Rahul Gandhi | 15 ವರ್ಷದ ಬಾಲಕಿಯ ಮನೆಗೆ ಗೂಂಡಾಗಳನ್ನು ಕಳುಹಿಸಿ ಬಲವಂತದ ಕ್ಷಮಾಪಣೆ!...ರಾಹುಲ್ ಗಾಂಧಿ ಗಂಭೀರ ಆರೋಪ
ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಹಾಗೂ ಸರಣಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಹತೋಟಿಗೆ ತರಲು ಸರ್ಕಾರ ಬಲಪ್ರಯೋಗ ಹಾಗೂ ಬೆದರಿಕೆ ತಂತ್ರಗಳನ್ನು ಬಳಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ವಿವಿಧ ರಾಜ್ಯಗಳ ಯುವ ಪ್ರತಿಭಟನಾಕಾರರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾವು ಯುವ ಪ್ರತಿಭಟನಾಕಾರರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದೆವು. ಅಧಿಕಾರಿಗಳು ಮತ್ತು ರೌಡಿಗಳು ತಮ್ಮ ಮನೆಗಳಿಗೆ ಬಂದು ಹೇಗೆ ಹಲ್ಲೆ ನಡೆಸಿದರು, ಹೊಡೆದರು ಮತ್ತು ಬೆದರಿಕೆ ಹಾಕಿದರು ಎಂಬುದನ್ನು ವಿದ್ಯಾರ್ಥಿಗಳು ವಿವರಿಸಿದ್ದಾರೆ ಎಂದು ತಿಳಿಸಿದರು.
ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧ ನಿಂದನೀಯ ಪದ ಬಳಕೆ ಮಾಡಿದ್ದ 15 ವರ್ಷದ ಬಾಲಕಿಯ ಮನೆಗೆ ಗೂಂಡಾಗಳನ್ನು ಕಳುಹಿಸಿ, ಆಕೆಯನ್ನು ಬಲವಂತವಾಗಿ ಕ್ಷಮಾಪಣೆ ಕೇಳುವಂತೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ ರಾಹುಲ್, ಇದೊಂದು ಸಂಪೂರ್ಣ ಅಸಂಬದ್ಧ ನಡೆಯಾಗಿದ್ದು, ವಿದ್ಯಾರ್ಥಿಗಳು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ, ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಭಾರತದ ಸಂವಿಧಾನ ಮತ್ತು ಆಶಯಗಳ ನೈಜ ರಕ್ಷಕರು ಎಂದು ಬಣ್ಣಿಸಿದ ರಾಹುಲ್ ಗಾಂಧಿ, ದೋಷಪೂರಿತ, ಕುಸಿಯುತ್ತಿರುವ ಹಾಗೂ ನಿರುಪಯುಕ್ತ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುವುದು ಅಪರಾಧವಲ್ಲ. ಈ ವ್ಯವಸ್ಥೆಯಲ್ಲಿ ತಕ್ಷಣದ ಸುಧಾರಣೆ ಮತ್ತು ಬದಲಾವಣೆಯ ಅಗತ್ಯವಿದೆ. ವಿದ್ಯಾರ್ಥಿಗಳು ಯಾವುದೇ ಹಿಂಸಾಚಾರ ಅಥವಾ ಅಸಭ್ಯ ವರ್ತನೆ ತೋರಿರಲಿಲ್ಲ. ಆದರೂ ಅವರ ಮೇಲೆ ಲಾಠಿಚಾರ್ಜ್ ಮಾಡಿ, ಕಿರುಕುಳ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಬೇಡಿಕೆ!..
ದೇಶದಲ್ಲಿ ಪದೇ ಪದೆ ಮರುಕಳಿಸುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸರ್ಕಾರ ಹೊಣೆ ಹೊರಬೇಕು ಎಂದು ಆಗ್ರಹಿಸಿದ ರಾಹುಲ್ ಗಾಂಧಿ, ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುವ ಶಿಕ್ಷಣ ವ್ಯವಸ್ಥೆಗೆ ಭಾರತ ಅರ್ಹವಾಗಿದೆ ಎಂದರು. ಪ್ರಶ್ನೆಪತ್ರಿಕೆ ಸೋರಿಕೆ ಸಂಪೂರ್ಣವಾಗಿ ಬಂದ್ ಆಗಬೇಕು. ದೇಶದ ಯುವಕರ ಭವಿಷ್ಯವನ್ನು ಗೌರವಿಸುವ ಮತ್ತು ರಕ್ಷಿಸುವಂತಹ ದೃಢ ಶಿಕ್ಷಣ ವ್ಯವಸ್ಥೆ ನಮಗೆ ಬೇಕಿದೆ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಅವರೊಂದಿಗೆ ನಿಲ್ಲಲಿದೆ ಎಂದು ಪುನರುಚ್ಚರಿಸಿದರು.
ಇದಕ್ಕೂ ಮುನ್ನ, ಜುಲೈ 23 ರ ಪ್ರತಿಭಟನೆಯಲ್ಲಿn ನಿಂದನೀಯ ಘೋಷಣೆಗಳಿಗೆ ಸಂಬಂಧಿಸಿದಂತೆ ಜುಲೈ 29 ರಂದು ನೋಯ್ಡಾದ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ರುಚಿಕಾ ಸಿಂಗ್ ವಿರುದ್ಧ ಝೀರೋ ಎಫ್‌ಐಆರ್ ದಾಖಲಿಸಲಾಗಿತ್ತು. ಸಿಂಗ್ ಪ್ರಧಾನಿಯವರ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ್ದು, ಸಾಂವಿಧಾನಿಕ ಹುದ್ದೆಯ ಘನತೆಗೆ ಕುಂದು ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ದುರುದ್ದೇಶದಿಂದ ದ್ವೇಷವನ್ನು ಪ್ರಚೋದಿಸಲು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಈ ಹೇಳಿಕೆಗಳನ್ನು ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ (ಏಜೆನ್ಸೀಸ್).