ಒಮರ್ ಅಬ್ದುಲ್ಲಾ  WEB
ದೇಶ

ಅಬ್ದುಲ್ಲಾ ಸರ್ಕಾರಕ್ಕೆ ಬಂಡಾಯದ ಭೀತಿ: 25 ಎನ್‌ಸಿ ಶಾಸಕರಿಂದ ಸಿಎಂಗೆ 14 ದಿನಗಳ ಅಂತಿಮ ಗಡುವು!...ರೆಬೆಲ್ಸ್​ಗಳ ಬೇಡಿಕೆ ಏನು ಗೊತ್ತಾ..? | National Conference

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ (National Conference) ಸರ್ಕಾರವು ದೊಡ್ಡ ಮಟ್ಟದಲ್ಲಿ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪಕ್ಷದ 25 ಅತೃಪ್ತ ಶಾಸಕರು ಮುಖ್ಯಮಂತ್ರಿಗೆ 14 ದಿನಗಳ ಗಡುವು ವಿಧಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಒಂದು ವೇಳೆ ತಮ್ಮ ಬೇಡಿಕೆಗಳು ಈಡೇರದಿದ್ದರೆ ರಾಜಭವನಕ್ಕೆ ತೆರಳಿ ಸರ್ಕಾರದ ಬೆಂಬಲವನ್ನು ಔಪಚಾರಿಕವಾಗಿ ಹಿಂಪಡೆಯುವುದಾಗಿ ಬಂಡಾಯ ಶಾಸಕರು ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯಿಂದ ಒಮರ್ ಅಬ್ದುಲ್ಲಾ ನಾಯಕತ್ವಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ.

ಬಂಡಾಯ ಶಾಸಕರು ಸರ್ಕಾರದ ಸಮಗ್ರ ಬದಲಾವಣೆಗೆ ಒತ್ತಾಯಿಸಿದ್ದು, ಹಾಲಿ ಇರುವ ಎಲ್ಲ ಸಚಿವರನ್ನು ಅವರ ಖಾತೆಗಳಿಂದ ತಕ್ಷಣವೇ ಮುಕ್ತಗೊಳಿಸಬೇಕು ಮತ್ತು ಮುಖ್ಯಮಂತ್ರಿಯವರ ಸಲಹೆಗಾರರನ್ನು ವಜಾಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಕೇವಲ ಕೆಲವೇ ವ್ಯಕ್ತಿಗಳ ಏಕಪಕ್ಷೀಯ ನಿರ್ಧಾರಗಳಿಗೆ ಅವಕಾಶ ನೀಡದೆ, ಸಂಪೂರ್ಣ ಶಾಸಕಾಂಗ ಪಕ್ಷದೊಂದಿಗೆ ಸಮಾಲೋಚನೆ ನಡೆಸಿ ಪಾರದರ್ಶಕ ಹಾಗೂ ಅರ್ಹತೆಯ ಆಧಾರದ ಮೇಲೆ ಹೊಸ ಸಚಿವ ಸಂಪುಟವನ್ನು ರಚಿಸಬೇಕೆಂದು ಬಂಡೆದ್ದವರು ಆಗ್ರಹಿಸಿದ್ದಾರೆ. ಇದರೊಂದಿಗೆ, ಆರ್ಟಿಕಲ್ 370 ಮತ್ತು 35ಎ ಹಾಗೂ ಇತರ ಸಾಂವಿಧಾನಿಕ ರಕ್ಷಣೆಗಳ ಮರುಸ್ಥಾಪನೆಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಬಲವಾದ ಒತ್ತಡ ಹೇರಬೇಕೆಂದು ಬಂಡಾಯ ಗುಂಪು ಬಯಸಿದೆ.

