ವಿಶೇಷ ಅಧಿವೇಶನದಲ್ಲಿ ಮತ ಚಲಾಯಿಸಲು ಟಿಎಂಸಿಯ 20 ಬಂಡಾಯ ಸಂಸದರಿಗೆ ಮುಕ್ತ ಅವಕಾಶ  
ದೇಶ

ಮೋದಿ ಸರ್ಕಾರದ ಲೆಕ್ಕಾಚಾರಕ್ಕೆ ಸಿಕ್ತು ಬೂಸ್ಟ್! ವಿಶೇಷ ಅಧಿವೇಶನದಲ್ಲಿ ಮತ ಚಲಾಯಿಸಲು ಟಿಎಂಸಿಯ 20 ಬಂಡಾಯ ಸಂಸದರಿಗೆ ಮುಕ್ತ ಅವಕಾಶ | 20 Rebel Trinamool MPs

ನವದೆಹಲಿ: ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ 20 ಬಂಡಾಯ ಸಂಸದರು ತಮಗಿಷ್ಟ ಬಂದಂತೆ ಮತ ಚಲಾಯಿಸಲು ಸ್ವತಂತ್ರರಾಗಿದ್ದಾರೆ ಎಂದು ಲೋಕಸಭಾ ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ. ಮಹತ್ವದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಅಂಗೀಕರಿಸಲು ಆಡಳಿತಾರೂಢ ಎನ್‌ಡಿಎ ಸರ್ಕಾರಕ್ಕೆ ಈ 20 ಸಂಸದರ ಮತಗಳು ಅತ್ಯಂತ ನಿರ್ಣಾಯಕವಾಗಿವೆ.

ಅನರ್ಹತೆ ಪ್ರಕ್ರಿಯೆಯನ್ನು ಎದುರಿಸುತ್ತಿರುವ ಈ 20 ಸಂಸದರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆಯೇ ಎಂದು ಟಿಎಂಸಿ ರಾಜ್ಯಸಭಾ ಸಂಸದೆ ಸಾಗರಿಕಾ ಘೋಷ್ ಪ್ರಶ್ನಿಸಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ. ಅನರ್ಹತೆ ಕೋರಿ ಅರ್ಜಿ ಸಲ್ಲಿಸಿ ಆರು ತಿಂಗಳಾದರೂ ಇನ್ನೂ ನಿರ್ಧಾರ ತೆಗೆದುಕೊಳ್ಳದಿರುವ ಬಗ್ಗೆ ಘೋಷ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಸಂಸದೀಯ ನಿಯಮಗಳ ಪ್ರಕಾರ ಒಬ್ಬ ಸದಸ್ಯನನ್ನು ಅಧಿಕೃತವಾಗಿ ಅನರ್ಹಗೊಳಿಸುವವರೆಗೆ ಸದನದ ಕಲಾಪಗಳಲ್ಲಿ ಭಾಗವಹಿಸುವ ಮತ್ತು ಮತ ಚಲಾಯಿಸುವ ಎಲ್ಲಾ ಹಕ್ಕುಗಳನ್ನು ಆತ ಹೊಂದಿರುತ್ತಾನೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಅನರ್ಹತೆ ಅರ್ಜಿ ಬಾಕಿ ಇರುವ ಮಾತ್ರಕ್ಕೆ ಸದಸ್ಯರ ಹಕ್ಕುಗಳು ಅಮಾನತುಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕಳೆದ ಜೂನ್‌ನಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನುಭವಿಸಿದ ನಂತರ, ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಈ 20 ಸಂಸದರು ಪಕ್ಷದಿಂದ ಸಿಡಿದು ಎನ್‌ಸಿಪಿಐ ಎಂಬ ಅಪರಿಚಿತ ಪಕ್ಷ ಸೇರಿ ಎನ್‌ಡಿಎಗೆ ಬೆಂಬಲ ಘೋಷಿಸಿದ್ದರು. ಸ್ಪೀಕರ್ ಅವರಿಗೆ ಮನವಿ ಮಾಡಿ ಸದನದಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆಯನ್ನೂ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಎಲ್ಲಾ 20 ಸಂಸದರ ಅನರ್ಹತೆಗೆ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 26ರಂದು ನೋಟಿಸ್ ಪಡೆದಿದ್ದ ಬಂಡಾಯ ಸಂಸದರು, ಐದು ಬಾರಿ ಕಾಲಾವಕಾಶ ಪಡೆದ ನಂತರ ನವೆಂಬರ್ 24ರಂದು ತಮ್ಮ ಲಿಖಿತ ಉತ್ತರವನ್ನು ಸಲ್ಲಿಸಿದ್ದಾರೆ. ಸ್ಪೀಕರ್ ಇದನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮತ್ತೊಂದೆಡೆ, ಈ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಕೋರಿ ಟಿಎಂಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ರಿತಬ್ರತ ನೇಮಕಾತಿ ರದ್ದುಪಡಿಸಿದ ಕೋಲ್ಕತ್ತಾ ಹೈಕೋರ್ಟ್

ಇತ್ತ ರೆಬೆಲ್ಸ್​​ ಸಂಸದರಿಗೆ ಮತ ಚಲಾಯಿಸಲು ಅವಕಾಶ ಸಿಕ್ಕರೆ, ಅತ್ತ ವಿಧಾನಸಭೆಯ ವಿಪಕ್ಷ ನಾಯಕನಾಗಿ ರಿತಬ್ರತ ಬ್ಯಾನರ್ಜಿ ಅವರನ್ನು ನೇಮಿಸಿದ್ದ ವಿಧಾನಸಭಾ ಸ್ಪೀಕರ್ ಅವರ ನಿರ್ಧಾರವನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ.

ನ್ಯಾಯಮೂರ್ತಿ ಕೃಷ್ಣ ರಾವ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಮುಂದಿನ ಹತ್ತು ದಿನಗಳಲ್ಲಿ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಯಾರಾಗಬೇಕು ಎಂಬ ಬಗ್ಗೆ ಹೊಸದಾಗಿ ನಿರ್ಧಾರ ತೆಗೆದುಕೊಳ್ಳುವಂತೆ ವಿಧಾನಸಭಾ ಸ್ಪೀಕರ್ ರಥೀಂದ್ರ ಬೋಸ್ ಅವರಿಗೆ ನಿರ್ದೇಶನ ನೀಡಿದೆ. ಇದೇ ವೇಳೆ, ಟಿಎಂಸಿಯ ಬಂಡಾಯ ಬಣದ ನಾಯಕ ಅಖ್ರುಝಮಾನ್ ಅವರನ್ನು ಮುಖ್ಯ ಸಚೇತಕರಾಗಿ ನೇಮಿಸಿದ್ದ ಆದೇಶವನ್ನೂ ನ್ಯಾಯಾಲಯ ರದ್ದುಪಡಿಸಿದೆ. ರಿತಬ್ರತ ಬ್ಯಾನರ್ಜಿ ಮತ್ತು ಅಖ್ರುಝಮಾನ್ ಇಬ್ಬರೂ ಟಿಎಂಸಿಯ ಬಂಡಾಯ ಬಣವಾದ ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್​ಗೆ ಸೇರಿದವರಾಗಿದ್ದಾರೆ(ಏಜೆನ್ಸೀಸ್​).