ಒಂದೇ ದಿನ 19 ಮದುವೆಗಳ ಸಂಭ್ರಮ: ದಕ್ಷಿಣ ದೆಹಲಿಯಲ್ಲಿ ಭಾರಿ ಟ್ರಾಫಿಕ್ ಆತಂಕ WEB
ದೇಶ

ಒಂದೇ ದಿನ 19 ಮದುವೆಗಳ ಸಂಭ್ರಮ: ದಕ್ಷಿಣ ದೆಹಲಿಯಲ್ಲಿ ಭಾರಿ ಟ್ರಾಫಿಕ್ ಆತಂಕ, ಸವಾರರಿಗೆ ಅಲರ್ಟ್!South Delhi traffic

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಮದುವೆಗಳ ಅಬ್ಬರ ಜೋರಾಗಿದ್ದು, ಸೋಮವಾರ ಒಂದೇ ದಿನ ದಕ್ಷಿಣ ದೆಹಲಿಯಲ್ಲಿ 19ಕ್ಕೂ ಹೆಚ್ಚು ಅದ್ಧೂರಿ ವಿವಾಹ ಸಮಾರಂಭಗಳು ನಡೆಯಲಿವೆ. ಈ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಸುಮಾರು 7 ಸಾವಿರಕ್ಕೂ ಹೆಚ್ಚು ಅತಿಥಿಗಳು ಹಾಗೂ 3,500ಕ್ಕೂ ಅಧಿಕ ಹೆಚ್ಚುವರಿ ವಾಹನಗಳು ಏಕಕಾಲಕ್ಕೆ ರಸ್ತೆಗಿಳಿಯುವ ನಿರೀಕ್ಷೆಯಿದೆ.South Delhi traffic

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಮದುವೆಗಳ ಅಬ್ಬರ ಜೋರಾಗಿದ್ದು, ಸೋಮವಾರ ಒಂದೇ ದಿನ ದಕ್ಷಿಣ ದೆಹಲಿಯಲ್ಲಿ 19ಕ್ಕೂ ಹೆಚ್ಚು ಅದ್ಧೂರಿ ವಿವಾಹ ಸಮಾರಂಭಗಳು ನಡೆಯಲಿವೆ. ಈ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಸುಮಾರು 7 ಸಾವಿರಕ್ಕೂ ಹೆಚ್ಚು ಅತಿಥಿಗಳು ಹಾಗೂ 3,500ಕ್ಕೂ ಅಧಿಕ ಹೆಚ್ಚುವರಿ ವಾಹನಗಳು ಏಕಕಾಲಕ್ಕೆ ರಸ್ತೆಗಿಳಿಯುವ ನಿರೀಕ್ಷೆಯಿದೆ. ಪರಿಣಾಮ, ನಗರದ ಪ್ರಮುಖ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುವ ಭೀತಿ ಎದುರಾಗಿದ್ದು, ಸವಾರರ ಹಿತದೃಷ್ಟಿಯಿಂದ ದೆಹಲಿ ಸಂಚಾರ ಪೊಲೀಸರು ವಿಶೇಷ ಸಂಚಾರ ಸಲಹೆ (Traffic Advisory) ಪ್ರಕಟಿಸಿ ಎಚ್ಚರಿಕೆ ನೀಡಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಸಾಧ್ಯತೆ

ಸಂಚಾರ ಪೊಲೀಸರ ಪ್ರಕಟಣೆಯ ಪ್ರಕಾರ, ಎಸ್‌ಎಸ್‌ಎನ್ ಮಾರ್ಗ (ಭಾಟಿ ಮೈನ್‌ಸ್ ರಸ್ತೆ), ಬಂಧ್ ರಸ್ತೆ, ಮಂಡಿ ರಸ್ತೆ ಹಾಗೂ ಎಂಜಿ ರಸ್ತೆಯಲ್ಲಿ ಮದುವೆ ಸಮಾರಂಭಗಳು ಆಯೋಜನೆಯಾಗಿವೆ. ಹೀಗಾಗಿ ದಿನವಿಡೀ ಈ ಮಾರ್ಗಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗುವ ಸಾಧ್ಯತೆಯಿದೆ. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೂ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಎಸ್‌ಎನ್ ಮಾರ್ಗ (ಭಾಟಿ ಮೈನ್‌ಸ್ ರಸ್ತೆ), 100 ಫೂಟಾ ರಸ್ತೆ, ಅನುವ್ರತ್ ಮಾರ್ಗ, ಅರಬಿಂದೋ ಮಾರ್ಗ, ಮಂಡಿ ರಸ್ತೆ, ಜೋನಾಪುರ ರಸ್ತೆ, ಮೆಹ್ರೌಲಿ-ಗುರುಗ್ರಾಮ ರಸ್ತೆ ಹಾಗೂ ಮೆಹ್ರೌಲಿ-ಮಹಿಪಾಲ್ಪುರ ರಸ್ತೆಗಳಲ್ಲಿ ಸಂಚಾರ ನಿಧಾನವಾಗುವ ಸಾಧ್ಯತೆಯಿದೆ. ಸಾಧ್ಯವಾದಷ್ಟು ಈ ಮಾರ್ಗಗಳನ್ನು ತಪ್ಪಿಸುವಂತೆ ವಾಹನ ಸವಾರರಿಗೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

ಮೆಟ್ರೋ ಬಳಕೆಗೆ ಪೊಲೀಸರ ಮನವಿ

ಮದುವೆ ಸಮಾರಂಭಗಳಿಂದ ಉಂಟಾಗಬಹುದಾದ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸಾರಿಗೆ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ವಿಶೇಷವಾಗಿ ದೆಹಲಿ ಮೆಟ್ರೋ ಮೂಲಕ ಪ್ರಯಾಣಿಸುವುದರಿಂದ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳಬೇಕು. ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಯಾಣದ ಸಮಯವನ್ನು ಮೀಸಲಿಡಬೇಕು ಎಂದೂ ಸೂಚಿಸಿದ್ದಾರೆ.

ಇದನ್ನೂ ಓದಿ : ಪತಿಗೆ ರೊಮ್ಯಾಂಟಿಕ್ ಬರ್ತ್‌ಡೇ ವಿಶ್ ಮಾಡಿದ ಶೋಭಿತಾ ಧೂಳಿಪಾಲ! 'ಹ್ಯಾಪಿ ಬರ್ತ್‌ಡೇ ಲವರ್' ಎಂದ ನಟಿ | Sobhita Dhulipala

ವಿಐಪಿ ಸಂಚಾರ, ಧಾರ್ಮಿಕ ಮೆರವಣಿಗೆಯೂ ಕಾರಣ

ಇನ್ನು ಸೋಮವಾರ ದೆಹಲಿಯಲ್ಲಿ ಸಂಚಾರದ ಮೇಲೆ ಪರಿಣಾಮ ಬೀರಬಹುದಾದ ಮತ್ತಷ್ಟು ಕಾರ್ಯಕ್ರಮಗಳಿವೆ. ರಾಜ್‌ಘಾಟ್‌ನಲ್ಲಿ ವಿಐಪಿ ಸಂಚಾರ ಹಾಗೂ ಮಧ್ಯ ಮತ್ತು ಉತ್ತರ ದೆಹಲಿಯಲ್ಲಿ ನಡೆಯಲಿರುವ ಧಾರ್ಮಿಕ ಮೆರವಣಿಗೆಯ ಹಿನ್ನೆಲೆಯಲ್ಲಿ ಭಾನುವಾರವೇ ಪೊಲೀಸರು ಪ್ರತ್ಯೇಕ ಸಂಚಾರ ಸಲಹೆ ಪ್ರಕಟಿಸಿದ್ದರು. ಇದರ ನಡುವೆ ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರ ಎರಡು ದಿನಗಳ ಭಾರತ ಭೇಟಿಯೂ ನಡೆಯುತ್ತಿದೆ. ಹೀಗಾಗಿ ರಾಜಧಾನಿಯ ಹಲವು ಭಾಗಗಳಲ್ಲಿ ವಾಹನ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ, ರಸ್ತೆಗಳಲ್ಲಿ ಅಳವಡಿಸಿರುವ ಮಾರ್ಗ ಬದಲಾವಣೆಯ ಫಲಕಗಳನ್ನು ಗಮನಿಸುವಂತೆ ಹಾಗೂ ಪ್ರಯಾಣಕ್ಕೆ ಹೆಚ್ಚುವರಿ ಸಮಯವನ್ನು ಮೀಸಲಿಡುವಂತೆ ವಾಹನ ಸವಾರರಿಗೆ ಮನವಿ ಮಾಡಲಾಗಿದೆ.