'ಜನ್-ಮನ್ ಕಾ ಮ್ಯಾನಿಫೆಸ್ಟೋ' ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ 
ದೇಶ

25 ಲಕ್ಷ ಉದ್ಯೋಗ, 300 ಯೂನಿಟ್ ಕರೆಂಟ್ ಉಚಿತ: ಅಖಿಲೇಶ್ 'ಗ್ಯಾರಂಟಿ' ಅಸ್ತ್ರ; ಪ್ರಣಾಳಿಕೆಯ ಟಾಪ್ 10 ಭರವಸೆಗಳು ಇಲ್ಲಿವೆ! Akhilesh Yadav

ಲಖನೌ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಈಗಲೇ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಸಂವಿಧಾನ ದಿನದ ವಿಶೇಷ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಮುಂಬರುವ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

'ಜನ್-ಮನ್ ಕಾ ಮ್ಯಾನಿಫೆಸ್ಟೋ' (ಜನಸಾಮಾನ್ಯರ ಪ್ರಣಾಳಿಕೆ) ಮತ್ತು 'ಸತ್ತೈಸ್ ಕಾ ಸಂಕಲ್ಪ: ಪಿಡಿಎ (PDA) ಕಾ ಪ್ರಣಪತ್ರ' ಎಂಬ ಘೋಷವಾಕ್ಯದೊಂದಿಗೆ ಬಿಡುಗಡೆಯಾಗಿರುವ ಈ 28 ಪುಟಗಳ ಪ್ರಣಾಳಿಕೆಯಲ್ಲಿ ಉದ್ಯೋಗ, ರೈತರು, ಮಹಿಳೆಯರು ಹಾಗೂ ಸಾಮಾಜಿಕ ನ್ಯಾಯಕ್ಕೆ ಭರಪೂರ ಕೊಡುಗೆಗಳನ್ನು ಘೋಷಿಸಲಾಗಿದೆ. 21 ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿರುವ ಈ ಪ್ರಣಾಳಿಕೆಯ ಟಾಪ್ 10 ಅಂಶಗಳು ಇಲ್ಲಿವೆ:

1. 25 ಲಕ್ಷ ಸರ್ಕಾರಿ ಕೆಲಸ, ಪದವೀಧರರಿಗೆ ತಿಂಗಳಿಗೆ 5,000

ಯುವಜನತೆಯನ್ನು ಸೆಳೆಯಲು ಮುಂದಾಗಿರುವ ಅಖಿಲೇಶ್, ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಬರೋಬ್ಬರಿ 25 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಖಾಸಗಿ ಹಾಗೂ ಇತರ ವಲಯಗಳಲ್ಲಿ 2 ರಿಂದ 3 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದಾರೆ. ಪ್ರತಿಯೊಬ್ಬ ಪದವೀಧರರಿಗೂ ಕೆಲಸ ಸಿಗುವವರೆಗೆ ತಿಂಗಳಿಗೆ 5,000 ರೂಪಾಯಿ ನಿರುದ್ಯೋಗ ಭತ್ಯೆ ನೀಡುವ ಭರ್ಜರಿ ಘೋಷಣೆ ಮಾಡಿದ್ದಾರೆ.

2. 23 ಬೆಳೆಗಳಿಗೆ MSP ಗ್ಯಾರಂಟಿ; ರೈತರ ಸಾಲ ಮನ್ನಾ

ಅನ್ನದಾತರ ಮನಗೆಲ್ಲಲು ಹಾಲು ಸೇರಿದಂತೆ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಖಾತರಿ ನೀಡುವುದಾಗಿ ಹೇಳಲಾಗಿದೆ. ಇದರೊಂದಿಗೆ ಸಂಪೂರ್ಣ ಕೃಷಿ ಸಾಲ ಮನ್ನಾ, ಆಲೂಗಡ್ಡೆ, ಟೊಮೆಟೊ, ಈರುಳ್ಳಿಗೆ ಬೆಲೆ ಪರಿಹಾರ ಹಾಗೂ ಕಬ್ಬು ಬೆಳೆಗಾರರಿಗೆ 24 ಗಂಟೆಯೊಳಗೆ ಹಣ ಪಾವತಿಸಲು 15,000 ಕೋಟಿ ರೂ. ನಿಧಿ ಸ್ಥಾಪಿಸುವ ಭರವಸೆ ನೀಡಲಾಗಿದೆ.

3. ಹಳ್ಳಿ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್

ಗ್ರಾಮೀಣ ಭಾಗದ ಗೃಹಬಳಕೆದಾರರಿಗೆ ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ಕರೆಂಟ್ ಹಾಗೂ ರೈತರ ನೀರಾವರಿಗೆ ಸಂಪೂರ್ಣ ಉಚಿತ ವಿದ್ಯುತ್ ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

4. 26,000 ಶಾಲೆಗಳ ರೀ-ಓಪನ್ ಮತ್ತು ಉಚಿತ ಲ್ಯಾಪ್‌ಟಾಪ್

ಪ್ರಸ್ತುತ ಸರ್ಕಾರ ಮುಚ್ಚಿದೆ ಎನ್ನಲಾದ 26,000 ಪ್ರಾಥಮಿಕ ಶಾಲೆಗಳನ್ನು ಮತ್ತೆ ತೆರೆಯುವುದಾಗಿ ಎಸ್‌ಪಿ ಹೇಳಿದೆ. ಜೊತೆಗೆ, ಅಖಿಲೇಶ್ ಅವರ ಹಳೆಯ ಜನಪ್ರಿಯ ಯೋಜನೆಯಾದ 12ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆಯನ್ನು ಮರುಜಾರಿಗೊಳಿಸುವುದಾಗಿ ಘೋಷಿಸಲಾಗಿದೆ.

