ಕಾನೂನು ಸಮರದಲ್ಲಿ ಮಮತಾ ಬ್ಯಾನರ್ಜಿಗೆ ಜಯ! ವಿರೋಧ ಪಕ್ಷದ ನಾಯಕನ ನೇಮಕಾತಿ ರದ್ದುಪಡಿಸಿದ ಕೋಲ್ಕತ್ತಾ ಹೈಕೋರ್ಟ್ | Ritabrata Banerjee

ವಿರೋಧ ಪಕ್ಷದ ನಾಯಕನ ನೇಮಕಾತಿ ರದ್ದುಪಡಿಸಿದ ಕೋಲ್ಕತ್ತಾ ಹೈಕೋರ್ಟ್
ವಿರೋಧ ಪಕ್ಷದ ನಾಯಕನ ನೇಮಕಾತಿ ರದ್ದುಪಡಿಸಿದ ಕೋಲ್ಕತ್ತಾ ಹೈಕೋರ್ಟ್
Published on: 

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಶುಕ್ರವಾರ ಕಾನೂನು ಹೋರಾಟದಲ್ಲಿ ದೊಡ್ಡ ಜಯ ಲಭಿಸಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ರಿತಬ್ರತ ಬ್ಯಾನರ್ಜಿ (Ritabrata Banerjee) ಅವರನ್ನು ನೇಮಿಸಿದ್ದ ವಿಧಾನಸಭಾ ಸ್ಪೀಕರ್ ಅವರ ನಿರ್ಧಾರವನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ.

ನ್ಯಾಯಮೂರ್ತಿ ಕೃಷ್ಣ ರಾವ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಮುಂದಿನ ಹತ್ತು ದಿನಗಳಲ್ಲಿ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಯಾರಾಗಬೇಕು ಎಂಬ ಬಗ್ಗೆ ಹೊಸದಾಗಿ ನಿರ್ಧಾರ ತೆಗೆದುಕೊಳ್ಳುವಂತೆ ವಿಧಾನಸಭಾ ಸ್ಪೀಕರ್ ರಥೀಂದ್ರ ಬೋಸ್ ಅವರಿಗೆ ನಿರ್ದೇಶನ ನೀಡಿದೆ. ಇದೇ ವೇಳೆ, ಟಿಎಂಸಿಯ ಬಂಡಾಯ ಬಣದ ನಾಯಕ ಅಖ್ರುಝಮಾನ್ ಅವರನ್ನು ಮುಖ್ಯ ಸಚೇತಕರಾಗಿ ನೇಮಿಸಿದ್ದ ಆದೇಶವನ್ನೂ ನ್ಯಾಯಾಲಯ ರದ್ದುಪಡಿಸಿದೆ. ರಿತಬ್ರತ ಬ್ಯಾನರ್ಜಿ ಮತ್ತು ಅಖ್ರುಝಮಾನ್ ಇಬ್ಬರೂ ಟಿಎಂಸಿಯ ಬಂಡಾಯ ಬಣವಾದ ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್​ಗೆ ಸೇರಿದವರಾಗಿದ್ದಾರೆ.

Also Read
ಪಶ್ಚಿಮ ಬಂಗಾಳದಲ್ಲಿ ಮಹಾರಾಷ್ಟ್ರ ಮಾಡೆಲ್ ಬಂಡಾಯ!..ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬರುತ್ತಾ ಅಸಲಿ ಟಿಎಂಸಿ..? | TMC Crisis
ವಿರೋಧ ಪಕ್ಷದ ನಾಯಕನ ನೇಮಕಾತಿ ರದ್ದುಪಡಿಸಿದ ಕೋಲ್ಕತ್ತಾ ಹೈಕೋರ್ಟ್

ಪ್ರಕರಣದ ಹಿನ್ನೆಲೆ ಏನು?

ಈ ವರ್ಷದ ಆರಂಭದಲ್ಲಿ ನಡೆದ ಬಂಗಾಳ ವಿಧಾನಸಭಾ ಚುನಾವಣೆಯ ನಂತರ, ವಿಧಾನಸಭಾ ಸ್ಪೀಕರ್ ರಥೀಂದ್ರ ಬೋಸ್ ಅವರು ಟಿಎಂಸಿಯ ಬಂಡಾಯ ಬಣದ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರಾಗಿ ಮತ್ತು ಅಖ್ರುಝಮಾನ್ ಅವರನ್ನು ಮುಖ್ಯ ಸಚೇತಕರಾಗಿ ಮಾನ್ಯ ಮಾಡಿದ್ದರು. ಸ್ಪೀಕರ್ ಅವರ ಈ ನಿರ್ಧಾರವನ್ನು ಪ್ರಶ್ನಿಸಿ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಮೂಲ ಟಿಎಂಸಿ ಬಣದ ಹಿರಿಯ ಶಾಸಕ ಶೋಭನ್‌ದೇವ್ ಚಟ್ಟೋಪಾಧ್ಯಾಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವರ್ಷದ ಆರಂಭದಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ರಿತಬ್ರತ ಬ್ಯಾನರ್ಜಿ ಮತ್ತು ಅಖ್ರುಝಮಾನ್ ಅವರಿಗೆ ಎರಡು ತಿಂಗಳ ಕಾಲ ಮಧ್ಯಂತರ ನೆಲೆಯಲ್ಲಿ ತಮ್ಮ ಸ್ಥಾನಗಳಲ್ಲಿ ಮುಂದುವರಿಯಲು ಅನುಮತಿ ನೀಡಿತ್ತು. ಆದರೆ, ಅಕ್ಟೋಬರ್ 18ರಂದು ಆ ಎರಡು ತಿಂಗಳ ಮಧ್ಯಂತರ ಅವಧಿಯು ಮುಕ್ತಾಯಗೊಂಡಿತ್ತು.

ಮಧ್ಯಂತರ ಅವಧಿಯನ್ನು ನ್ಯಾಯಾಲಯ ವಿಸ್ತರಿಸದಿದ್ದರೂ, ರಿತಬ್ರತ ಬ್ಯಾನರ್ಜಿ ಮತ್ತು ಅಖ್ರುಝಮಾನ್ ಅವರು ಯಾವುದೇ ಕಾನೂನುಬದ್ಧ ಹಕ್ಕಿಲ್ಲದೆ ಆ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ ಎಂದು ಆರೋಪಿಸಿ ಶೋಭನ್‌ದೇವ್ ಚಟ್ಟೋಪಾಧ್ಯಾಯ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಕಾನೂನುಬದ್ಧ ಅಧಿಕಾರವಿಲ್ಲದಿದ್ದರೂ ಇಬ್ಬರೂ ಶಾಸಕರು ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ಸಚೇತಕರ ಹುದ್ದೆಗೆ ಸಂಬಂಧಿಸಿದ ಸರ್ಕಾರಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ ಎಂದು ಅವರು ವಾದಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ರಾವ್ ಅವರು ಸ್ಪೀಕರ್ ಆದೇಶವನ್ನು ರದ್ದುಗೊಳಿಸಿ ಮಮತಾ ಬ್ಯಾನರ್ಜಿ ಬಣಕ್ಕೆ ದೊಡ್ಡ ರಿಲೀಫ್ ನೀಡಿದ್ದಾರೆ(ಏಜೆನ್ಸೀಸ್​).