Deepak Prakash | ಎಂಎಲ್‌ಎ ಅಲ್ಲ, ಎಂಎಲ್‌ಸಿ ಅಲ್ಲ...ಆದ್ರೂ 2 ಬಾರಿ ಸಚಿವ!...ಬಿಹಾರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿದ್ದೇನು ಗೊತ್ತಾ..? 
ದೇಶ

ಎಂಎಲ್‌ಎ ಅಲ್ಲ, ಎಂಎಲ್‌ಸಿ ಅಲ್ಲ...ಆದ್ರೂ 2 ಬಾರಿ ಸಚಿವ!...ಬಿಹಾರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿದ್ದೇನು ಗೊತ್ತಾ..? | Deepak Prakash

ನವದೆಹಲಿ: ಬಿಹಾರದ ಪಂಚಾಯತ್ ರಾಜ್ ಸಚಿವರಾಗಿರುವ ದೀಪಕ್ ಪ್ರಕಾಶ್ (Deepak Prakash), ಚುನಾಯಿತ ಪ್ರತಿನಿಧಿ ಅಲ್ಲದಿದ್ದರೂ ಆರು ತಿಂಗಳಿಗಿಂತ ಹೆಚ್ಚು ಕಾಲ ಸಚಿವ ಸ್ಥಾನದಲ್ಲಿ ಮುಂದುವರಿಯುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಈ ಕುರಿತು ಬಿಹಾರ ಸರ್ಕಾರವು ಸ್ಪಷ್ಟನೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠವು ಸೂಚನೆ ನೀಡಿದೆ.
ಇದು ಕಾನೂನಿನ ಪ್ರಶ್ನೆಯಾಗಿದ್ದು, ಚುನಾಯಿತರಾಗದಿದ್ದರೂ ಸಚಿವರು ಹೇಗೆ ಆರು ತಿಂಗಳಿಗಿಂತ ಹೆಚ್ಚು ಕಾಲ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ ಎಂಬುದಕ್ಕೆ ರಾಜ್ಯ ಸರ್ಕಾರ ಉತ್ತರಿಸಬೇಕಿದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ತಿಳಿಸಿದೆ. ಪ್ರಕರಣದ ವಿಚಾರಣೆಯನ್ನು ಆಗಸ್ಟ್ 4ಕ್ಕೆ ನಿಗದಿಪಡಿಸಲಾಗಿದ್ದು, ಈ ವಿಚಾರವು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಈ ಪ್ರಕರಣದ ಹಿನ್ನೆಲೆಯನ್ನು ಗಮನಿಸಿದರೆ, ಸಚಿವ ದೀಪಕ್ ಪ್ರಕಾಶ್ ಚುನಾಯಿತರಾಗದೆ ಸಚಿವ ಸ್ಥಾನದಲ್ಲಿ ಮುಂದುವರಿಯುತ್ತಿರುವುದು ಸಾಂವಿಧಾನಿಕ ಉಲ್ಲಂಘನೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ದೀಪಕ್ ಪ್ರಕಾಶ್ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ನಾಲ್ಕು ತಿಂಗಳು 26 ದಿನಗಳ ಕಾಲ ಪಂಚಾಯತ್ ರಾಜ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಏಪ್ರಿಲ್ 15 ರಂದು ನಿತೀಶ್ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಇವರ ಅವಧಿಯೂ ಮುಕ್ತಾಯಗೊಂಡಿತು.
ನಂತರದ 22 ದಿನಗಳ ಕಾಲ ದೀಪಕ್ ಯಾವುದೇ ಸಚಿವ ಸ್ಥಾನವನ್ನು ಹೊಂದಿರಲಿಲ್ಲ. ಆದರೆ ಮೇ 7 ರಂದು ಸಾಮ್ರಾಟ್ ಚೌಧರಿ ಹೊಸ ಸರ್ಕಾರವನ್ನು ರಚಿಸಿದಾಗ, ದೀಪಕ್ ಪ್ರಕಾಶ್ ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ರೀತಿ ಒಟ್ಟಾರೆಯಾಗಿ ಲೆಕ್ಕ ಹಾಕಿದಾಗ, ಅವರು ಯಾವುದೇ ಸದನದ ಸದಸ್ಯರಾಗದಿದ್ದರೂ ಆರು ತಿಂಗಳಿಗಿಂತ ಹೆಚ್ಚು ಕಾಲ ಸಚಿವ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇದೇ ಕಾರಣಕ್ಕೆ ಅರ್ಜಿದಾರರು ಇದನ್ನು ಸಂವಿಧಾನಕ್ಕೆ ಮಾಡಿದ ವಂಚನೆ ಎಂದು ಆರೋಪಿಸಿದ್ದಾರೆ.

ದೀಪಕ್​ ಪ್ರಕರಣದಲ್ಲಿ ಗೊಂದಲ!..

ಸಂವಿಧಾನದ 164(4)ನೇ ವಿಧಿಯು ಯಾವುದೇ ಸಚಿವರಿಗೆ ಚುನಾಯಿತರಾಗಲು ಆರು ತಿಂಗಳ ಕಾಲಾವಕಾಶವನ್ನು ನೀಡುತ್ತದೆ. ಒಂದು ವೇಳೆ ಸಚಿವರಾದ ವ್ಯಕ್ತಿಯು ಆರು ತಿಂಗಳೊಳಗೆ ಶಾಸಕಾಂಗದ ಸದಸ್ಯರಾಗಲು ವಿಫಲವಾದರೆ, ಅವರು ಸಚಿವ ಸ್ಥಾನದಿಂದ ಕೆಳಗಿಳಿಯಬೇಕು ಎಂಬುದು ಕಾನೂನಿನ ನಿಯಮ. ಆದರೆ, ದೀಪಕ್ ಪ್ರಕಾಶ್ ಪ್ರಕರಣವು ಸಾಮಾನ್ಯ ನಿಯಮಕ್ಕಿಂತ ಭಿನ್ನವಾಗಿದೆ. ಅವರು ಒಂದೇ ಬಾರಿಗೆ ಆರು ತಿಂಗಳ ಕಾಲಾವಧಿ ಪೂರೈಸಿಲ್ಲ, ಬದಲಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಮರುನೇಮಕಗೊಂಡಿದ್ದಾರೆ. ಹೀಗೆ ಆರು ತಿಂಗಳ ಕಾಲಾವಧಿ ಮುಗಿಯುವ ಮುನ್ನವೇ ರಾಜೀನಾಮೆ ನೀಡಿ, ಮತ್ತೆ ಅಧಿಕಾರ ಸ್ವೀಕರಿಸುವ ಮೂಲಕ ಆರು ತಿಂಗಳ ಗಡುವು ಮತ್ತೆ ಮೊದಲಿನಿಂದ ಆರಂಭವಾಗುತ್ತದೆ ಎಂದು ಹೇಳಿಕೊಳ್ಳಬಹುದೇ ಎಂಬುದು ಕಾನೂನಿನ ಮುಂದೆ ಇರುವ ದೊಡ್ಡ ಗೊಂದಲವಾಗಿದೆ.
ಈ ಹಿಂದೆ ಉದ್ಧವ್ ಠಾಕ್ರೆ, ತೀರತ್ ಸಿಂಗ್ ರಾವತ್ ಮತ್ತು ಹೆಚ್.ಡಿ. ದೇವೇಗೌಡರಂತಹ ನಾಯಕರು ಸಹ ಸಚಿವರಾದ ಬಳಿಕ ಚುನಾಯಿತರಾಗಿದ್ದರು. ಆದರೆ ಅವರೆಲ್ಲರೂ ನಿಗದಿತ ಕಾಲಮಿತಿಯೊಳಗೆ ವಿಧಾನ ಪರಿಷತ್ ಅಥವಾ ಉಪಚುನಾವಣೆಯ ಮೂಲಕ ಸದಸ್ಯರಾಗಿದ್ದರು. ಆದರೆ ಇಲ್ಲಿರುವ ಪ್ರಶ್ನೆಯೆಂದರೆ, ಆರು ತಿಂಗಳ ಗಡುವನ್ನು ತಪ್ಪಿಸಲು ರಾಜೀನಾಮೆ ನೀಡಿ ಮತ್ತೆ ಅಧಿಕಾರ ಸ್ವೀಕರಿಸುವ ತಂತ್ರವನ್ನು ಸಂವಿಧಾನ ಅನುಮತಿಸುತ್ತದೆಯೇ ಎಂಬುದು ಸದ್ಯದ ಯಕ್ಷಪ್ರಶ್ನೆಯಾಗಿದೆ.
ಯಾವುದೇ ನಾಯಕರು ತಮ್ಮ ರಾಜಕೀಯ ಅನುಕೂಲಕ್ಕಾಗಿ ಸಂವಿಧಾನದ ಅವಕಾಶಗಳನ್ನು ಪದೇ ಪದೇ ದುರುಪಯೋಗಪಡಿಸಿಕೊಳ್ಳಬಹುದೇ ಮತ್ತು ಆರು ತಿಂಗಳ ಆ ಗಡುವನ್ನು ಮರುಹೊಂದಿಸಲು ಇಂತಹ ತಂತ್ರಗಳನ್ನು ಬಳಸಬಹುದೇ ಎಂಬುದಕ್ಕೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅತ್ಯಂತ ನಿರ್ಣಾಯಕವಾಗಲಿದೆ. ಆಗಸ್ಟ್ 4 ರಂದು ನಡೆಯಲಿರುವ ಈ ವಿಚಾರಣೆಯು ದೇಶದ ರಾಜಕೀಯ ಮತ್ತು ಸಾಂವಿಧಾನಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗುವ ಸಾಧ್ಯತೆ ಇದೆ(ಏಜೆನ್ಸೀಸ್​).