Bhusaheb Wakchaure | ಸಂಸದ ವಾಕಚೌರೆ ನೀಡಿದ ಒಂದೇ ಒಂದು ಟ್ವಿಸ್ಟ್‌ಗೆ ಉದ್ಧವ್ ಕೋಟೆಯಲ್ಲಿ ನಡುಕ! 
ದೇಶ

ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ...ಸಂಸದ ವಾಕಚೌರೆ ನೀಡಿದ ಒಂದೇ ಒಂದು ಟ್ವಿಸ್ಟ್‌ಗೆ ಉದ್ಧವ್ ಕೋಟೆಯಲ್ಲಿ ನಡುಕ! | Bhusaheb Wakchaure

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷದಲ್ಲಿ ಮತ್ತೆ 2022ರ ತರಹದ ದೊಡ್ಡ ಒಡಕು ಉಂಟಾಗಲಿದೆಯೇ..? ಪಕ್ಷವು ಮತ್ತೊಮ್ಮೆ ಇಬ್ಭಾಗವಾಗುವ ಹಾದಿಯಲ್ಲಿದೆಯೇ..? ಇಂತಹದೊಂದು ಗಂಭೀರ ಚರ್ಚೆ ಈಗ ಮುಂಬೈ ಹಾಗೂ ದೆಹಲಿಯ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಸದ್ಯ ಉದ್ಧವ್ ಬಣದೊಳಗೆ ತೀವ್ರ ಅಸಮಾಧಾನದ ಹೊಗೆಯಾಡುತ್ತಿದ್ದು, ಪಕ್ಷದ ಕೆಲವು ಲೋಕಸಭಾ ಸಂಸದರು ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಸೇರಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ.
ಮೇಲ್ನೋಟಕ್ಕೆ ಉದ್ಧವ್ ಬಣದ ನಾಯಕರು ಈ ಸುದ್ದಿಯನ್ನು ಸುಳ್ಳು ಎಂದು ತಳ್ಳಿಹಾಕುತ್ತಿದ್ದರೂ, ಇತ್ತೀಚಿನ ಬೆಳವಣಿಗೆಗಳು ಪಕ್ಷದಲ್ಲಿ ದೊಡ್ಡ ಮಟ್ಟದ ಕ್ರಾಂತಿಯಾಗುವ ಮುನ್ಸೂಚನೆ ನೀಡುತ್ತಿವೆ. ಉದ್ಧವ್ ಠಾಕ್ರೆ ಬಣದ 9 ಲೋಕಸಭಾ ಸಂಸದರ ಪೈಕಿ 7 ಸಂಸದರು ದೆಹಲಿಯಲ್ಲಿ ಎನ್‌ಡಿಎ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

'ಮಾತೋಶ್ರೀ' ಸಭೆಗೆ ಐದು ಸಂಸದರ ಗೈರು

ಇತ್ತೀಚೆಗೆ ಉದ್ಧವ್ ಠಾಕ್ರೆ ಅವರು ತಮ್ಮ ಮಾತೋಶ್ರೀ ನಿವಾಸದಲ್ಲಿ ಕರೆದಿದ್ದ ಪ್ರಮುಖ ಸಭೆಗೆ 9 ಸಂಸದರ ಪೈಕಿ 5 ಸಂಸದರು ಬಾರದೇ ಇರುವುದು ಈ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸಭೆಗೆ ಅರವಿಂದ್ ಸಾವಂತ್, ಅನಿಲ್ ದೇಸಾಯಿ, ಸಂಜಯ್ ದಿನಾ ಪಾಟೀಲ್ ಮತ್ತು ರಾಜಾಭೌ ವಾಜೆ ಮಾತ್ರ ಖುದ್ದಾಗಿ ಬಂದಿದ್ದರು. ಆದರೆ, ಸಂಜಯ್ ಜಾಧವ್, ಸಂಜಯ್ ದೇಶ್‌ಮುಖ್, ಓಮ್ರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ನಾಗೇಶ್ ಪಾಟೀಲ್ ಅಷ್ಟೀಕರ್ ಸಭೆಗೆ ಹಾಜರಾಗಿರಲಿಲ್ಲ. ಆ ಐದು ಸಂಸದರು ವರ್ಚುವಲ್​ (ಆನ್‌ಲೈನ್) ಮೂಲಕ ಸಭೆಗೆ ಜಾಯಿನ್ ಆಗಿದ್ದರು ಎಂದು ಪಕ್ಷ ಸಮರ್ಥಿಸಿಕೊಂಡಿದೆ.
ಸಭೆಗೆ ಬಾರದೇ ಇದ್ದ ಐದು ಸಂಸದರ ಪೈಕಿ ಭೌಸಾಹೇಬ್ ವಾಕಚೌರೆ ಮಂಗಳವಾರ ಮಾತನಾಡಿ, ತಾವು ಉದ್ಧವ್ ಠಾಕ್ರೆ ಅವರೊಂದಿಗೇ ಇರುವುದಾಗಿ ಹೇಳುತ್ತಾ, ನಾಳೆಯ ದಿನ ಏನಾಗುತ್ತದೋ ನನ್ನನ್ನು ಕೇಳಬೇಡಿ ಎಂದು ಹೇಳುವ ಮೂಲಕ ಹೊಸ ಟ್ವಿಸ್ಟ್ ನೀಡಿದ್ದಾರೆ. ಇದಕ್ಕಿಂತ ಒಂದು ದಿನ ಮುಂಚೆ, ಇದೇ ಐದು ಸಂಸದರು ಆದಿತ್ಯ ಠಾಕ್ರೆ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲು ಕೂಡ ಬಂದಿರಲಿಲ್ಲ ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ.

