

ಮೊಕಾಮಾ: ಬಿಹಾರದ ಮೊಕಾಮಾ ವಿಧಾನಸಭಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ ಅವರ ಕಿರಿಯ ಮಗಳು ಶಿವಾಂಗಿ ಸಿಂಗ್ ಅವರ ಅದ್ಧೂರಿ ವಿವಾಹ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಪಾಟ್ನಾ ಜಿಲ್ಲೆಯ ನಾಡ್ವಾನ್ ಗ್ರಾಮದಲ್ಲಿರುವ ಪೂರ್ವಜರ ಮನೆಯಲ್ಲಿ ಬುಧವಾರ (ನ.26) ಶಿವಾಂಗಿ ಮತ್ತು ರಿಷಿಕೇಶ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಜವೈಭವವನ್ನೂ ಮೀರಿಸುವಂತಿದ್ದ ಈ ಮದುವೆಯಲ್ಲಿ ಕರೆನ್ಸಿ ನೋಟುಗಳ ಮಳೆಯೇ ಸುರಿದಿದ್ದು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನೋಟುಗಳನ್ನು ಜನರು ಗುಡಿಸಿ ಸಂಗ್ರಹಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವಿವಾಹ ಸಂಭ್ರಮದ ನಡುವೆ ಅತಿಥಿಗಳು ಮತ್ತು ಸಂಬಂಧಿಕರು ಗಾಳಿಯಲ್ಲಿ ಕರೆನ್ಸಿ ನೋಟುಗಳನ್ನು ತೂರಿದ್ದಾರೆ. ನೆಲದ ತುಂಬಾ ಹರಡಿದ್ದ ಈ ನೋಟುಗಳನ್ನು ಅಲ್ಲಿದ್ದವರು ಗುಡಿಸಿ ಬಾಚಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಇನ್ನು ಕೆಲವರು ವಿಡಿಯೋದಲ್ಲಿ ಕಾಣಿಸುತ್ತಿರುವುದು ನಕಲಿ ನೋಟುಗಳು ಎಂದು ವಾದಿಸುತ್ತಿದ್ದಾರೆ. ಆದರೆ, ಅವು ಅಸಲಿ ನೋಟುಗಳೋ ಅಥವಾ ನಕಲಿಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅನಂತ್ ಸಿಂಗ್ ಕುಟುಂಬಕ್ಕೆ ಕುದುರೆಗಳೆಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಮದುವೆಯ ವಿಶೇಷ ಆಕರ್ಷಣೆಯಾಗಿ ಭರ್ಜರಿ ಕುದುರೆ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ರೇಸ್ ಗೆದ್ದವರಿಗೆ ಹೊಚ್ಚ ಹೊಸ 'ಮಹೀಂದ್ರಾ ಥಾರ್' ಕಾರನ್ನು ಬಹುಮಾನವಾಗಿ ಘೋಷಿಸಲಾಗಿತ್ತು. ಈ ದುಬಾರಿ ಬಹುಮಾನ ಗೆಲ್ಲಲು ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಿಂದ 52 ಕುದುರೆಗಳು ಹಾಗೂ ಸವಾರರು ಪೈಪೋಟಿಗೆ ಇಳಿದಿದ್ದರು.
ಆದರೆ, ರೇಸ್ ಅಂತಿಮ ಹಂತ ತಲುಪುತ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಪ್ರೇಕ್ಷಕರು ತಡೆಗೋಡೆಗಳನ್ನು ಮುರಿದು ಮೈದಾನಕ್ಕೆ ನುಗ್ಗಿದರು. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಆಯೋಜಕರು ತಕ್ಷಣವೇ ಸ್ಪರ್ಧೆಯನ್ನು ನಿಲ್ಲಿಸಿ, ಫೈನಲ್ ರೇಸ್ ಅನ್ನು ಗುರುವಾರಕ್ಕೆ ಮುಂದೂಡಿದ್ದಾರೆ. 2013ರಲ್ಲಿ ಸ್ವತಃ ಅನಂತ್ ಸಿಂಗ್ 'ಬಾದಲ್' ಎಂಬ ಕುದುರೆ ಎಳೆಯುವ, ಲೈಟಿಂಗ್ ಮತ್ತು ಮ್ಯೂಸಿಕ್ ಸಿಸ್ಟಮ್ ಇದ್ದ ಸಾರೋಟಿನಲ್ಲಿ ವಿಧಾನಸಭೆಗೆ ಬಂದು ಸುದ್ದಿಯಾಗಿದ್ದರು.
ಈ ಅದ್ಧೂರಿ ಮದುವೆಯ ಅಲಂಕಾರಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ನುರಿತ ತಜ್ಞರನ್ನು ಕರೆಸಲಾಗಿತ್ತು. ಉತ್ತರ ಪ್ರದೇಶದ 500 ಕುಶಲಕರ್ಮಿಗಳು, ಪಶ್ಚಿಮ ಬಂಗಾಳದಿಂದ ಲೈಟಿಂಗ್ ತಜ್ಞರು ಹಾಗೂ ಜೈಪುರ ಮತ್ತು ಮೊರಾದಾಬಾದ್‌ನಿಂದ ಅಲಂಕಾರಿಕ ತಜ್ಞರು ಆಗಮಿಸಿ ಹಗಲಿರುಳು ಶ್ರಮಿಸಿದ್ದರು.
ಮನೆಗೆ ಬರುವ 1.5 ಕಿ.ಮೀ ಉದ್ದದ ರಸ್ತೆಯುದ್ದಕ್ಕೂ ಬೃಹತ್ ಕಮಾನುಗಳು ಮತ್ತು ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಸುಮಾರು 10 ಬಿಘಾ ವಿಶಾಲ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಇದರ ಮಧ್ಯಭಾಗದಲ್ಲಿ 100 ಅಡಿ ಅಗಲ ಮತ್ತು 30 ಅಡಿ ಎತ್ತರದ ಗುಲಾಬಿ ಬಣ್ಣದ ಜೈಮಾಲಾ ವೇದಿಕೆಯನ್ನು ನಿರ್ಮಿಸಲಾಗಿತ್ತು.
ಜೈಪುರದ ಪ್ರಸಿದ್ಧ ಪತ್ರಿಕಾ ಗೇಟ್ ಮಾದರಿಯಲ್ಲಿ ಗುಮ್ಮಟ ಮತ್ತು ಕಂಬಗಳೊಂದಿಗೆ ನಿರ್ಮಿಸಲಾಗಿದ್ದ ಈ ವೇದಿಕೆ ಥೇಟ್ ರಾಜಮನೆತನದ ಅರಮನೆಯಂತೆ ಕಂಗೊಳಿಸುತ್ತಿತ್ತು. ಒಟ್ಟಿನಲ್ಲಿ ದುಬಾರಿ ಉಡುಗೊರೆ, ಭರ್ಜರಿ ಔತಣ ಹಾಗೂ ನೋಟುಗಳ ಮಳೆಯೊಂದಿಗೆ ನಡೆದ ಈ ಮದುವೆ ಬಿಹಾರ ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿದೆ, (ಏಜೆನ್ಸೀಸ್).