CBSE | CBSE ವೆಬ್‌ಸೈಟ್‌ಗೆ ಕನ್ನ ಹಾಕಲು ಹ್ಯಾಕರ್ಸ್ ಸಂಚು
ನವದೆಹಲಿ: ಸಿಬಿಎಸ್‌ಇ (CBSE) ಮರುಮೌಲ್ಯಮಾಪನ ಪೋರ್ಟಲ್ ಆರಂಭವಾದ ಮೊದಲ ದಿನವೇ ಹ್ಯಾಕರ್‌ಗಳ ಸರಣಿ ಸೈಬರ್ ದಾಳಿಗೆ ತುತ್ತಾಗಿದ್ದು, ಹೀಗಿದ್ದಾಗಲೂ ಮಂಗಳವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ 16,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕಾಗಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸಿಬಿಎಸ್‌ಇ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಸೈಬರ್ ದಾಳಿಯ ನಡುವೆಯೂ ಪೋರ್ಟಲ್ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುತ್ತಿದೆ.
2 ನಿಮಿಷದಲ್ಲಿ 15 ಲಕ್ಷ ಹಿಟ್ಸ್: ಏನಿದು ಸೈಬರ್ ಅಟ್ಯಾಕ್...?
ಸಿಬಿಎಸ್‌ಇ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಪೋರ್ಟಲ್ ಅನ್ನು ಹ್ಯಾಕ್ ಮಾಡಲು ವ್ಯವಸ್ಥಿತ ಸಂಚು ನಡೆದಿದೆ. ವೆಬ್‌ಸೈಟ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಉದ್ದೇಶದಿಂದ ಕೇವಲ ಎರಡೇ ನಿಮಿಷಗಳಲ್ಲಿ ಬರೋಬ್ಬರಿ 1.5 ಮಿಲಿಯನ್ (15 ಲಕ್ಷ) ಹಿಟ್ಸ್‌ಗಳನ್ನು ಸೃಷ್ಟಿಸಿ ಡಿನಯಲ್ ಆಫ್ ಸರ್ವಿಸ್ (DoS) ದಾಳಿ ನಡೆಸಲಾಗಿದೆ. ಇದರೊಂದಿಗೆ, ವೆಬ್‌ಸೈಟ್‌ನ ಒಳಗಿನ ಫೈಲ್‌ಗಳನ್ನು ಅನಧಿಕೃತವಾಗಿ ಪ್ರವೇಶಿಸಲು 1 ಲಕ್ಷಕ್ಕೂ ಹೆಚ್ಚು ಬಾರಿ ಸೈಬರ್ ಯತ್ನಗಳು ನಡೆದಿರುವುದನ್ನು ಸಿಸ್ಟಮ್ ಪತ್ತೆಹಚ್ಚಿದೆ.
ಸದ್ಯ ಈ ಪೋರ್ಟಲ್ ಏಕಕಾಲದಲ್ಲಿ 8,000 ಕ್ಕೂ ಹೆಚ್ಚು ಬಳಕೆದಾರರನ್ನು (Concurrent Users) ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು, ದಾಳಿಯ ಹೊರತಾಗಿಯೂ ಸಾವಿರಾರು ವಿದ್ಯಾರ್ಥಿಗಳು ಸುಲಭವಾಗಿ ಲಾಗಿನ್ ಆಗಿ ತಮ್ಮ ಪೇಪರ್ ಮರುಮೌಲ್ಯಮಾಪನ ಹಾಗೂ ಇತರೆ ಸೇವೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಧರ್ಮೇಂದ್ರ ಪ್ರಧಾನ್ ಲೆಕ್ಕಾಚಾರ ಉಲ್ಟಾ..?
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಹಿಂದೆ, ಅರ್ಹ ವಿದ್ಯಾರ್ಥಿಗಳಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ಲೇಬರ್ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಅಂದಾಜಿಸಿದ್ದರು. ಆ ಲೆಕ್ಕಾಚಾರದ ಪ್ರಕಾರ ಒಟ್ಟು ಅರ್ಜಿಗಳ ಸಂಖ್ಯೆ 80,000 ಆಸುಪಾಸಿನಲ್ಲಿರಬೇಕಿತ್ತು. ಆದರೆ, ಪೋರ್ಟಲ್ ಮುಕ್ತಗೊಂಡ ಕೇವಲ 9 ರಿಂದ 10 ಗಂಟೆಗಳ ಒಳಗೇ 16,000 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು ಅರ್ಜಿ ಸಲ್ಲಿಸಲು 3 ದಿನಗಳ ಕಾಲಾವಕಾಶ ಬಾಕಿ ಇರುವುದರಿಂದ, ಒಟ್ಟು ಅರ್ಜಿಗಳ ಸಂಖ್ಯೆ ಕೇಂದ್ರ ಸಚಿವರ ನಿರೀಕ್ಷೆಗಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ವಿದ್ಯಾರ್ಥಿಗಳ ಸುಲಭ ಪ್ರಕ್ರಿಯೆಗೆ ತಾಂತ್ರಿಕ ಬದಲಾವಣೆ
ವಿದ್ಯಾರ್ಥಿಗಳಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ ವೆಬ್‌ಸೈಟ್ ಆಪರೇಟರ್‌ಗಳು ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ಅರ್ಜಿ ