ಮುಂಬೈ: 2008 ರ ನವೆಂಬರ್ 26 ರ ಆ ಕರಾಳ ರಾತ್ರಿಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಾಕಿಸ್ತಾನಿ ಉಗ್ರರು ಮುಂಬೈ ನಗರದಾದ್ಯಂತ ರಕ್ತದೋಕುಳಿ ಹರಿಸುತ್ತಿದ್ದಾಗ, ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಕೂಡ ಸಾವು-ನೋವಿನ ರಣರಂಗವಾಗಿ ಮಾರ್ಪಟ್ಟಿತ್ತು.
ಅಂದು ತಾಜ್ ಹೋಟೆಲ್‌ನಲ್ಲಿದ್ದ ನೂರಾರು ಅತಿಥಿಗಳು ಉಗ್ರರ ಗುಂಡಿಗೆ ಬಲಿಯಾಗುವ ಭೀತಿಯಲ್ಲಿದ್ದರು. ಇಂತಹ ಅತ್ಯಂತ ಆತಂಕದ ನಡುವೆ, ತನ್ನ ಪ್ರಾಣವನ್ನು ಲೆಕ್ಕಿಸದೆ ಬರೋಬ್ಬರಿ 60 ಕ್ಕೂ ಹೆಚ್ಚು ಜನರ ಜೀವ ಉಳಿಸಿದ 24 ವರ್ಷದ ಯುವತಿಯೊಬ್ಬರ ಸಾಹಸಗಾಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ದೇಶವೇ ಆಕೆಗೆ ಸಲಾಂ ಎನ್ನುತ್ತಿದೆ.
ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿರುವ ಆ ದಿಟ್ಟ ಮಹಿಳೆ ಮಲ್ಲಿಕಾ ಜಗದ್. ಅಂದು ಕೇವಲ 24 ವರ್ಷದ ಬ್ಯಾಂಕ್ವೆಟ್ ಮ್ಯಾನೇಜರ್ ಆಗಿದ್ದ ಮಲ್ಲಿಕಾ, ಉಗ್ರರ ಅಟ್ಟಹಾಸದ ನಡುವೆ ತೋರಿದ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆ ಇಂದು ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
26/11ರ ಆ ರಾತ್ರಿ ತಾಜ್ ಹೋಟೆಲ್‌ನ ಹೆರಿಟೇಜ್ ವಿಂಗ್ನಲ್ಲಿ ಯೂನಿಲಿವರ್ ಸಂಸ್ಥೆಯ ಔತಣಕೂಟ ನಡೆಯುತ್ತಿತ್ತು. ಇದರ ಸಂಪೂರ್ಣ ಉಸ್ತುವಾರಿಯನ್ನು ಮಲ್ಲಿಕಾ ಜಗದ್ ವಹಿಸಿಕೊಂಡಿದ್ದರು. ಹಾಲ್‌ನಲ್ಲಿ 60ಕ್ಕೂ ಹೆಚ್ಚು ಕಾರ್ಪೊರೇಟ್ ಅತಿಥಿಗಳು ನೆರೆದಿದ್ದರು.
ರಾತ್ರಿ 9.30ರ ಸುಮಾರಿಗೆ ಇದ್ದಕ್ಕಿದ್ದಂತೆ ಹೊರಗಿನಿಂದ ಜೋರಾದ ಸದ್ದು ಕೇಳಿಸತೊಡಗಿತು. ಮದುವೆ ಸಂಭ್ರಮದ ಪಟಾಕಿ ಸಿಡಿಸುತ್ತಿರಬಹುದು ಎಂದು ಅತಿಥಿಗಳು ಭಾವಿಸಿದ್ದರು. ಆದರೆ, ಹೋಟೆಲ್ ಸಿಬ್ಬಂದಿಯಾಗಿದ್ದ ಮಲ್ಲಿಕಾಗೆ ಅಲ್ಲಿ ಏನೋ ಭೀಕರವಾದದ್ದು ಸಂಭವಿಸುತ್ತಿದೆ ಎಂಬ ಶಂಕೆ ತಕ್ಷಣವೇ ಮೂಡಿತ್ತಂತೆ.
ಅದೇ ಸಂದರ್ಭದಲ್ಲಿ ಹೋಟೆಲ್‌ನ ಮುಖ್ಯ ಬ್ಯಾಂಕ್ವೆಟ್ ಮ್ಯಾನೇಜರ್ ಕಾರಿಡಾರ್‌ನ ಕೊನೆಯಲ್ಲಿದ್ದ ರೂಮ್‌ನಲ್ಲಿ ಸಿಲುಕಿಕೊಂಡಿದ್ದರು. ಅವರು ಸಮಯಪ್ರಜ್ಞೆ ಬಳಸಿ ಹಾಲ್‌ನ ಕೀಲಿಗಳನ್ನು ಮಲ್ಲಿಕಾ ಅವರತ್ತ ಎಸೆದರು. ತಡಮಾಡದ ಮಲ್ಲಿಕಾ, ತಕ್ಷಣವೇ ಬ್ಯಾಂಕ್ವೆಟ್ ಹಾಲ್‌ನ ಬೃಹತ್ ದ್ವಾರಗಳನ್ನು ಒಳಗಿನಿಂದ ಭದ್ರವಾಗಿ ಲಾಕ್ ಮಾಡಿದರು.
ಹೊರಗೆ ಎಷ್ಟು ಜನ ಉಗ್ರರಿದ್ದಾರೆ, ಅವರ ಕೈಯಲ್ಲಿ ಯಾವ ಮಾರಕಾಸ್ತ್ರಗಳಿವೆ ಎಂಬ ಕಲ್ಪನೆಯೂ ಮಲ್ಲಿಕಾಗೆ ಇರಲಿಲ್ಲ. ಆದರೆ ಒಳಗಿದ್ದವರನ್ನು ರಕ್ಷಿಸುವುದು ಅವರ ಮೊದಲ ಆದ್ಯತೆಯಾಗಿತ್ತು.
