ಕ್ಯಾಲಿಫೋರ್ನಿಯಾ: ಪ್ರೀತಿಯ ನಿವೇದನೆಗೆ ಸಮುದ್ರದ ಅಲೆಗಳೇ ಸಾಕ್ಷಿಯಾಗಬೇಕು ಎಂದು ಬಯಸಿದ್ದ ಯುವಕನಿಗೆ ಅದೇ ಅಲೆಗಳು ಮರೆಯಲಾಗದ ಆಘಾತ ನೀಡಿವೆ. ಗೆಳತಿಗೆ ಮೊಣಕಾಲೂರಿ ಪ್ರಪೋಸ್ ಮಾಡಿ, ಆಕೆಯನ್ನು ಎತ್ತಿಕೊಂಡು ಸಂಭ್ರಮಿಸುತ್ತಿದ್ದ ಯುವಕನ ಕೈಯಲ್ಲಿದ್ದ ಬರೋಬ್ಬರಿ 4 ಕ್ಯಾರೆಟ್ ವಜ್ರದ ಉಂಗುರವನ್ನು ಕ್ಷಣಾರ್ಧದಲ್ಲಿ ಬೃಹತ್ ಅಲೆಯೊಂದು ಕಸಿದುಕೊಂಡಿದೆ. ಪ್ರೇಮ ನಿವೇದನೆಯ ಸುಂದರ ಕ್ಷಣ ದಿಢೀರನೆ ಉಂಗುರ ಕಳೆದುಕೊಂಡ ದುಃಖದ ಘಟನೆಯಾಗಿ ಬದಲಾಗಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಕ್ಲೆಮೆಂಟೆಯ ಕ್ಯಾಲಾಫಿಯಾ ಸ್ಟೇಟ್ ಬೀಚ್ನಲ್ಲಿ ನವೆಂಬರ್ 15ರ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಸೂರ್ಯಾಸ್ತದ ಸುಂದರ ವಾತಾವರಣದಲ್ಲಿ ಜೇಸ್ ಹ್ಯಾರಿಕ್ ಎಂಬ ಯುವಕ ತನ್ನ ಬಹುಕಾಲದ ಗೆಳತಿ ಜೊಯಿ ಮ್ಯಾಟಿನ್ಸನ್ಗೆ ಮದುವೆಯಾಗುವಂತೆ ಪ್ರೇಮ ನಿವೇದನೆ ಮಾಡಿದ್ದಾನೆ. ಆಕೆಯೂ ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದಾಳೆ. ಇಬ್ಬರೂ ಸಂಭ್ರಮದಿಂದ ಅಪ್ಪಿಕೊಂಡು, ಯುವಕ ತನ್ನ ಭಾವಿ ಪತ್ನಿಯನ್ನು ಎತ್ತಿಕೊಂಡಿದ್ದಾನೆ. ಅಷ್ಟರಲ್ಲೇ ಸಮುದ್ರದಿಂದ ಅಪ್ಪಳಿಸಿದ ಬಲವಾದ ಅಲೆಯೊಂದು ಕೈಯಲ್ಲಿದ್ದ ಉಂಗುರದ ಪೆಟ್ಟಿಗೆಯನ್ನು ಕಸಿದುಕೊಂಡಿದೆ.
ಈ ಕ್ಷಣದ ವಿಡಿಯೊವನ್ನು ಜೇಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನನ್ನ ಜೀವನದ ಅತ್ಯಂತ ಸುಂದರ ಮತ್ತು ಅತ್ಯಂತ ಕ್ರೂರ ಕ್ಷಣ. ಪ್ರಕೃತಿ ಮಾತೆಯೇ, ದಯವಿಟ್ಟು ನಮ್ಮ ಉಂಗುರವನ್ನು ಮರಳಿಸು. ಸ್ಕೂಬಾ ಡೈವರ್ಗಳು ಹುಡುಕಾಟಕ್ಕೆ ಬರುತ್ತಿದ್ದಾರೆ ಎಂಬ ಅರ್ಥದ ಶೀರ್ಷಿಕೆ ನೀಡಿದ್ದಾರೆ.
ಸಿಬಿಎಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಜೇಸ್ ಘಟನೆಯ ಹಿಂದಿನ ಸಂಗತಿಯನ್ನು ವಿವರಿಸಿದ್ದಾರೆ. ಅಲೆಗಳ ಅಬ್ಬರ ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದ ಅವರು, ತನ್ನ ಗೆಳತಿ ನೀರಿನಲ್ಲಿ ಕೊಚ್ಚಿಹೋಗದಂತೆ ಆಕೆಯನ್ನು ಎತ್ತಿಕೊಳ್ಳಲು ನಿರ್ಧರಿಸಿದ್ದರು. ಆದರೆ ಅವರ ಜೇಬಿನಲ್ಲಿ ಮೊಬೈಲ್, ಪರ್ಸ್, ಕೀ ಸೇರಿದಂತೆ ಹಲವು ವಸ್ತುಗಳಿದ್ದ ಕಾರಣ ಉಂಗುರದ ಪೆಟ್ಟಿಗೆಯನ್ನು ಕೈಯಲ್ಲೇ ಹಿಡಿದುಕೊಂಡಿದ್ದರು. ಗೆಳತಿಯನ್ನು ಎತ್ತಿಕೊಂಡ ಕ್ಷಣದಲ್ಲೇ ಅಲೆ ಅಪ್ಪಳಿಸಿ ಉಂಗುರವನ್ನು ಸಮುದ್ರದ ಒಡಲಿಗೆ ಸೇರಿಸಿತು.
