ವಿಜಯ್ ಮಲ್ಯ ಮತ್ತು ಜಾರಿ ನಿರ್ದೇಶನಾಲಯ
ನವದೆಹಲಿ: ಬ್ಯಾಂಕ್‌ಗಳ ಸಾಲ ಮರುಪಾವತಿಯಾಗಿದೆ ಎನ್ನುವ ಮಾತ್ರಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಮೇಲಿನ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿನ ವಿಚಾರಣೆಗಳು ರದ್ದಾಗುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ED on Vijay Mallya) ಸ್ಪಷ್ಟಪಡಿಸಿದೆ. ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅಧಿಕೃತ ಉತ್ತರದಲ್ಲಿ ಇಡಿ ಈ ವಿಷಯವನ್ನು ಖಚಿತಪಡಿಸಿದೆ.
ಬ್ಯಾಂಕ್‌ಗಳ ಒಕ್ಕೂಟವು ಸಾಲದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡಿದೆ ಎಂಬ ಕಾರಣ ನೀಡಿ, ಹೈಕೋರ್ಟ್‌ನಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣವನ್ನು ವಜಾಗೊಳಿಸುವಂತೆ ಮಲ್ಯ ಪರ ವಕೀಲರು ಕೋರಿದ್ದರು.
ಬಡ್ಡಿ ಸೇರಿದಂತೆ ಒಟ್ಟು 6,203 ಕೋಟಿ ರೂ.ಗಳ ಮೂಲ ಹಕ್ಕಿನ ವಿರುದ್ಧ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಸುಮಾರು 15,000 ಕೋಟಿ ರೂ.ಗಳನ್ನು ವಸೂಲಿ ಮಾಡಿದೆ ಎಂದು ಮಲ್ಯ ಪರ ವಕೀಲರು ವಾದ ಮಂಡಿಸಿದ್ದರು.
ಹಣ ವಸೂಲಿ ಬೇರೆ, ಕ್ರಿಮಿನಲ್ ತನಿಖೆ ಬೇರೆ!
ಬ್ಯಾಂಕ್ ಸಾಲದ ಹಣವನ್ನು ವಸೂಲಿ ಮಾಡಿರುವುದು ಕೇವಲ ಸಿವಿಲ್ ವಿವಾದಕ್ಕೆ ಸಂಬಂಧಿಸಿದ್ದಾಗಿದೆ. ಆದರೆ ಮಲ್ಯ ಎದುರಿಸುತ್ತಿರುವ ಆರೋಪಗಳು ಮತ್ತು ಅಕ್ರಮ ಹಣ ವರ್ಗಾವಣೆಯ ಕ್ರಿಮಿನಲ್ ಪ್ರಕ್ರಿಯೆಗಳು ಸಂಪೂರ್ಣವಾಗಿ ಭಿನ್ನವಾದವು ಎಂದು ಇಡಿ ತಿಳಿಸಿದೆ.
ಸಾಲ ನೀಡಿದವರು ಹಣವನ್ನು ವಸೂಲಿ ಮಾಡಿದ್ದರಿಂದ ಬಾಕಿ ಇರುವ ಸಿವಿಲ್ ಬಾಕಿಗಳ ಲೆಕ್ಕಾಚಾರ ಬೇಕಾದರೆ ಬದಲಾಗಬಹುದು, ಆದರೆ ಮಲ್ಯ ವಿರುದ್ಧ ಮಾಡಲಾಗಿರುವ ಗಂಭೀರ ಸ್ವರೂಪದ ಅಪರಾಧಗಳು ಸಾಬೀತಾಗಿವೆಯೋ ಇಲ್ಲವೋ ಎಂಬುದನ್ನು ಇದು ನಿರ್ಧರಿಸಲು ಸಾಧ್ಯವಿಲ್ಲ ಎಂದು ತನಿಖಾ ಸಂಸ್ಥೆ ಸ್ಪಷ್ಟಪಡಿಸಿದೆ.
ಮುಂಬೈನ ವಿಶೇಷ PMLA ನ್ಯಾಯಾಲಯದ ಆದೇಶದ ಮೇರೆಗೆ, ಸುಮಾರು 14,131.60 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಈಗಾಗಲೇ ಎಸ್‌ಬಿಐ ನೇತೃತ್ವದ ಒಕ್ಕೂಟಕ್ಕೆ ಮರುಸ್ಥಾಪಿಸಲಾಗಿದೆ.
PMLA ಕಾಯಿದೆಯ ಸೆಕ್ಷನ್ 8(8)ರ ಅಡಿಯಲ್ಲಿ ಆಸ್ತಿಗಳನ್ನು ಹಿಂದಿರುಗಿಸುವುದು ಕೇವಲ ಅರ್ಹರಿಗೆ ಆಸ್ತಿ ತಲುಪಿಸುವ ಒಂದು ಶಾಸನಬದ್ಧ ವಿಧಾನವಷ್ಟೇ ಹೊರತು, ಇದು ಅಪರಾಧದ ತೀವ್ರತೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಇಡಿ ವಾದಿಸಿದೆ. ಅಂದರೆ, ಆಸ್ತಿ ವಾಪಸ್ ಸಿಕ್ಕಿದೆ ಎಂದ ಮಾತ್ರಕ್ಕೆ ಮಲ್ಯ ಮೇಲಿನ ಅಕ್ರಮ ಹಣ ವರ್ಗಾವಣೆ ಆರೋಪಗಳು ಕೊನೆಗೊಂಡಿಲ್ಲ ಎಂದು ತಿಳಿಸಿದೆ.
ಕೋರ್ಟ್ ವಿಚಾರಣೆಗೆ ಗೈರುಹಾಜರಿ
2016ರಲ್ಲಿ ಭಾರತ ತೊಟ್ಟು ಲಂಡನ್ಗೆ ಪರಾರಿಯಾಗಿರುವ ವಿಜಯ್ ಮಲ್ಯ ರನ್ನು, 2019ರಲ್ಲಿ 'ಪಲಾಯನಗೈದ ಆರ್ಥಿಕ ಅಪರಾಧಿ' ಎಂದು ಘೋಷಿಸಲಾಗಿದೆ. ನ್ಯಾಯಾಲಯದ ವ್ಯಾಪ್ತಿಗೆ ಬಾರದೆ ನಿರಂತರವಾಗಿ ತಪ್ಪಿಸಿಕೊಳ್ಳುತ್ತಿರುವುದು ಅವರ ಪ್ರಕರಣದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಇಡಿ ಹೈಕೋರ್ಟ್ ಗಮನಕ್ಕೆ ತಂದಿದೆ.
ಮಲ್ಯ ಅವರ ಸಿವಿಲ್ ಹೊಣೆಗಾರಿಕೆಗಳು ತೀರಿಹೋಗಿವೆ ಎನ್ನುವ ವಾದವನ್ನು ತಳ್ಳಿಹಾಕಿರುವ ಜಾರಿ ನಿರ್ದೇಶನಾಲಯ, ಈ ವಾಣಿಜ್ಯ ವಿವಾದವನ್ನು ಕ್ರಿಮಿನಲ್ ಪ್ರಕರಣಗಳೊಂದಿಗೆ ತಳಕುಹಾಕುವುದು ತಪ್ಪು ಕಲ್ಪನೆ ಎಂದು ಬಲವಾಗಿ ಪ್ರತಿಪಾದಿಸಿದೆ.
ಭಾರತಕ್ಕೆ ಮರಳುವ ಬಗ್ಗೆ ಹಾಗೂ ನ್ಯಾಯಾಲಯದ ವಿಚಾರಣೆಗೆ ಒಳಪಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಹೈಕೋರ್ಟ್ ಮಲ್ಯ ಅವರಿಗೆ ಇತ್ತೀಚೆಗೆ ಅವಕಾಶ ನೀಡಿದ್ದು, ಮುಂಬರುವ ದಿನಗಳಲ್ಲಿ ಈ ಪ್ರಕರಣದ ವಿಚಾರಣೆಯು ಭಾರೀ ಕುತೂಹಲ ಮೂಡಿಸಿದೆ, (ಏಜನ್ಸೀಸ್).