

ನವದೆಹಲಿ: ಸಾಮಾನ್ಯವಾಗಿ ಮದುವೆ, ಪ್ರವಾಸ ಅಥವಾ ಮನೆ ಖರೀದಿಗಾಗಿ ಜನ ವರ್ಷಗಳ ಮುಂಚೆಯೇ ಯೋಜನೆ ರೂಪಿಸುತ್ತಾರೆ. ಆದರೆ, ಬದುಕಿರುವಾಗಲೇ ತಮ್ಮ ಸ್ವಂತ ಅಂತ್ಯಕ್ರಿಯೆಗೆ ಮುಂಚಿತವಾಗಿ ಬುಕ್ಕಿಂಗ್ ಮಾಡಿಕೊಳ್ಳುವ ಬಗ್ಗೆ ನೀವೆಂದಾದರೂ ಯೋಚಿಸಿದ್ದೀರಾ? ಕೇಳಲು ವಿಚಿತ್ರ ಎನಿಸಿದರೂ, ದೆಹಲಿ ಮೂಲದ ಸ್ಟಾರ್ಟ್‌ಅಪ್ ಕಂಪನಿ ಇಂಥದ್ದೊಂದು ವಿಭಿನ್ನ ಸೇವೆಯನ್ನು ಪರಿಚಯಿಸುವ ಮೂಲಕ ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
'ನಮೋ ಗಂಗೆ ವೆಲ್‌ನೆಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು 'ಮೋಕ್ಷ ವಾಯೇಜ್' (Moksh Voyage) ಹೆಸರಿನಲ್ಲಿ ಅಂತ್ಯಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ಯೋಜನಾ ಸೇವೆಗಳನ್ನು ಆರಂಭಿಸಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬದವರಿಗೆ, ಅಂತ್ಯಸಂಸ್ಕಾರದ ವ್ಯವಸ್ಥೆ ಮಾಡುವ ಒತ್ತಡ ಮತ್ತು ಅಲೆದಾಟವನ್ನು ತಪ್ಪಿಸುವುದೇ ಈ ಸ್ಟಾರ್ಟ್‌ಅಪ್‌ನ ಮುಖ್ಯ ಉದ್ದೇಶವಾಗಿದೆ.
ಮೋಕ್ಷ ವಾಯೇಜ್ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆಗೆ ಬೇಕಾದ ಪ್ರತಿಯೊಂದು ಸೇವೆಯನ್ನು ಒಂದೇ ಸೂರಿನಡಿ ಒದಗಿಸುತ್ತದೆ. ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ವಾಹನ, ಮೃತದೇಹವನ್ನು ಹೊರುವವರು, ಹೂವು, ಕಟ್ಟಿಗೆ ಹಾಗೂ ಪೂಜಾ ಸಾಮಗ್ರಿಗಳ ಕಿಟ್ ಸೇರಿದಂತೆ ಎಲ್ಲವನ್ನೂ ಕಂಪನಿಯೇ ವ್ಯವಸ್ಥೆ ಮಾಡುತ್ತದೆ.
ಇಷ್ಟೇ ಅಲ್ಲದೆ, ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಪುರೋಹಿತರ ವ್ಯವಸ್ಥೆ, ಅಸ್ಥಿ ಸಂಗ್ರಹಣೆ ಮತ್ತು ನದಿ ಘಟ್ಟಗಳಲ್ಲಿ ದೋಣಿಗಳ ಮೂಲಕ ಅಸ್ಥಿ ವಿಸರ್ಜನೆ ಮಾಡುವ ಸೌಲಭ್ಯವೂ ಇಲ್ಲಿದೆ. ಜೊತೆಗೆ ಅಂತ್ಯಕ್ರಿಯೆ ನಂತರ ನಡೆಯುವ ಶ್ರಾದ್ಧ ಹಾಗೂ ಪಿಂಡದಾನದಂತಹ ಕಾರ್ಯಗಳಿಗೂ ಕಂಪನಿ ನೆರವು ನೀಡುತ್ತದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಇಲ್ಲಿ ವಿವಿಧ ಪ್ಯಾಕೇಜ್‌ಗಳಿದ್ದು, ಕನಿಷ್ಠ 6,000 ರೂಪಾಯಿಯಿಂದ ಆರಂಭವಾಗಿ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ದರ ನಿಗದಿಪಡಿಸಲಾಗಿದೆ.
ವ್ಯಕ್ತಿಗಳು ತಾವು ಬದುಕಿರುವಾಗಲೇ ತಮ್ಮ ಅಂತ್ಯಕ್ರಿಯೆ ಹೇಗೆ ನಡೆಯಬೇಕು?, ಯಾವೆಲ್ಲಾ ವಿಧಿವಿಧಾನಗಳು ಇರಬೇಕು? ಎಂಬುದನ್ನು ಮೊದಲೇ ನಿರ್ಧರಿಸಿ ಬುಕ್ ಮಾಡುವ ವ್ಯವಸ್ಥೆ ಇಲ್ಲಿದೆ. ಇದರಿಂದ ಕೊನೆಯ ಕ್ಷಣದಲ್ಲಿ ಕುಟುಂಬದ ಸದಸ್ಯರ ಮೇಲೆ ಬೀಳುವ ಆರ್ಥಿಕ ಹಾಗೂ ಮಾನಸಿಕ ಹೊರೆ ತಪ್ಪುತ್ತದೆ ಎಂಬುದು ಕಂಪನಿಯ ವಾದವಾಗಿದೆ.
ಸದ್ಯ ದೆಹಲಿ-ಎನ್‌ಸಿಆರ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ಇತ್ತೀಚೆಗೆ ಇಂಡಿಯಾ ಇಂಟರ್‌ನ್ಯಾಷನಲ್ ಟ್ರೇಡ್ ಫೇರ್ನಲ್ಲೂ ತನ್ನ ಮಳಿಗೆ ತೆರೆದು ಜನರ ಗಮನ ಸೆಳೆದಿದೆ.
ಅಂತ್ಯಕ್ರಿಯೆಯ ಪ್ಯಾಕೇಜ್ ಮತ್ತು ಪ್ರೀ-ಬುಕ್ಕಿಂಗ್ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಪರ-ವಿರೋಧ ಹಾಗೂ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರರು, ಮಹಾನಗರಗಳಲ್ಲಿ ದುಃಖದ ಸಮಯದಲ್ಲಿ ಓಡಾಡಿ ವ್ಯವಸ್ಥೆ ಮಾಡುವವರು ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಕುಟುಂಬದವರಿಗೆ ಇದೊಂದು ಅತ್ಯಂತ ಸಹಾಯಕವಾದ ಸೇವೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ನೆಟ್ಟಿಗರು, "ಸರಿ ಹಾಗಾದ್ರೆ, ಇನ್ನು ನನಗೆ ಸಾಯುವ ಬಗ್ಗೆಯೂ ಚಿಂತೆಯಿಲ್ಲ... ಕೊನೆಯ ಪಕ್ಷ ಶವವನ್ನು ಹೊತ್ತುಕೊಂಡು ಹೋಗಲು ನಾಲ್ಕು ಜನರಂತೂ ಸಿಕ್ಕೇಬಿಡುತ್ತಾರೆ!" ಎಂದು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಆಧುನಿಕ ಕಾಲಘಟ್ಟದಲ್ಲಿ ಸ್ಟಾರ್ಟ್‌ಅಪ್‌ಗಳು ಎಷ್ಟರಮಟ್ಟಿಗೆ ಹೊಸ ದಾರಿಗಳನ್ನು ಹುಡುಕುತ್ತಿವೆ ಎಂಬುದಕ್ಕೆ ಈ ಸೇವೆ ಸಾಕ್ಷಿಯಾಗಿದೆ, (ಏಜೆನ್ಸೀಸ್).