ಘಟನೆಯನ್ನು ಕಂಡು ಅಲ್ಲಿದ್ದ ಕೆಲವರು ಆರಂಭದಲ್ಲಿ ಈ ಜೋಡಿ ಸಂಭ್ರಮಿಸುತ್ತಿದೆ ಎಂದು ಭಾವಿಸಿದ್ದರು. ಆದರೆ ಉಂಗುರ ಕಳೆದುಹೋಗಿರುವುದು ತಿಳಿದ ಬಳಿಕ ಎಲ್ಲರೂ ಹುಡುಕಾಟಕ್ಕೆ ಕೈಜೋಡಿಸಿದ್ದಾರೆ. ಮೆಟಲ್ ಡಿಟೆಕ್ಟರ್ಗಳನ್ನು ಬಳಸುವ ನಿಧಿ ಶೋಧಕರು ಕೂಡ ಕಡಲತೀರದಲ್ಲಿ ಉಂಗುರಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೂ ಈವರೆಗೆ ಉಂಗುರ ಪತ್ತೆಯಾಗಿಲ್ಲ. ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಎಲ್ ನಿನೊ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಲವಾದ ಅಲೆಗಳು ಅಪ್ಪಳಿಸುತ್ತಿವೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಪೆಸಿಫಿಕಾ ಪಿಯರ್ನ ಒಂದು ಭಾಗವೂ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಕುಸಿದಿತ್ತು.
ದುಬಾರಿ ಉಂಗುರ ಕಳೆದುಕೊಂಡ ನೋವಿದ್ದರೂ ಜೇಸ್ ಮಾತ್ರ ತಮ್ಮ ಗೆಳತಿ ಸುರಕ್ಷಿತವಾಗಿರುವುದೇ ಮುಖ್ಯ ಎಂದು ಹೇಳಿದ್ದಾರೆ. ಈಗ ನಮ್ಮ ನಿಯಂತ್ರಣದಲ್ಲಿರುವುದು ನಮ್ಮ ಮನೋಭಾವ ಮಾತ್ರ. ನನ್ನ ಸಂಗಾತಿ ಸುರಕ್ಷಿತವಾಗಿದ್ದಾಳೆ ಎಂಬುದಕ್ಕೆ ನನಗೆ ಸಂತೋಷವಿದೆ. ಅದೇ ಮುಖ್ಯ' ಎಂದು ಅವರು ತಿಳಿಸಿದ್ದಾರೆ.
ಇನ್ನೊಂದೆಡೆ, ಈ ಜೋಡಿಯ ಸಂಕಷ್ಟಕ್ಕೆ ಸ್ಪಂದಿಸಿರುವ ನ್ಯೂಯಾರ್ಕ್ನ ಕೈಯಿಂದಲೇ ನಿಶ್ಚಿತಾರ್ಥದ ಉಂಗುರಗಳನ್ನು ತಯಾರಿಸುವ ಆಭರಣ ಮಳಿಗೆಯೊಂದು ಹೊಸ ಉಂಗುರವನ್ನು ತಯಾರಿಸಿಕೊಡುವುದಾಗಿ ಮುಂದೆ ಬಂದಿದೆ. ಹೀಗಾಗಿ ಸಮುದ್ರದ ಪಾಲಾದ ಉಂಗುರ ಮರಳಿ ಸಿಗದಿದ್ದರೂ ಈ ಜೋಡಿಯ ಪ್ರೇಮಕಥೆಗೆ ಮತ್ತೊಂದು ಸುಂದರ ತಿರುವು ಸಿಗುವ ನಿರೀಕ್ಷೆಯಿದೆ.ಸಮುದ್ರದ ಅಲೆಗಳು ಉಂಗುರವನ್ನು ಕಸಿದುಕೊಂಡಿರಬಹುದು; ಆದರೆ ಆ ಕ್ಷಣದ ಪ್ರೀತಿಯನ್ನಲ್ಲ ಎಂಬ ಭಾವನಾತ್ಮಕ ಪ್ರತಿಕ್ರಿಯೆಗಳು ಈ ಘಟನೆಯ ವಿಡಿಯೊಗೆ ವ್ಯಕ್ತವಾಗುತ್ತಿವೆ.