ತಕ್ಷಣವೇ ಹಾಲ್‌ನಲ್ಲಿದ್ದ ಎಲ್ಲಾ ದೀಪಗಳನ್ನು ಆರಿಸಿ, ಕಿಟಕಿಗಳನ್ನು ಮುಚ್ಚಿದರು. ಅತಿಥಿಗಳೆಲ್ಲರಿಗೂ ತಮ್ಮ ಮೊಬೈಲ್ ಫೋನ್‌ಗಳನ್ನು ಸೈಲೆಂಟ್ ಮೋಡ್‌ಗೆ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಭಯದಿಂದ ನಡುಗುತ್ತಿದ್ದ ಅತಿಥಿಗಳನ್ನು ನೆಲದ ಮೇಲೆ ಮತ್ತು ಮೇಜುಗಳ ಕೆಳಗೆ ಸದ್ದಿಲ್ಲದೆ ಅಡಗಿಕೊಳ್ಳುವಂತೆ ತಿಳಿಸಿದರು.
ರಾತ್ರಿಯಿಡೀ ಹೋಟೆಲ್‌ನ ಕಾರಿಡಾರ್‌ಗಳಲ್ಲಿ ಉಗ್ರರು ಗುಂಡು ಹಾರಿಸುತ್ತಾ ಸಾಗುತ್ತಿದ್ದರು. ಒಳಗೆ ಸಣ್ಣ ಶಬ್ದ ಕೇಳಿಸಿದರೂ ಸಾವು ಖಚಿತವಾಗಿತ್ತು. ಅತಿಥಿಗಳಲ್ಲಿ ಕೆಲವರು ಗಾಬರಿಯಿಂದ ಹೊರಗೆ ಹೋಗಲು ಪ್ರಯತ್ನಿಸಿದಾಗ, ಮಲ್ಲಿಕಾ ಅವರನ್ನು ತಡೆದು, ಶಾಂತವಾಗಿರಲು ವಿನಂತಿಸಿದರು. ಇಡೀ ರಾತ್ರಿ ಅತಿಥಿಗಳಿಗೆ ಧೈರ್ಯ ತುಂಬುತ್ತಾ, ಕಗ್ಗತ್ತಲ ಕೋಣೆಯಲ್ಲಿ ಆ 60 ಜನರ ಜೀವಕ್ಕೆ ರಕ್ಷಾಕವಚವಾಗಿ ಮಲ್ಲಿಕಾ ನಿಂತಿದ್ದರು.
ಮರುದಿನ ಮುಂಜಾನೆ ಹೋಟೆಲ್ ತುಂಬಾ ಹೊಗೆ ತುಂಬಿಕೊಳ್ಳಲು ಆರಂಭಿಸಿತು. ಅಗ್ನಿಶಾಮಕ ಸ್ಪ್ರಿಂಕ್ಲರ್‌ಗಳು ಆನ್ ಆದವು. ಅಂತಿಮವಾಗಿ ಸೇನೆ ಮತ್ತು ಕಮಾಂಡೋಗಳು ಸ್ಥಳಕ್ಕೆ ಧಾವಿಸಿ, ಬ್ಯಾಂಕ್ವೆಟ್ ಹಾಲ್‌ನಲ್ಲಿದ್ದ 60ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಾಗ ಎಲ್ಲರ ಪ್ರಾಣ ಉಳಿದಿತ್ತು.
ನಂತರದ ದಿನಗಳಲ್ಲಿ ಮಾತನಾಡಿದ್ದ ಮಲ್ಲಿಕಾ, ಇಂತಹ ಭಯೋತ್ಪಾದಕ ದಾಳಿ ಎದುರಿಸಲು ನಮಗೆ ಯಾವುದೇ ವಿಶೇಷ ತರಬೇತಿ ಇರಲಿಲ್ಲ. ಆದರೆ, ನಮ್ಮ ಹೋಟೆಲ್‌ಗೆ ಬಂದ ಅತಿಥಿಗಳು ಸುರಕ್ಷಿತವಾಗಿ ಮರಳುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು" ಎಂದು ಹೇಳಿದ್ದರು.
ಈ ಘಟನೆ ನಡೆದು 18 ವರ್ಷಗಳ ಬಳಿಕ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ಮಾಹಿತಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಮಲ್ಲಿಕಾ ಜಗದ್ ಅವರ ಅಪ್ರತಿಮ ಧೈರ್ಯಕ್ಕೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇವರೇ ಭಾರತದ ಅಸಲಿ ಹೀರೋಗಳು, ಮೂಕ ಯೋಧರು ಎಂದು ಬಣ್ಣಿಸುತ್ತಿದ್ದಾರೆ. ಕೆಲವರಂತೂ, 26/11ರ ಕರಾಳ ಸಂದರ್ಭದಲ್ಲಿ ಸಾಮಾನ್ಯ ಜನರ ಜೀವ ಉಳಿಸಲು ಹೋರಾಡಿದ ಹೋಟೆಲ್ ಸಿಬ್ಬಂದಿ, ಪೊಲೀಸರ ಸಾಹಸಗಾಥೆಯನ್ನು ಒಳಗೊಂಡ ವೆಬ್ ಸರಣಿ ಬರಬೇಕು ಎಂದು ಆಗ್ರಹಿಸಿದ್ದಾರೆ, (ಏಜೆನ್ಸೀಸ್).