯಲ್ಲಿ ಭೋಟೇಕೋಶಿ ನದಿ ಉಕ್ಕಿ ಹರಿದು ಸಂಭವಿಸಿದ ಭಾರಿ ದುರಂತದ ಮೂರು ದಿನಗಳ ಬಳಿಕ ತೇಲಿಬಂದ ದಪ್ಪನೆಯ ಕೆಸರು ಮತ್ತು ಕಸಗಳ ಅಡಿಯಲ್ಲಿ ಸಿಲುಕಿದ್ದ 6 ವರ್ಷದ ಬಾಲಕಿಯನ್ನು ರಕ್ಷಣಾ ಪಡೆಯ ಸಿಬ್ಬಂದಿಗಳು ಜೀವಂತವಾಗಿ ಹೊರತೆಗೆದಿದ್ದಾರೆ. ಸಾವಿನ ರೌದ್ರಾನರ್ತನ ತಾಂಡವವಾಡುತ್ತಿರುವ ದುರಂತ ಭೂಮಿಯಲ್ಲಿ ಈ ಬಾಲಕಿಯ ರಕ್ಷಣೆ ಕಾಣೆಯಾದವರ ಕುಟುಂಬಸ್ಥರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಪ್ರವಾಹದ ಹೊಡೆತಕ್ಕೆ ಸಿಲುಕಿದರೂ ಬದುಕಿ ಬಂದ ಬಾಲಕಿಯನ್ನು ಮನೀಷಾ ಮಗರ್ (6) ಎಂದು ಗುರುತಿಸಲಾಗಿದೆ. ರಸುವಾ ಜಿಲ್ಲೆಯ ಟಿಮುರೆ ಗ್ರಾಮದಲ್ಲಿ ಸಶಸ್ತ್ರ ಪೊಲೀಸ್ ಪಡೆ (APF) ಸಿಬ್ಬಂದಿ ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿದ್ದಾಗ, ಕೆಸರಿನಲ್ಲಿ ಅವಿತುಹೋಗಿದ್ದ ಮಗು ಅಳುತ್ತಿದ್ದ ಧ್ವನಿ ಕೇಳಿಸಿದ ಕೂಡಲೇ ರಕ್ಷಣಾ ಪಡೆ, ಕೆಸರನ್ನು ಅಗೆಯಲು ಆರಂಭಿಸಿತು. ಈ ವೇಳೆ, ಪುಟ್ಟ ಹುಡುಗಿಯ ಸುಳಿವು ಸಿಕ್ಕ ಕೂಡಲೇ ಆಕೆಯನ್ನು ಸುರಕ್ಷಿತವಾಗಿ ಹೊರತೆಗೆದು, ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ.
ಬಾಲಕಿಯನ್ನು ರಕ್ಷಿಸುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ರಕ್ಷಣಾ ಪಡೆಯ ನಿರಂತರ ಪ್ರಯತ್ನಕ್ಕೆ ಜಾಗತಿಕ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಪ್ರವಾಹದಲ್ಲಿ ಬಾಲಕಿಯ ಹೆತ್ತವರು ಕಣ್ಮರೆಯಾಗಿದ್ದು, ಆಕೆಯ ಕುಟುಂಬಸ್ಥರನ್ನು ಪತ್ತೆಹಚ್ಚುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಇದುವರೆಗೆ 750 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 2,400ಕ್ಕೂ ಹೆಚ್ಚು ಜನರು ಇನ್ನೂ ಮಿಸ್ಸಿಂಗ್ ಆಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಹೆಣಗಳ ರಾಶಿ ಅಕ್ಷರಶಃ ಬೆಚ್ಚಿಬೀಳಿಸುವಂತಿದೆ,(ಏಜೆನ್ಸೀಸ್).