ಉದ್ಧವ್ ಎಚ್ಚರಿಕೆ ಮತ್ತು ರಾವತ್ ಪೋಸ್ಟ್!...

ಮಾತೋಶ್ರೀಯಲ್ಲಿ ನಡೆದ ಸಭೆಯಲ್ಲಿ ಉದ್ಧವ್ ಠಾಕ್ರೆ ಬಂಡಾಯದ ವಿಷಯದ ಬಗ್ಗೆ ಮಾತನಾಡಿದ್ದು, ಯಾರಿಗೆ ಪಕ್ಷ ಬಿಟ್ಟು ಹೋಗಲು ಇಷ್ಟವಿದೆಯೋ, ಅವರು ಸಂತೋಷದಿಂದ ಹೋಗಬಹುದು ಎಂದಿರುವುದಾಗಿ ವರದಿಯಾಗಿದೆ. ಆದರೆ, ರಾಜ್ಯಸಭಾ ಸಂಸದ ಸಂಜಯ್ ರಾವತ್ ಈ ಮಾತನ್ನು ನಿರಾಕರಿಸಿದ್ದು, ನಾನು ಸಭೆಯಲ್ಲಿದ್ದೆ, ಉದ್ಧವ್ ಠಾಕ್ರೆ ಅಂತಹ ಯಾವುದೇ ಮಾತುಗಳನ್ನು ಆಡಿಲ್ಲ ಎಂದಿದ್ದಾರೆ.
ಆದರೆ, ಸೋಮವಾರ ರಾತ್ರಿ ಸಂಜಯ್ ರಾವತ್ ಅವರೇ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಾಕಿದ ಪೋಸ್ಟ್ ಬಂಡಾಯದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ತ್ರಿಪುರಾದ ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿಯ ಅಧ್ಯಕ್ಷ ಶಿವ ಕುಂಡು ಅವರ ಪಕ್ಷಕ್ಕೆ ತೃಣಮೂಲ ಕಾಂಗ್ರೆಸ್‌ನ 22 ಸಂಸದರು ಅಧಿಕೃತವಾಗಿ ಸೇರಿಕೊಂಡಿದ್ದಾರೆ. ಮಹಾರಾಷ್ಟ್ರದ ಪಕ್ಷಾಂತರಿಗಳು ಸಹ ತಮ್ಮನ್ನು ತಾವು ಉಳಿಸಿಕೊಳ್ಳಲು ಒಬ್ಬ ಕುಂಡು ಅವರನ್ನು ಹುಡುಕಿಕೊಳ್ಳಬೇಕಾಗಬಹುದು ಅನಿಸುತ್ತೆ ಎಂದು ರಾವತ್ ಬರೆದಿದ್ದಾರೆ. ಟಿಎಂಸಿ ಬಂಡಾಯದ ನೆಪದಲ್ಲಿ ರಾವತ್ ಅವರು ತಮ್ಮದೇ ಪಕ್ಷದಲ್ಲಿ ಒಡಕಿನ ಚರ್ಚೆ ನಡೆಯುತ್ತಿರುವಾಗ ಮಹಾರಾಷ್ಟ್ರದ ಪಕ್ಷಾಂತರಿಗಳು ಎಂದು ಉಲ್ಲೇಖಿಸಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ.

ಕೇಂದ್ರ ಸಚಿವರನ್ನು ಭೇಟಿಯಾದ ಸಂಸದ ಸಂಜಯ್​!