5. ಬಡವರಿಗೆ 10 ಲಕ್ಷದವರೆಗೆ ಆರೋಗ್ಯ ವಿಮೆ

ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ 10 ಲಕ್ಷ ರೂಪಾಯಿಗಳ ಆರೋಗ್ಯ ವಿಮಾ ರಕ್ಷಣೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಲಾಗಿದೆ.

6. ಜಾತಿ ಜನಗಣತಿ ಮತ್ತು ಪಿಡಿಎ (PDA) ಅಸ್ತ್ರ

ಹಿಂದುಳಿದ ವರ್ಗ, ದಲಿತರು ಮತ್ತು ಅಲ್ಪಸಂಖ್ಯಾತರನ್ನು (PDA) ಒಳಗೊಂಡ ಸಾಮಾಜಿಕ ನ್ಯಾಯಕ್ಕಾಗಿ ರಾಜ್ಯದಲ್ಲಿ ಜಾತಿ ಜನಗಣತಿ ನಡೆಸುವುದಾಗಿ ಎಸ್‌ಪಿ ಹೇಳಿದೆ. ಜೊತೆಗೆ 50 ಕೋಟಿ ರೂ.ವರೆಗಿನ ಸರ್ಕಾರಿ ಗುತ್ತಿಗೆಗಳಲ್ಲಿ ದಲಿತರು ಹಾಗೂ ಪಿಡಿಎ ಸಮುದಾಯಗಳಿಗೆ ಶೇ. 50ರಷ್ಟು ಮೀಸಲಾತಿ ನೀಡುವ ಮಹತ್ವದ ಭರವಸೆ ನೀಡಲಾಗಿದೆ.

7. ಹಳೆಯ ಪಿಂಚಣಿ ಯೋಜನೆ ಮರುಜಾರಿ

ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ಹಳೆಯ ಪಿಂಚಣಿ ಯೋಜನೆಯನ್ನು (OPS) ಮತ್ತೆ ಜಾರಿಗೆ ತರುವುದಾಗಿ ಅಖಿಲೇಶ್ ಘೋಷಿಸಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ಧತಿಗೆ ತಿಲಾಂಜಲಿ ಇಟ್ಟು, ಪತ್ರಿಕೆ ಸೋರಿಕೆ ತಡೆಯಲು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

8. 5 ರೂಪಾಯಿಗೆ ಊಟ, ಮಹಿಳೆಯರಿಗೆ 40,000 ಪಿಂಚಣಿ

ಬಡವರು ಮತ್ತು ಕಾರ್ಮಿಕರ ಹಸಿವು ನೀಗಿಸಲು ದೇಶಾದ್ಯಂತ 'ಸಮಾಜವಾದಿ ಕ್ಯಾಂಟೀನ್'ಗಳನ್ನು ತೆರೆದು ಕೇವಲ 5 ರೂಪಾಯಿಗೆ ಊಟ ನೀಡುವ ಯೋಜನೆ ಪ್ರಕಟಿಸಲಾಗಿದೆ. ಜೊತೆಗೆ ವೃದ್ಧ ಮಹಿಳಾ ಕುಶಲಕರ್ಮಿಗಳು ಹಾಗೂ ನಿರ್ಮಾಣ ಕಾರ್ಮಿಕರಿಗೆ ವಾರ್ಷಿಕ 40,000 ರೂಪಾಯಿ ಪಿಂಚಣಿ ನೀಡುವುದಾಗಿ ಹೇಳಲಾಗಿದೆ.

9. ಬೆಲೆ ಏರಿಕೆ ನಿಯಂತ್ರಣಕ್ಕೆ 'ದಾಮ್ ಬಂಧೋ' ಮಾರುಕಟ್ಟೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ರಾಮ್ ಮನೋಹರ್ ಲೋಹಿಯಾ ಅವರ ದಾಮ್ ಬಂಧೋ ನೀತಿಯಡಿ ಹಳ್ಳಿ ಮತ್ತು ನಗರಗಳಲ್ಲಿ ನಿಯಂತ್ರಿತ ಬೆಲೆಯ ಮಾರುಕಟ್ಟೆಗಳನ್ನು ತೆರೆಯಲಾಗುವುದು ಎಂದಿದ್ದಾರೆ.

10. ಮಹಿಳಾ ರಕ್ಷಣೆಗೆ ವಿಶೇಷ ಪೊಲೀಸ್ ಪಡೆ ಮತ್ತು AI ಕಣ್ಗಾವಲು

ಮಹಿಳೆಯರ ಮೇಲಿನ ಅಪರಾಧ ತಡೆಯಲು ಹಳ್ಳಿ ಮಟ್ಟದವರೆಗೂ ವಿಶೇಷ ಮಹಿಳಾ ಪೊಲೀಸ್ ವ್ಯವಸ್ಥೆ ಹಾಗೂ ಹೊಸ ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಲಾಗುವುದು. ಅಪರಾಧ ನಿಯಂತ್ರಣಕ್ಕೆ ಡ್ರೋನ್ ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಒಟ್ಟಿನಲ್ಲಿ, 2027ರ ಚುನಾವಣೆಗೆ ಸಾಕಷ್ಟು ಮುಂಚಿತವಾಗಿಯೇ ಅಖಿಲೇಶ್ ಯಾದವ್ ಈ ಭರ್ಜರಿ ಭರವಸೆಗಳ ಬತ್ತಳಿಕೆಯನ್ನು ಬಿಚ್ಚಿಟ್ಟಿದ್ದು, ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ಈಗಲೇ ಭಾರಿ ಚರ್ಚೆ ಶುರುವಾಗಿದೆ, (ಏಜೆನ್ಸೀಸ್​).