ಕೊಟ್ಟಾಯಂ: ನಿಮ್ಮ ಅಕ್ಕ ಮತ್ತು ಅಮ್ಮನ ಪ್ರಾಣ ಹೋಗುತ್ತೆ ಹುಷಾರ್ ಎಂದು ಬೆದರಿಸಿ, 10ನೇ ಕ್ಲಾಸ್ ವಿದ್ಯಾರ್ಥಿಯಿಂದ ಬರೋಬ್ಬರಿ 24 ಲಕ್ಷ ರೂ. ಚಿನ್ನವನ್ನು ಎಗರಿಸಿದ ಆರೋಪದಡಿ ಇದೀಗ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು, ವಿದ್ಯಾರ್ಥಿಯ ಪೋಷಕರು ಮತ್ತು ಸಹೋದರಿಯನ್ನು ಕೊಲ್ಲುವುದಾಗಿ ಬೆದರಿಸಿ ಈ ಚಿನ್ನವನ್ನು ಕಸಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರನ್ನು ಪಂಪಾಡಿಯ ನಿವಾಸಿಗಳಾದ ಅನ್ಸಲ್ ಮೊಹಮ್ಮದ್ (18), ನಿದಿನ್ ನಿಶಾದ್ (18) ಮತ್ತು ಶೆಬಿನ್ ಅಬ್ರಹಾಂ (19) ಎಂದು ಗುರುತಿಸಲಾಗಿದೆ.
ಪಂಪಾಡಿಯ ಖಾಸಗಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿ ಆರೋಪಿಗಳ ವಂಚನೆಗೆ ಸಿಲುಕಿದ ಬಾಲಕ ಎನ್ನಲಾಗಿದೆ. ಮೂವರು ಅಪ್ರಾಪ್ತರು, ಈ ವರ್ಷದ ಮಾರ್ಚ್ ತಿಂಗಳಿನಿಂದ ವಿದ್ಯಾರ್ಥಿಗೆ ಕೇವಲ ಬೆದರಿಕೆ ಹಾಕಿಕೊಂಡೇ ಇಲ್ಲಿಯವರೆಗೆ 24 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದಾರೆ. ಈ ಆರೋಪಿಗಳು, ಸಂತ್ರಸ್ತ ಓದುತ್ತಿರುವ ಶಾಲೆಯಲ್ಲೇ ಹಿಂದೆ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಎಂದು ವಿವರಿಸಲಾಗಿದೆ. ಶಾಲೆಯಲ್ಲಿದ್ದಾಗ ಸ್ನೇಹ ಬೆಳೆಸಿಕೊಂಡ ತಪ್ಪಿತಸ್ಥರು, ಈಗ ಅದೇ ವಿದ್ಯಾರ್ಥಿಗೆ ಬೆದರಿಕೆಯೊಡ್ಡಿ ಚಿನ್ನ ಪಡೆದಿದ್ದಾರೆ.
ಆರೋಪಿಗಳು, ಬಾಲಕನ ತಾಯಿ ಮತ್ತು ಸಹೋದರಿಯರ ಮೇಲೆ ಕಾರು ಹರಿಸಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಕಳೆದ 10 ತಿಂಗಳಿಂದ ಅವರು ಕೇಳಿದ್ದಷ್ಟು ಚಿನ್ನವನ್ನು ಯಾರಿಗೂ ಗೊತ್ತಿಲ್ಲದೆ ಮನೆಯಿಂದ ಸಾಗಿಸುತ್ತಿದ್ದ ಬಾಲಕ, ಆರೋಪಿಗಳ ಬೆದರಿಕೆಗೆ ಹೆದರಿ ಪೋಷಕರ ಬಳಿ ಏನೂ ಬಾಯ್ಬಿಟ್ಟಿಲ್ಲ. ಇತ್ತೀಚೆಗೆ ಮನೆಯಲ್ಲಿ ನಡೆದ ಸಾವಿನ ಘಟನೆ ನಂತರ, ತಾಯಿ ನಡೆಸಿದ ಪರಿಶೀಲನೆ ವೇಳೆ, ಮನೆಯಲ್ಲಿದ್ದ ಅಪಾರ ಪ್ರಮಾಣದ ಚಿನ್ನ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಮಗನ ಇತ್ತೀಚಿನ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದ ತಾಯಿ, ಆತನ ಮೊಬೈಲ್ ಚಾಟ್ಗಳನ್ನು ಚೆಕ್ ಮಾಡಿದ್ದಾರೆ. ಈ ವೇಳೆ, ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಿದಾಗ, ಆರೋಪಿಗಳು ಮಗುವಿಗೆ ಬೆದರಿಕೆ ಹಾಕುತ್ತಿರುವುದು ಗೊತ್ತಾಗಿದೆ. ಘಟನೆ ನಡೆದ ಹಿಂದಿನ ದಿನವೂ ಆರೋಪಿಗಳು ಮಗುವಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಸ್ಪಷ್ಟವಾಗಿದೆ. ಕೊನೆಯ ಮೆಸೇಜ್ನಲ್ಲಿ, ಬಾಲಕನಿಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಿ, ಆ ಹಣವನ್ನು ತಮಗೆ ತಂದುಕೊಡಬೇಕೆಂದು ಒತ್ತಾಯಿಸಿರುವುದು ತಿಳಿದುಬಂದಿದೆ.
ಬಾಲಕ ಈ ವಿಷಯವನ್ನು ಪೋಷಕರ ಬಳಿ ಬಾಯ್ಬಿಟ್ಟ ಕೂಡಲೇ ಅವರು ಪಂಪಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಮೂವರು ಅಪ್ರಾಪ್ತರನ್ನು ಬಂಧಿಸಿ, ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಎಸ್ಐ ಜೋಜನ್ ಜಾರ್ಜ್ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ದೋಚಿದ ಚಿನ್ನವನ್ನು ಮಾರಾಟ ಮಾಡಿದ್ದಾರೋ ಅಥವಾ ಬೇರೆ ಯಾವುದಕ್ಕಾದರೂ ಬಳಸಿಕೊಂಡಿದ್ದಾರೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಬಂಧಿತ ಮೂವರು ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ,(ಏಜೆನ್ಸೀಸ್).