ಇದಲ್ಲದೆ, ಸಂಸದ ಸಂಜಯ್ ದೇಶ್‌ಮುಖ್ ಮಾತೋಶ್ರೀ ಸಭೆಗೆ ಗೈರಾದ ಮರುದಿನವೇ ಶಿಂಧೆ ಬಣದ ಕೇಂದ್ರ ಸಚಿವ ಪ್ರತಾಪರಾವ್ ಜಾಧವ್ ಅವರನ್ನು ಭೇಟಿಯಾಗಿರುವುದು ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದೆ. ಆದರೆ, ಸಂಸದರೊಬ್ಬರು ತಮ್ಮ ಕ್ಷೇತ್ರದ ಕೆಲಸಗಳಿಗಾಗಿ ಸಚಿವರನ್ನು ಭೇಟಿಯಾಗುವುದರಲ್ಲಿ ವಿಶೇಷವೇನೂ ಇಲ್ಲ ಎಂದು ರಾವತ್ ಹೇಳಿದ್ದಾರೆ. ಉದ್ಧವ್ ನಿಷ್ಠ ಸಂಸದ ಅನಿಲ್ ದೇಸಾಯಿ ಕೂಡ ಇದೇ ಮಾತು ಹೇಳಿದ್ದು, ಬಂಡಾಯದ ಸುದ್ದಿಯಲ್ಲಿ ಯಾವುದೇ ನಿಜವಿಲ್ಲ. ಮಾಧ್ಯಮಗಳಲ್ಲಿ ಒಂದು ವರ್ಷದಿಂದ ಆಪರೇಷನ್ ಟೈಗರ್ ಬಗ್ಗೆ ಚರ್ಚೆಯಾಗುತ್ತಿದೆ, ಆದರೆ ಇಲ್ಲಿ ಹುಲಿಯೂ ಕಾಣಿಸುತ್ತಿಲ್ಲ, ಆಪರೇಷನ್ ಕೂಡ ಕಾಣಿಸುತ್ತಿಲ್ಲ ಎಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಹುಲಿಯ ಮೇಲೆ ಆಪರೇಷನ್ ಮಾಡುವುದು ಅಷ್ಟು ಸುಲಭವಲ್ಲ ಎಂದು ರಾವತ್ ಸವಾಲು ಹಾಕಿದ್ದಾರೆ. ಮತ್ತೊಬ್ಬ ನಾಯಕ ಅರವಿಂದ್ ಸಾವಂತ್, ಇನ್ನೂ ಹುಲಿಗಳು ಉಳಿದಿವೆಯೇ..? ಅವೆಲ್ಲವೂ ಹಲ್ಲು ಕಿತ್ತಿದ ಹಾವಿನಂತಾಗಿವೆ ಎಂದು ಲೇವಡಿ ಮಾಡಿದ್ದಾರೆ.

ಶಿವಸೇನಾ ಸಂಸ್ಥಾಪನಾ ದಿನದ ಮೇಲೆ ಎಲ್ಲರ ಕಣ್ಣು

ಈ ಎಲ್ಲಾ ಬೆಳವಣಿಗೆಗಳ ನಡುವೆ, ಜೂನ್ 19 ರಂದು ನಡೆಯಲಿರುವ ಶಿವಸೇನೆಯ 60ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮುಂಬೈನ ಷಣ್ಮುಖಾನಂದ್ ಹಾಲ್‌ನಲ್ಲಿ ಉದ್ಧವ್ ಠಾಕ್ರೆ ಭಾರಿ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ. ಆದರೆ, ನಾಸಿಕ್‌ನ ಉದ್ಧವ್ ಬಣದ ಸಂಸದ ರಾಜಾಭೌ ವಾಜೆ ಅವರು ಸಂಸ್ಥಾಪನಾ ದಿನಕ್ಕೂ ಮುನ್ನವೇ ದೊಡ್ಡ ಮಟ್ಟದ ಏರುಪೇರಾಗುವ ಮುನ್ಸೂಚನೆ ನೀಡಿದ್ದಾರೆ. ತಾವು ಕಾರ್ಯಕ್ರಮಕ್ಕೆ ಹೋಗುವ ಬಗ್ಗೆ ಖಚಿತತೆ ಇಲ್ಲ ಎಂದಿರುವ ವಾಜೆ, ನಾನು ಅಂದು ದೆಹಲಿಯಿಂದ ಹಿಂತಿರುಗುತ್ತಿದ್ದು, ನನ್ನ ಕ್ಷೇತ್ರದಲ್ಲಿ ಕೆಲವು ಕಾರ್ಯಕ್ರಮಗಳಿವೆ. ಅದರ ನಂತರ ಸಮಯ ಸಿಕ್ಕರೆ ಮುಂಬೈಗೆ ಹೋಗುವ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾರೆ. ಇದರ ಬೆನ್ನಲ್ಲೇ ಜೂನ್ 22 ರಂದು ಶಿವಸೇನಾ ತನ್ನ ಎಲ್ಲಾ ಶಾಸಕರ ಪ್ರಮುಖ ಸಭೆಯನ್ನು ಕರೆದಿದೆ(ಏಜೆನ್ಸೀಸ್​​).