ದೇಶ

ಚುನಾವಣಾ ಆಯೋಗದಲ್ಲಿ ಲೆಟರ್​ ವಾರ್​!...ಪ್ರಧಾನಿ ಆಫೀಸ್‌ಗೆ ತಲುಪಿದ ಇಸಿಗಳ ರಹಸ್ಯ ಪತ್ರ; ಆರ್‌ಟಿಐನಲ್ಲಿ ಬಯಲಾಯ್ತು ಅಸಲಿ ಸತ್ಯ! | Election Commission

ನವದೆಹಲಿ: ಭಾರತೀಯ ಚುನಾವಣಾ ಆಯೋಗದ (Election Commission) ಇತಿಹಾಸದಲ್ಲೇ ಅಪರೂಪದ ಹಾಗೂ ತೀವ್ರ ಸಂಚಲನ ಮೂಡಿಸುವ ಘಟನೆಯೊಂದರಲ್ಲಿ, ಇಬ್ಬರು ಚುನಾವಣಾ ಆಯುಕ್ತರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬರೆಯುವ ಬದಲಾಗಿ ನೇರವಾಗಿ ಸಂಪುಟ ಕಾರ್ಯದರ್ಶಿಗೆ ದೂರು ಪತ್ರ ಬರೆದಿರುವುದು ಅಧಿಕೃತವಾಗಿ ದೃಢಪಟ್ಟಿದೆ.

ನವದೆಹಲಿ: ಭಾರತೀಯ ಚುನಾವಣಾ ಆಯೋಗದ (Election Commission) ಇತಿಹಾಸದಲ್ಲೇ ಅಪರೂಪದ ಹಾಗೂ ತೀವ್ರ ಸಂಚಲನ ಮೂಡಿಸುವ ಘಟನೆಯೊಂದರಲ್ಲಿ, ಇಬ್ಬರು ಚುನಾವಣಾ ಆಯುಕ್ತರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬರೆಯುವ ಬದಲಾಗಿ ನೇರವಾಗಿ ಸಂಪುಟ ಕಾರ್ಯದರ್ಶಿಗೆ ದೂರು ಪತ್ರ ಬರೆದಿರುವುದು ಅಧಿಕೃತವಾಗಿ ದೃಢಪಟ್ಟಿದೆ.

ಪ್ರಧಾನಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಹಾಗೂ ಸಂಪುಟ ಸಚಿವಾಲಯಗಳನ್ನೊಳಗೊಂಡ ಸೇವಾ ತೀರ್ಥ ಸಂಕೀರ್ಣಕ್ಕೆ ಈ ಪತ್ರಗಳು ತಲುಪಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾದ ಮಾಹಿತಿಯಿಂದ ಬಯಲಾಗಿದೆ.

ಸೆಪ್ಟೆಂಬರ್ 24 ರಂದು ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಗೆ ಅಕ್ಟೋಬರ್ 19 ರಂದು ಸಂಪುಟ ಸಚಿವಾಲಯ ಉತ್ತರ ನೀಡಿದ್ದು, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಜುಲೈ 29 ರಂದು ಬರೆದಿದ್ದ ಪ್ರತ್ಯೇಕ ಪತ್ರಗಳು ಜುಲೈ 30 ರಂದು ಸಚಿವಾಲಯಕ್ಕೆ ತಲುಪಿರುವುದನ್ನು ಖಚಿತಪಡಿಸಿದೆ. ಆ ಬಳಿಕ ಆಗಸ್ಟ್ 5 ರಂದು ಸಂಪುಟ ಕಾರ್ಯದರ್ಶಿಯವರು ಈ ಪತ್ರಗಳನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಕಾರಿಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ರವಾನಿಸಿದ್ದಾರೆ.

ಇದನ್ನೂ ಓದಿ:SIR ವಿವಾದಕ್ಕೆ ಬ್ರೇಕ್: ಮತದಾರರ ಫಾರ್ಮ್-6 ನಲ್ಲಿದ್ದ ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ!

ಪತ್ರದಲ್ಲೇನಿದೆ?: ವಿವಾದಕ್ಕೆ ಕಾರಣವಾದ ಜುಲೈ 28 ರ ಆದೇಶ

ಆಯುಕ್ತರ 10 ಪುಟಗಳ ಪತ್ರ, 2 ಪುಟಗಳ ಪ್ರತ್ಯುತ್ತರ ಹಾಗೂ 2 ಪುಟಗಳ ಫೈಲ್ ನೋಟಿಂಗ್ಸ್ ಸೇರಿದಂತೆ ಒಟ್ಟು 14 ಪುಟಗಳ ದಾಖಲೆಗಳ ಪೈಕಿ ಪತ್ರದ ನಿಖರ ವಿಷಯವನ್ನು ಸಚಿವಾಲಯ ಇನ್ನೂ ಬಹಿರಂಗಪಡಿಸಿಲ್ಲ. ನಿಯಮಾನುಸಾರ 28 ರೂಪಾಯಿ ಶುಲ್ಕ ಪಾವತಿಸಿದ ಬಳಿಕವಷ್ಟೇ ಈ ಪತ್ರದ ಪೂರ್ಣ ಪ್ರತಿಗಳು ಲಭ್ಯವಾಗಲಿವೆ.

ಜುಲೈ 28 ರಂದು ಹೊರಡಿಸಲಾಗಿದ್ದ ಆಂತರಿಕ ಕೆಲಸದ ಹಂಚಿಕೆ ಆದೇಶವೇ ಈ ದೊಡ್ಡ ವಿವಾದಕ್ಕೆ ಮೂಲ ಕಾರಣ ಎಂದು ಹೇಳಲಾಗಿದೆ. ವೋಟರ್ ಐಡಿ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ತಾಂತ್ರಿಕ ವಿಭಾಗದ ಮೇಲ್ವಿಚಾರಣೆಯಲ್ಲಿದ್ದ ಮೇಲ್ಮಟ್ಟದ ಅಧಿಕಾರ ವ್ಯಾಪ್ತಿಯನ್ನು ಈ ಆದೇಶದ ಮೂಲಕ ಹಿಂಪಡೆಯಲಾಗಿತ್ತು. ಈ ಪ್ರಮುಖ ಬದಲಾವಣೆಯನ್ನು ತಮ್ಮ ಗಮನಕ್ಕೆ ತರದೆ, ತಮಗರಿವಿಲ್ಲದೇ ಏಕಪಕ್ಷೀಯವಾಗಿ ಮಾಡಲಾಗಿದೆ ಎಂದು ಇಬ್ಬರು ಆಯುಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಆಯೋಗದ ಸ್ಪಷ್ಟನೆ!

ಈ ವಿವಾದ ಬಹಿರಂಗಗೊಳ್ಳುತ್ತಿದ್ದಂತೆ ಸೆಪ್ಟೆಂಬರ್ 26 ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಚುನಾವಣಾ ಆಯೋಗ, ಸಂಪುಟ ಕಾರ್ಯದರ್ಶಿಗೆ ಬರೆದ ಪತ್ರವು ಆಯೋಗದ ಯಾವುದೇ ನೀತಿ ಅಥವಾ ಐಟಿ ವಿಭಾಗಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ನಿಯೋಜನೆಯಲ್ಲಿದ್ದ ಅಧಿಕಾರಿಯೊಬ್ಬರ ಕಾರ್ಯವೈಖರಿಗೆ ಸಂಬಂಧಿಸಿದ್ದಾಗಿದೆ. ಆದೇಶವನ್ನು ಜಾರಿಗೆ ತರಲಾಗಿರಲಿಲ್ಲ ಹಾಗೂ ಐಟಿ ವಿಭಾಗದ ಮೇಲ್ವಿಚಾರಣೆಯನ್ನು ಹಿಂಪಡೆದಿರಲಿಲ್ಲ ಎಂದು ಸ್ಪಷ್ಟನೆ ನೀಡಲು ಯತ್ನಿಸಿತ್ತು.

ಆದಾಗ್ಯೂ, ಈವರೆಗೆ ಕೇವಲ ಸೋರಿಕೆಯಾದ ಮಾಹಿತಿ ಮತ್ತು ಪತ್ರಿಕಾ ಪ್ರಕಟಣೆಗಳ ಆಧಾರದ ಮೇಲಿದ್ದ ವಿವಾದಕ್ಕೆ ಈ ಆರ್‌ಟಿಐ ಉತ್ತರವು ಮೊದಲ ಅಧಿಕೃತ ಪುರಾವೆಯಾಗಿ ಸಿಕ್ಕಿದೆ. ಪತ್ರಗಳ ರವಾನೆ, ದಿನಾಂಕ ಮತ್ತು ಪ್ರಕ್ರಿಯೆಯ ಸತ್ಯಾಸತ್ಯತೆಯನ್ನು ಇದು ಖಾತರಿಪಡಿಸಿದೆ. ನಿಗದಿತ ಶುಲ್ಕ ಪಾವತಿಯಾದ ನಂತರ ಈ 14 ಪುಟಗಳ ಸಂಪೂರ್ಣ ವಿವರಗಳು ಹೊರಬೀಳಲಿದ್ದು, ದೇಶದ ಸ್ವಾಯತ್ತ ಸಂಸ್ಥೆಯೊಂದರ ಆಂತರಿಕ ಬಿಕ್ಕಟ್ಟಿನ ನಿಜವಾದ ಸತ್ಯಾಂಶ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ(ಏಜೆನ್ಸೀಸ್​).