ಪೊಲೀಸ್ ವಾಹನ ಡಿಕ್ಕಿ! ಮೂವರು ಬಾಲಕರ ದಾರುಣ ಸಾವು  WEB
ದೇಶ

ಪೊಲೀಸ್ ವಾಹನ ಡಿಕ್ಕಿ! ಮೂವರು ಬಾಲಕರ ದಾರುಣ ಸಾವು | Road Accident

ರಸ್ತೆ ಮೇಲೆ ವೇಗವಾಗಿ ಸಾಗುತ್ತಿದ್ದ ಪೊಲೀಸ್ ವಾಹನವೇ ಮೂವರು ಅಪ್ರಾಪ್ತ ಬಾಲಕರ ಪಾಲಿಗೆ ಮೃತ್ಯುವಾಗಿ ಅಪ್ಪಳಿಸಿದೆ ಟಿಪ್ಪರ್ ಲಾರಿಯನ್ನು ಹಿಂದಿಕ್ಕಲು ಹೋಗಿ ನಿಯಂತ್ರಣ ಕಳೆದುಕೊಂಡ ಪೊಲೀಸ್ ವಾಹನ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಈ ಭೀಕರ ಅಪಘಾತ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.Road Accident

ಗೊಂಡಿಯಾ: ರಸ್ತೆ ಮೇಲೆ ವೇಗವಾಗಿ ಸಾಗುತ್ತಿದ್ದ ಪೊಲೀಸ್ ವಾಹನವೇ ಮೂವರು ಅಪ್ರಾಪ್ತ ಬಾಲಕರ ಪಾಲಿಗೆ ಮೃತ್ಯುವಾಗಿ ಅಪ್ಪಳಿಸಿದೆ ಟಿಪ್ಪರ್ ಲಾರಿಯನ್ನು ಹಿಂದಿಕ್ಕಲು ಹೋಗಿ ನಿಯಂತ್ರಣ ಕಳೆದುಕೊಂಡ ಪೊಲೀಸ್ ವಾಹನ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಈ ಭೀಕರ ಅಪಘಾತ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

ಓವರ್‌ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿದ ವಾಹನ

ಗೊಂಡಿಯಾ-ತಿರೋರಾ ರಸ್ತೆಯ ದಾಂಡೆಗಾಂವ್ ಬಸ್ ನಿಲ್ದಾಣದ ಸಮೀಪ ಬುಧವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಏಕೋಡಿಯಿಂದ ಗಂಗಾಜಾರಿಗೆ ಮೂವರು ಬಾಲಕರು ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ 112 ತುರ್ತು ಪೊಲೀಸ್ ಸೇವೆಯ (ERSS) ವಾಹನ ಟಿಪ್ಪರ್ ಲಾರಿಯನ್ನು ಹಿಂದಿಕ್ಕಲು ಪ್ರಯತ್ನಿಸಿದೆ. ಆದರೆ ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ನೇರವಾಗಿ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಬೈಕ್‌ನಲ್ಲಿದ್ದ ಮೂವರಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

14 ಮತ್ತು 16 ವರ್ಷದ ಬಾಲಕರ ದುರಂತ ಅಂತ್ಯ

ಅಪಘಾತದಲ್ಲಿ ಮೃತಪಟ್ಟವರನ್ನು ಕಾರ್ತಿಕ್ ಬೃಜ್‌ಲಾಲ್ ಬಿಸೇನ್ (14), ಶಿವಪ್ರಸಾದ್ ಕಾಂಬ್ಳೆ (16) ಮತ್ತು ಜಿತೇಂದ್ರ ಬಾವಂಕರ್ (16) ಎಂದು ಗುರುತಿಸಲಾಗಿದೆ. ಮೂವರು ಬಾಲಕರ ಅಕಾಲಿಕ ಸಾವು ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಪೊಲೀಸ್ ವಾಹನದ ವಿರುದ್ಧ ಸ್ಥಳೀಯರ ಆಕ್ರೋಶ

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ವಾಹನದ ನಿರ್ಲಕ್ಷ್ಯದ ಚಾಲನೆಯೇ ದುರಂತಕ್ಕೆ ಕಾರಣ ಎಂದು ಆರೋಪಿಸಿ ಕೆಲಕಾಲ ರಸ್ತೆ ತಡೆ ನಡೆಸಿದ್ದಾರೆ. ಪರಿಸ್ಥಿತಿಯ ಗಂಭೀರತೆ ಮತ್ತು ಜನರ ಆಕ್ರೋಶವನ್ನು ಗಮನಿಸಿ ಗುರುವಾರ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಯ್ ಡೋಂಗ್ರೆ ಅವರ ಮಾರ್ಗದರ್ಶನದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ನಿಷ್ಪಕ್ಷಪಾತ ತನಿಖೆಯ ಭರವಸೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋರಖ್ ಭಮಾರೆ ಅವರು ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಮತ್ತೊಂದೆಡೆ, ಸ್ಥಳೀಯ ಶಾಸಕ ವಿನೋದ್ ಅಗ್ರವಾಲ್ ಅವರು ಮೃತಪಟ್ಟ ಬಾಲಕರ ಕುಟುಂಬಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಈ ನಡುವೆ ಅಪಘಾತಕ್ಕೆ ಕಾರಣವಾದ ಪೊಲೀಸ್ ವಾಹನವನ್ನು ಚಲಾಯಿಸುತ್ತಿದ್ದ ಅಮಿತ್ ಮಹುಲೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಅಜಾಗರೂಕ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.