ಶೀಘ್ರ ಬಿಡುಗಡೆಗೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಬಾಂಬೆ ಹೈಕೋರ್ಟ್​ 
ದೇಶ

1993 ಬಾಂಬ್​ ಸ್ಟೋಟ ಪ್ರಕರಣ: ನನ್ನನ್ನು ಬಿಟ್ಟುಬಿಡಿ ಎಂದ ಅಬು ಸಲೇಂ; ಶೀಘ್ರ ಬಿಡುಗಡೆ ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್​! Abu Salem on Mumbai Blast

ಪ್ರಮುಖ ಮುಖ್ಯಾಂಶಗಳು

  • 1993 ರ ಬಾಂಬೆ ಸರಣಿ ಬ್ಲಾಸ್ಟ್​ ಪ್ರಕರಣ
  • ಪ್ರಕರಣದ ಪ್ರಮುಖ ಆರೋಪಿ ಅಬು ಸಲೇಂ
  • ಶೀಘ್ರ ಬಿಡುಗಡೆಗೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಬಾಂಬೆ ಹೈಕೋರ್ಟ್​
ಮುಂಬೈ: ಮುಂಬೈ ಭೂಗತ ಲೋಕದ ಪಾತಕಿ ಮತ್ತು 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರ ಅಬು ಸಲೇಂ (Abu Salem on Mumbai Blast) ಗೆ ಬಾಂಬೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಜೈಲಿನಿಂದ ತನ್ನನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಬುಧವಾರ (ಏ.15) ವಜಾಗೊಳಿಸಿದೆ.

ಏನಿದು ಪ್ರಕರಣ?

ಮುಂಬೈ ಬಾಂಬ್ ಸ್ಫೋಟ ಮತ್ತು ಬಿಲ್ಡರ್ ಪ್ರದೀಪ್ ಜೈನ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಬು ಸಲೇಂ, ತಾನು ಈಗಾಗಲೇ 25 ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸಿದ್ದೇನೆ ಎಂದು ವಾದಿಸಿದ್ದ. ಭಾರತ ಮತ್ತು ಪೋರ್ಚುಗಲ್ ನಡುವಿನ ಹಸ್ತಾಂತರ ಒಪ್ಪಂದದ ಪ್ರಕಾರ, ತನಗೆ ನೀಡಲಾದ ಭರವಸೆಯಂತೆ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿ ಬಿಡುಗಡೆ ಮಾಡಬೇಕು ಎಂಬುದು ಸಲೇಂ ಮನವಿಯಾಗಿತ್ತು. ಆದರೆ, ಈ ವಾದವನ್ನು ನ್ಯಾಯಮೂರ್ತಿಗಳಾದ ಅಜಯ್.ಎಸ್.ಗಡ್ಕರಿ ಮತ್ತು ಕಮಲ್.ಆರ್.ಖಾಟಾ ಅವರ ನ್ಯಾಯಪೀಠವು ಈ ಮನವಿಯನ್ನು ತಿರಸ್ಕರಿಸಿದೆ.
ಲೆಕ್ಕಾಚಾರದಲ್ಲಿ ಸಲೇಂ ತಪ್ಪು ಎಲ್ಲಿದೆ?
ಕೇಂದ್ರ ಗೃಹ ಸಚಿವಾಲಯದ (MHA) ಪ್ರಕಾರ, ಅಬು ಸಲೇಂ ತಾನು ಜೈಲಿನಲ್ಲಿ ಕಳೆದ ಅವಧಿಯನ್ನು ತಪ್ಪಾಗಿ ಲೆಕ್ಕಹಾಕುತ್ತಿದ್ದಾನೆ. ಸಲೇಂ ತಾನು 24 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರೂ, ಸರ್ಕಾರಿ ದಾಖಲೆಗಳ ಪ್ರಕಾರ ಆತ 20 ವರ್ಷಗಳನ್ನೂ ಪೂರ್ಣಗೊಳಿಸಿಲ್ಲ.
ಅಬು ಸಲೇಂ ಎರಡು ಬೇರೆ ಬೇರೆ ಪ್ರಕರಣಗಳಲ್ಲಿ ಅನುಭವಿಸಿದ ಶಿಕ್ಷೆಯನ್ನು ಒಟ್ಟಿಗೆ ಸೇರಿಸಿ ಲೆಕ್ಕ ಹಾಕುತ್ತಿದ್ದಾನೆ. ಆದರೆ ಕಾನೂನುಬದ್ಧವಾಗಿ ಅವನ 25 ವರ್ಷಗಳ ಅವಧಿ ಮುಗಿಯುವುದು ನವೆಂಬರ್ 10, 2030 ರಂದು ಮಾತ್ರ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ ಮುಂದೆ ಸ್ಪಷ್ಟಪಡಿಸಿದೆ.

