ಅತ್ಯಾಚಾರ ಪ್ರಕರಣದ ಮುಚ್ಚಿಹಾಕಲು 5 ಕೋಟಿ ಡೀಲ್
- ಅತ್ಯಾಚಾರ ಪ್ರಕರಣದ ಮುಚ್ಚಿಹಾಕಲು 5 ಕೋಟಿ ಡೀಲ್
- ಪಂಜಾಬ್ ಸಿಎಂ ಪತ್ನಿ ಮೇಲೆ ಗಂಭೀರ ಆರೋಪ
- ತನಿಖೆ ನಡೆಸುವಂತೆ ಸರ್ಕಾರಕ್ಕೆ NHRC ನೋಟಿಸ್
ಪಂಜಾಬ್: ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ಅತ್ಯಾಚಾರ ಪ್ರಕರಣವೊಂದನ್ನು ಮುಚ್ಚಿಹಾಕಲು ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ಕೇಳಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC Notice to Punjab CM Wife), ಪಂಜಾಬ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಅಲ್ಲದೆ, ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಎರಡು ವಾರಗಳಲ್ಲಿ ವರದಿ ನೀಡುವಂತೆ ಪಂಜಾಬ್ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ (DGP) ಖಡಕ್ ಸೂಚನೆ ನೀಡಿದೆ.
ಅಸಲಿ ಸಂಗತಿ ಏನು?
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರಂಜಿತ್ ಸಿಂಗ್ ಅವರು ಈ ದೂರನ್ನು ನೀಡಿದ್ದು, ಸಿಎಂ ಭಗವಂತ್ ಮಾನ್ ಪತ್ನಿ ಅತ್ಯಾಚಾರ ಪ್ರಕರಣವೊಂದನ್ನು ಮುಚ್ಚಿಹಾಕಲು 5 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಇಂತಹ ಪ್ರಕರಣಗಳಲ್ಲಿ, ರಾಜ್ಯದ ಉನ್ನತ ಸ್ಥಾನದಲ್ಲಿರುವವರ ವಿರುದ್ಧವೇ ಇಂಥ ಗಂಭೀರ ಆರೋಪ ಕೇಳಿಬಂದಿರುವುದು ತೀವ್ರ ಕಳಳವಳಕಾರಿ ಎಂದು ಪ್ರಿಯಾಂಕ್ ಕಾನೂಂಗೊ ನೇತೃತ್ವದ NHRC ಪೀಠ ಅಭಿಪ್ರಾಯಪಟ್ಟಿದೆ. ಈ ವಿಷಯವನ್ನು ಕೇಂದ್ರ ಗೃಹ ಸಚಿವಾಲಯದ ಮಹಿಳಾ ಸುರಕ್ಷತಾ ವಿಭಾಗಕ್ಕೂ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ NHRC!
ಈ ವಿಚಾರವಾಗಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸುವಂತೆ NHRC ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಸಂವಿಧಾನ ನೀಡಿರುವ ಅಧಿಕಾರವನ್ನು ಜನರ ಕಲ್ಯಾಣಕ್ಕಾಗಿ ಬಳಸಬೇಕೇ ಹೊರತು, ರಾಜಕೀಯ ಒತ್ತಡಕ್ಕೆ ಮಣಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಬಹಿಷ್ಕಾರದ ಬಗ್ಗೆಯೂ ಸ್ಪಷ್ಟನೆ ಕೇಳಿದ ಆಯೋಗ ಪಂಜಾಬ್‌ನ ಗ್ರಾಮೀಣ ಹಾಗೂ ಗಡಿ ಭಾಗದ ಸರ್ಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಲ್ಲ ಎಂಬ ಮತ್ತೊಂದು ದೂರಿನ ಮೇಲೆಯೂ NHRC ಗರಂ ಆಗಿದೆ.
ಗಡಿ ಪ್ರದೇಶದ ಮಕ್ಕಳಿಗೆ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸುವ ಅವಕಾಶ ತಪ್ಪಿದ್ಯಾ? ಧ್ವಜಾರೋಹಣ ಮಾಡದ ಶಾಲೆಗಳೆಷ್ಟು? ಜಿಲ್ಲಾವಾರು ಮತ್ತು ಶಾಲಾವಾರು ಸಂಪೂರ್ಣ ವಿವರ ನೀಡಿ ಎಂದು ಪಂಜಾಬ್ ಸರ್ಕಾರಕ್ಕೆ ನಾಲ್ಕು ವಾರಗಳ ಗಡುವು ವಿಧಿಸಿ ವರದಿ ಕೇಳಲಾಗಿದೆ, (ಏಜನ್ಸೀಸ್).