ಈ ಆಂತರಿಕ ಬಿಕ್ಕಟ್ಟಿನ ಜೊತೆಗೆ, ಶ್ರೀನಗರದ ಸಂಸದ ಆಘಾ ಸೈಯದ್ ರುಹುಲ್ಲಾ ಮೆಹದಿ ಅವರು ನವೆಂಬರ್ 3 ರಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಹಾಗೂ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿರುವುದು ಎನ್‌ಸಿ ಪಕ್ಷದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. 2019ರ ಆಗಸ್ಟ್ 5ರ ಸಾಂವಿಧಾನಿಕ ಬದಲಾವಣೆಗಳನ್ನು ಎದುರಿಸುವಲ್ಲಿ ಪಕ್ಷವು ತನ್ನ ಸೈದ್ಧಾಂತಿಕ ಬದ್ಧತೆಯಿಂದ ಹಿಂದೆ ಸರಿಯುತ್ತಿದೆ ಎಂದು ಅವರು ನೇರ ಆರೋಪ ಮಾಡಿದ್ದಾರೆ.

90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು 41 ಶಾಸಕರನ್ನು ಹೊಂದಿದೆ. ಪಕ್ಷದ ಒಳಗೆ 25 ಶಾಸಕರು ಬಂಡಾಯವೆದ್ದು ಬೆಂಬಲ ಹಿಂಪಡೆದರೆ, ಸರ್ಕಾರ ಬಹುಮತವನ್ನು ಕಳೆದುಕೊಳ್ಳಲಿದ್ದು, ಇದು ಒಮರ್ ಅಬ್ದುಲ್ಲಾ ನೇತೃತ್ವದ ಆಡಳಿತವನ್ನು ಅತ್ಯಂತ ದುರ್ಬಲಗೊಳಿಸಲಿದೆ. ಈ ಬಂಡಾಯವನ್ನು ಶಮನಗೊಳಿಸುವುದು, ಶಾಸಕರ ಬೇಡಿಕೆಗಳನ್ನು ಈಡೇರಿಸುವುದು ಮತ್ತು ಪಕ್ಷದ ವಿಭಜನೆಯನ್ನು ತಡೆಯುವುದು ಒಮರ್ ಅಬ್ದುಲ್ಲಾ ನಾಯಕತ್ವದ ಮುಂದಿರುವ ತಕ್ಷಣದ ಸವಾಲಾಗಿದೆ.

ಪಕ್ಷದ ಅಧಿಕೃತ ಸ್ಪಷ್ಟನೆ!

ಪಕ್ಷದಲ್ಲಿ ಯಾವುದೇ ಒಡಕಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಹಿರಿಯ ನಾಯಕರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿ ಪ್ರಾಂತೀಯ ಅಧ್ಯಕ್ಷ ಶೌಕತ್ ಅಹ್ಮದ್ ಮಿರ್, ಶಾಸಕರ ಭೋಜನ ಕೂಟವು ಸಾಮಾನ್ಯ ಸಭೆಯಾಗಿದ್ದು, ಇದರಲ್ಲಿ ಯಾವುದೇ ಬಂಡಾಯವಿಲ್ಲ ಎಂದಿದ್ದಾರೆ. ಸಚಿವ ಜಾವೀದ್ ಅಹ್ಮದ್ ರಾಣಾ ಮಾತನಾಡಿ, ಶಾಸಕರು ಪಕ್ಷದ ವೇದಿಕೆಯಲ್ಲಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲರ ಕುಂದುಕೊರತೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು.

ಈ ಬಂಡಾಯದ ಗುಂಪಿನಲ್ಲಿ ಹನ್ಸಿನ್​ ಮಸೂದಿ, ಮುಬಾರಕ್ ಗುಲ್, ಬಶೀರ್ ಅಹ್ಮದ್ ವೀರಿ ಸೇರಿದಂತೆ ಪ್ರಮುಖ ಶಾಸಕರು ಭಾಗಿಯಾಗಿದ್ದಾರೆ. ತಾವು ಯಾವುದೇ ಕಾರಣಕ್ಕೂ ಬಿಜೆಪಿಯ ಬೆಂಬಲ ಪಡೆಯುವುದಿಲ್ಲ ಮತ್ತು ಪಕ್ಷದ ಚೌಕಟ್ಟಿನೊಳಗೆಯೇ ತಮ್ಮ ಹಕ್ಕುಗಳಿಗಾಗಿ ಹೋರಾಡುವುದಾಗಿ ಶಾಸಕರು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ, ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಎನ್‌ಸಿ ಸರ್ಕಾರವು ಆಂತರಿಕ ಭಿನ್ನಮತದ ಬಿರುಗಾಳಿಗೆ ಸಿಲುಕಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್​).