- ವಿಷಕಾರಿ ನೀರನ್ನು ಕುಡಿದು 25 ಕುರಿಗಳು ಸಾವು
- ವಿಷಕಾರಿ ನೀರಿನ ಮೂಲವಾದ ಕಾರ್ಖಾನೆಗೆ ಬೀಗ ಹಾಕಿದ ಪೊಲೀಸರು
- ಗ್ರಾಮಸ್ಥರಲ್ಲಿ ಹೆಚ್ಚಾದ ಭಯದ ವಾತಾವರಣ
ಉತ್ತರ ಪ್ರದೇಶ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ದಂಕೌರ್ ಪ್ರದೇಶದ ಮಹ್ಮದ್‌ಪುರ್ ಗುರ್ಜರ್ ಗ್ರಾಮದ ಬಳಿಯ ಕಾರ್ಖಾನೆಯ ವಿಷಕಾರಿ ನೀರು (Toxic Water) ಕುಡಿದು ಸುಮಾರು 25 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ಘಟನೆಯಿಂದ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಪಶುವೈದ್ಯರು ಆಗಮಿಸಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಕುರಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
25 ಕುರಿಗಳ ಸಾವು; 50 ಕುರಿಗಳು ಅಸ್ವಸ್ಥ
ವರದಿಗಳ ಪ್ರಕಾರ, ರಾಜಸ್ಥಾನದ ನಿವಾಸಿ ಬಾಲಾ ಸಿಂಗ್, ಮಹ್ಮದ್‌ಪುರ ಗುರ್ಜರ್ ಗ್ರಾಮದ ಬಳಿ ಮೇಯಿಸಲು ತಮ್ಮ ಕುರಿಗಳನ್ನು ಕರೆದೊಯ್ದಿದ್ದಾರೆ. ಹಾಗೇ ಮೇಯಿಸುತ್ತಿದ್ದಾಗ ಕುರಿಗಳು ಕಾರ್ಖಾನೆ ಹೊರಗೆ ಸಂಗ್ರಹವಾಗಿದ್ದ ನೀರನ್ನು ಕುಡಿದಿವೆ. ಸ್ವಲ್ಪ ಸಮಯದ ನಂತರ, ಕುರಿಗಳ ಸ್ಥಿತಿ ಹದಗೆಡಲು ಪ್ರಾರಂಭಿಸಿ, ಕೆಲವೇ ಕ್ಷಣಗಳಲ್ಲಿ 25 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಈ ಕಾರ್ಖಾನೆಯು ಅಲ್ಯೂಮಿನಿಯಂ ಮತ್ತು ಕಾರಿನ ಭಾಗಗಳನ್ನು ಕರಗಿಸಲು ರಾಸಾಯನಿಕಗಳನ್ನು ಬಳಸುತ್ತದೆ ಎಂದು ಆರೋಪಿಸಲಾಗಿದ್ದು, ಕಾರ್ಖಾನೆಯಿಂದ ವಿಷಕಾರಿ ತ್ಯಾಜ್ಯ ನೀರನ್ನು ಬಯಲಿಗೆ ಬಿಡಲಾಗುತ್ತಿತ್ತು, ಇದು ಈ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಕಾರ್ಖಾನೆ ಮಾಲೀಕನ ಬಂಧನ
ಮಾಹಿತಿ ದೊರೆತ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಖಾನೆ ಮಾಲೀಕರನ್ನು ಬಂಧಿಸಿ ಕಾರ್ಖಾನೆಗೆ ಬೀಗ ಹಾಕಿದ್ದಾರೆ. ಕಲುಷಿತ ನೀರಿನ ಮಾದರಿಗಳನ್ನು ಮತ್ತು ಕುರಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸತ್ತ ಕುರಿಗಳ ಮಾಲೀಕನ ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತಿದೆ ಎಂದು ಡಂಕೌರ್ ಪೊಲೀಸ್ ಠಾಣೆಯ ಉಸ್ತುವಾರಿ ಮುನೇಂದ್ರ ಸಿಂಗ್ ಹೇಳಿದ್ದಾರೆ.
ಕಾರ್ಖಾನೆ ಮಾಲೀಕ ತಪ್ಪಿತಸ್ಥರೆಂದು ಕಂಡುಬಂದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹ್ಮದ್‌ಪುರ ಗುರ್ಜರ್ ಗ್ರಾಮದಲ್ಲಿರುವ ಈ ಕಾರ್ಖಾನೆ ಕಳೆದ ಮೂರು ವರ್ಷಗಳಿಂದ ಗ್ರಾಮದ ನೀರನ್ನು ಕಲುಷಿತಗೊಳಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಲುಷಿತ ನೀರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಮತ್ತು ಹಲವಾರು ಜನರ ಸಾವಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್).