ಪೋರ್ಚುಗಲ್ ಒಪ್ಪಂದ ಮತ್ತು ಸುಪ್ರೀಂ ಕೋರ್ಟ್ ಹಸ್ತಕ್ಷೇಪ

2005ರಲ್ಲಿ ಪೋರ್ಚುಗಲ್‌ನಿಂದ ಅಬು ಸಲೇಂನನ್ನು ಭಾರತಕ್ಕೆ ಕರೆತರುವಾಗ, ಆತನಿಗೆ 25 ವರ್ಷಕ್ಕಿಂತ ಹೆಚ್ಚು ಶಿಕ್ಷೆ ನೀಡಬಾರದು ಎಂಬ ಭರವಸೆಯನ್ನು ಭಾರತ ಸರ್ಕಾರ ನೀಡಿತ್ತು. ಇದೇ ಅಂಶವನ್ನು ಸುಪ್ರೀಂ ಕೋರ್ಟ್ ಕೂಡ 2022ರಲ್ಲಿ ಉಲ್ಲೇಖಿಸಿತ್ತು. ಸಲೇಂ 25 ವರ್ಷಗಳ ಶಿಕ್ಷೆ ಪೂರೈಸಿದ ನಂತರ ಆತನನ್ನು ಬಿಡುಗಡೆ ಮಾಡಲು ರಾಷ್ಟ್ರಪತಿಗಳಿಗೆ ಸಲಹೆ ನೀಡಲು ಸರ್ಕಾರ ಬದ್ಧವಾಗಿದೆ. ಆದರೆ, ಈಗಲೇ ಅವನ ಶಿಕ್ಷೆಯನ್ನು ಮಿತಿಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಂದೇ ಹೇಳಿತ್ತು.

ಭೂಗತ ಪಾತಕಿಯ ಜೈಲು ಪಯಣ

ನವೆಂಬರ್ 2005 ರಲ್ಲಿ ಭಾರತಕ್ಕೆ ಹಸ್ತಾಂತರಗೊಂಡ ಸಲೇಂ ಮೇಲೆ ಭಯೋತ್ಪಾದಕ ಚಟುವಟಿಕೆಗಳ (TADA) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 2017 ರಲ್ಲಿ ಮುಂಬೈ ಸ್ಫೋಟದ ದೋಷಿ ಎಂದು ಘೋಷಿಸಲಾಯಿತು. ಪ್ರಸ್ತುತ ತಲೋಜಾ ಜೈಲಿನಿಂದ ನಾಶಿಕ್ ಜೈಲಿಗೆ ವರ್ಗಾಯಿಸಲ್ಪಟ್ಟಿರುವ ಸಲೇಂ, ಜೈಲು ನಿಯಮಗಳ ಅಡಿಯಲ್ಲಿ ತನಗೆ ಸಿಗುವ ರಿಯಾಯಿತಿ (Remission) ದಿನಗಳನ್ನು ಸೇರಿಸಿದರೆ ಈಗಾಗಲೇ 25 ವರ್ಷ ಮುಗಿದಿದೆ ಎಂದು ವಾದಿಸುತ್ತಿದ್ದ. ಆದರೆ ಹೈಕೋರ್ಟ್, ಅಪರಾಧದ ಸ್ವರೂಪ ಮತ್ತು ಸಾರ್ವಭೌಮ ಭರವಸೆಯ ಷರತ್ತುಗಳನ್ನು ಗಮನಿಸಿದರೆ ಈಗಲೇ ಬಿಡುಗಡೆ ಅಸಾಧ್ಯ ಎಂದು ಆದೇಶಿಸಿದೆ.

ಮುಂದೇನು?

ಈ ಆದೇಶದಿಂದಾಗಿ ಸಲೇಂ 2030 ರವರೆಗೆ ಕಂಬಿ ಎಣಿಸುವುದು ಅನಿವಾರ್ಯವಾಗಿದೆ. ಅಂತರಾಷ್ಟ್ರೀಯ ಹಸ್ತಾಂತರ ಒಪ್ಪಂದಗಳನ್ನು ಮುಂದಿಟ್ಟುಕೊಂಡು ಕಾನೂನಿನ ಸಂದುಗೊಂದಿಗಳಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಪಾತಕಿಗೆ ಬಾಂಬೆ ಹೈಕೋರ್ಟ್ ಈಗ ಸರಿಯಾದ ಪಾಠ ಕಲಿಸಿದೆ. ಮುಂಬೈ ಜನರನ್ನು ರಕ್ತದೋಕುಳಿಯಲ್ಲಿ ಮಿಂದೆಬ್ಬಿಸಿದ ಅಪರಾಧಿಗೆ ಕಾನೂನಿನ ಕಟ್ಟಳೆಗಳಿಂದ ಅಷ್ಟು ಸುಲಭವಾಗಿ ಮುಕ್ತಿ ಸಿಗುವುದಿಲ್ಲ ಎಂಬ ಸಂದೇಶ ರವಾನೆಯಾದಂತಿದೆ,(ಏಜನ್ಸೀಸ್​).