ಕಬೋರ್ಡ್‌ನಲ್ಲಿ ಕಂತೆ ಕಂತೆ ನೋಟು, 2.5 ಕೆಜಿ ಚಿನ್ನ: ಭ್ರಷ್ಟ ಸರ್ಕಾರಿ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ..!  
ದೇಶ

ಕಬೋರ್ಡ್‌ನಲ್ಲಿ ಕಂತೆ ಕಂತೆ ನೋಟು, 2.5 ಕೆಜಿ ಚಿನ್ನ: ಭ್ರಷ್ಟ ಸರ್ಕಾರಿ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ..! Lokayukta Raid

ಈ ಕಾರ್ಯಾಚರಣೆಯಲ್ಲಿ ಅಧಿಕಾರಿಯ ಮನೆಯಲ್ಲಿ ಬರೋಬ್ಬರಿ 2.5 ಕೆಜಿ ಚಿನ್ನ, 1.6 ಕೆಜಿ ಬೆಳ್ಳಿ ಹಾಗೂ ಲಕ್ಷಾಂತರ ರೂಪಾಯಿ ನಗದು ಸೇರಿದಂತೆ ಇದುವರೆಗೆ ಸುಮಾರು 7.6 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಭೋಪಾಲ್: ಸರ್ಕಾರಿ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಆದಾಯಕ್ಕಿಂತ ಹಲವು ಪಟ್ಟು ಹೆಚ್ಚು ಅಕ್ರಮ ಆಸ್ತಿ ಸಂಪಾದಿಸಿರುವ ಸರ್ಕಾರಿ ಅಧಿಕಾರಿಯೊಬ್ಬರಿಗೆ ಲೋಕಾಯುಕ್ತ ಅಧಿಕಾರಿಗಳು ( Lokayukta Raid ) ಬಿಗ್​ ಶಾಕ್ ನೀಡಿದ್ದಾರೆ.

ಮಧ್ಯಪ್ರದೇಶದ ಸತ್ಪುರ ಹುಲಿ ಸಂರಕ್ಷಿತ ಪ್ರದೇಶದ (Satpura Tiger Reserve) ಸಹಾಯಕ ನಿರ್ದೇಶಕ ಸಂಜೀವ್ ಕುಮಾರ್ ಶರ್ಮಾ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಧಿಕಾರಿಯ ಮನೆಯಲ್ಲಿ ಬರೋಬ್ಬರಿ 2.5 ಕೆಜಿ ಚಿನ್ನ, 1.6 ಕೆಜಿ ಬೆಳ್ಳಿ ಹಾಗೂ ಲಕ್ಷಾಂತರ ರೂಪಾಯಿ ನಗದು ಸೇರಿದಂತೆ ಇದುವರೆಗೆ ಸುಮಾರು 7.6 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಲ್ಲದೆ, ದಾಳಿ ಮತ್ತು ಪರಿಶೀಲನೆ ಕಾರ್ಯ ಇನ್ನೂ ಮುಂದುವರಿದಿದ್ದು, ಪತ್ತೆಯಾದ ಆಸ್ತಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಜೀವ್ ಕುಮಾರ್ ಶರ್ಮಾ ಅವರು ತಮ್ಮ ಅಧಿಕೃತ ಆದಾಯಕ್ಕಿಂತ ಭಾರಿ ಪ್ರಮಾಣದಲ್ಲಿ ಆಸ್ತಿ ಗಳಿಸಿದ್ದಾರೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ತಂಡವು ಪ್ರಾಥಮಿಕ ತನಿಖೆ ಕೈಗೊಂಡಿತ್ತು. ಈ ತನಿಖೆಯಲ್ಲಿ, ಶರ್ಮಾ ಅವರು ತಮ್ಮ ಆದಾಯಕ್ಕಿಂತ ಶೇ. 228 ರಷ್ಟು ಹೆಚ್ಚು ಅಕ್ರಮ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ದೃಢಪಟ್ಟಿತ್ತು. ಇದರ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಶೋಧ ಕಾರ್ಯ ನಡೆಸಲು ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು. ಬಳಿಕ ಭೋಪಾಲ್ ವಿಭಾಗದ ಲೋಕಾಯುಕ್ತ ವಿಶೇಷ ತಂಡಗಳು ಶರ್ಮಾ ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಆರಂಭಿಸಿವೆ.

ಶೋಧ ಕಾರ್ಯಾಚರಣೆಯ ವೇಳೆ ಅಧಿಕಾರಿಯ ಮನೆಯ ಕಬೋರ್ಡ್ ಮತ್ತು ರಹಸ್ಯ ಸ್ಥಳಗಳಲ್ಲಿ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ಸಂಪತ್ತು ಕಂಡು ಸ್ವತಃ ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ. ದಾಳಿಯಲ್ಲಿ ಬರೋಬ್ಬರಿ 26,36,800 ರೂಪಾಯಿ ನಗದು, ಸುಮಾರು 3.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು (ಸುಮಾರು 2.5 ಕೆಜಿ) ಹಾಗೂ 1.656 ಕೆಜಿ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇಷ್ಟೇ ಅಲ್ಲದೆ, ಶರ್ಮಾ ಅವರ ಮನೆಯಲ್ಲಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಅತ್ಯಾಧುನಿಕ ಗೃಹೋಪಯೋಗಿ ಉಪಕರಣಗಳು ಮತ್ತು ಐಷಾರಾಮಿ ವಸ್ತುಗಳು ಇರುವುದು ತನಿಖಾ ತಂಡದ ಗಮನಕ್ಕೆ ಬಂದಿದೆ.

ಅಕ್ರಮ ಸಂಪಾದನೆಯ ಹಣದಲ್ಲಿ ಸರ್ಕಾರಿ ಅಧಿಕಾರಿ ಐಷಾರಾಮಿ ವಾಹನಗಳನ್ನೂ ಖರೀದಿಸಿರುವುದು ದಾಳಿಯ ವೇಳೆ ಬಯಲಾಗಿದೆ. ತನಿಖಾ ತಂಡವು ಶರ್ಮಾ ಅವರ ಮನೆಯಿಂದ ಮಹೀಂದ್ರಾ ಸ್ಕಾರ್ಪಿಯೋ, ಮಹೀಂದ್ರಾ ಕೆ.ಯು.ವಿ, ರಾಯಲ್ ಎನ್‌ಫೀಲ್ಡ್ ಬುಲೆಟ್ ಹಾಗೂ ಒಂದು ಸ್ಕೂಟರ್ ಸೇರಿದಂತೆ ಒಟ್ಟು ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ನಾಲ್ಕು ವಾಹನಗಳ ಒಟ್ಟು ಮೌಲ್ಯ ಸುಮಾರು 31.2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸರ್ಕಾರಿ ಸಂಬಳದಲ್ಲಿ ಇಷ್ಟೊಂದು ಐಷಾರಾಮಿ ಜೀವನ ನಡೆಸುತ್ತಿದ್ದ ಅಧಿಕಾರಿಯ ಆಡಂಬರ ಕಂಡು ಸಾರ್ವಜನಿಕರು ಹುಬ್ಬೇರಿಸುವಂತಾಗಿದೆ.

ಲೋಕಾಯುಕ್ತ ಅಧಿಕಾರಿಗಳ ಪ್ರಾಥಮಿಕ ಅಂದಾಜಿನ ಪ್ರಕಾರ, ಇದುವರೆಗೆ ಪತ್ತೆಯಾಗಿರುವ ಒಟ್ಟು ಆಸ್ತಿಯ ಮೌಲ್ಯವು ಸಂಜೀವ್ ಕುಮಾರ್ ಶರ್ಮಾ ಅವರ ನೈಜ ಆದಾಯಕ್ಕಿಂತ ಸುಮಾರು ಶೇ. 560 ರಷ್ಟು ಹೆಚ್ಚಾಗಿದೆ. ದಾಳಿಯ ವೇಳೆ ಮಹತ್ವದ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳ ವಿವರಗಳು ಮತ್ತು ಹೂಡಿಕೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಸಮಗ್ರ ಪರಿಶೀಲನೆಯ ನಂತರವೇ ಅಕ್ರಮ ಆಸ್ತಿಯ ನಿಖರ ಮೌಲ್ಯ ತಿಳಿದುಬರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯ ಲೋಕಾಯುಕ್ತ ತಂಡವು ಶರ್ಮಾ ಅವರಿಗೆ ಸಂಬಂಧಿಸಿದ ಇನ್ನಷ್ಟು ಕೇಂದ್ರಗಳು ಮತ್ತು ಬೇನಾಮಿ ಆಸ್ತಿಗಳ ಮೇಲೂ ತನಿಖೆಯನ್ನು ವಿಸ್ತರಿಸಿದೆ, (ಏಜೆನ್ಸೀಸ್​).