Sindhi Community | ಭಾರತಕ್ಕೆ ಬರ್ತಿದಾರೆ 150 ಪಾಕಿಸ್ತಾನಿ ವಧುಗಳು!
ಆಪರೇಷನ್ ಸಿಂಧೂರ ಮತ್ತು ವೀಸಾ ನಿಯಮಗಳ ಬಿಗಿಗೊಳಿಸುವಿಕೆಯಿಂದಾಗಿ ಮದುವೆ ನಿಂತುಹೋಗಿದ್ದ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕನಿಷ್ಠ 150 ಯುವತಿಯರು, ಕೊನೆಗೂ ಬರ್ಯಾಯ ವಾಯು ಮಾರ್ಗಗಳ ಮೂಲಕ ಭಾರತಕ್ಕೆ ಆಗಮಿಸಿ ತಮ್ಮ ನಿಶ್ಚಿತಾರ್ಥವಾಗಿದ್ದ ವರರೊಂದಿಗೆ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನಿ ಸಿಂಧಿ ವಲಸಿಗರ ಪರವಾಗಿ ಕೆಲಸ ಮಾಡುತ್ತಿರುವ ಸಮುದಾಯದ ಮುಖಂಡ ರಾಜೇಶ್ ಝಾಂಬಿಯಾ ಈ ಕುರಿತು ಮಾಹಿತಿ ನೀಡಿದ್ದು, ದೀರ್ಘ ಕಾಯುವಿಕೆ ಕೊನೆಗೂ ಮುಕ್ತಾಯವಾಗಿದೆ ಎಂದು ಭಾನುವಾರ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಿಂಧ್ ಭಾಗದ ಕುಟುಂಬಗಳು ಇಂತಹ ಮದುವೆಗಳಿಗಾಗಿ ಪಂಜಾಬ್‌ನ ವಾಗಾ-ಅಟ್ಟಾರಿ ಗಡಿ ಮಾರ್ಗವಾಗಿ ಭಾರತಕ್ಕೆ ಪ್ರಯಾಣಿಸುತ್ತಿದ್ದವು. ಆದರೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಹತ್ಯೆಗೆ ಕಾರಣವಾಗಿದ್ದ ಭಯೋತ್ಪಾದಕ ದಾಳಿಯ ನಂತರ ಭಾರತವು ಕಳೆದ ವರ್ಷ ನಡೆಸಿದ ಆಪರೇಷನ್ ಸಿಂಧೂರ ಮಿಲಿಟರಿ ಕಾರ್ಯಾಚರಣೆಯ ಬಳಿಕ ಪರಿಸ್ಥಿತಿ ಬದಲಾಯಿತು. ಗಡಿ ಮಾರ್ಗದ ವೀಸಾಗಳನ್ನು ತಿರಸ್ಕರಿಸಿದ್ದರಿಂದ ಮದುವೆಗಳು ಅರ್ಧಕ್ಕೇ ನಿಂತಿದ್ದವು.
ಭಾರತಕ್ಕೆ ಆಗಮಿಸಲು 300 ಕ್ಕೂ ಹೆಚ್ಚು ಯುವತಿಯರು ವೇಟಿಂಗ್
ಈ ಸಮಸ್ಯೆಯ ನಿವಾರಣೆಗೆ ಸಮುದಾಯದ ನಾಯಕರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ಪ್ರಸಿದ್ಧ ಹಿಂದೂ ಧಾರ್ಮಿಕ ಕ್ಷೇತ್ರ ಷಡಾನಿ ದರ್ಬಾರ್ನ ಆಧ್ಯಾತ್ಮಿಕ ಮುಖ್ಯಸ್ಥ ಸಂತ ಯುಧಿಷ್ಠಿರ್ ಲಾಲ್ ಷಡಾನಿ ಅವರನ್ನು ಸಂಪರ್ಕಿಸಿದರು. ಭಾರತದ ನಾಗ್‌ಪುರ, ರಾಯ್‌ಪುರ, ಜೋಧ್‌ಪುರ, ಪುಣೆ ಸೇರಿದಂತೆ ವಿವಿಧ ನಗರಗಳ ಯುವಕರೊಂದಿಗೆ ನಿಶ್ಚಿತಾರ್ಥವಾಗಿದ್ದ ಸುಮಾರು 150 ಯುವತಿಯರ ಪಟ್ಟಿಯನ್ನು ದೇವಸ್ಥಾನದ ಆಡಳಿತ ಮಂಡಳಿಯು ಸಿದ್ಧಪಡಿಸಿತು.
ಬಳಿಕ ಈ ಪಟ್ಟಿಯೊಂದಿಗೆ ಕೇಂದ್ರ ಗೃಹ ಸಚಿವಾಲಯವನ್ನು ಸಂಪರ್ಕಿಸಿ ವೀಸಾ ಕಲ್ಪಿಸುವಂತೆ ಮನವಿ ಮಾಡಲಾಯಿತು. ಮನವಿಗೆ ಸ್ಪಂದಿಸಿದ ಗೃಹ ಸಚಿವಾಲಯವು ವಾಯು ಮಾರ್ಗದ ಮೂಲಕ ಮಾತ್ರ ಪ್ರಯಾಣಿಸಬೇಕೆಂಬ ಷರತ್ತಿನೊಂದಿಗೆ ವೀಸಾಗೆ ಅನುಮತಿ ನೀಡಿತು. ಅದರಂತೆ, ಕಳೆದ ಏಪ್ರಿಲ್‌ನಿಂದ ಮಸ್ಕತ್, ದುಬೈ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಇತರ ದೇಶಗಳ ಮೂಲಕ 150 ವಧುಗಳು ಹಾಗೂ ಅವರ ಕುಟುಂಬಸ್ಥರು ಭಾರತಕ್ಕೆ ಆಗಮಿಸಿದ್ದಾರೆ. ಇದರಲ್ಲಿ 15 ಪ್ರಕರಣಗಳು ನಾಗ್‌ಪುರ ಒಂದಕ್ಕೇ ಸೇರಿವೆ.
ಪಾಕಿಸ್ತಾನದಲ್ಲಿ ಇನ್ನೂ ಸುಮಾರು 300 ಕ್ಕೂ ಹೆಚ್ಚು ಯುವತಿಯರು ಭಾರತಕ್ಕೆ ಆಗಮಿಸಲು ಕಾಯುತ್ತಿದ್ದು, ಅವರಿಗೂ ವೀಸಾ ನೀಡುವಂತೆ ಭಾರತ ಸರ್ಕಾರಕ್ಕೆ ವಿನಂತಿಸಲಾಗಿದೆ ಎಂದು ಝಾಂಬಿಯಾ ತಿಳಿಸಿದ್ದಾರೆ(ಏಜೆನ್ಸೀಸ್).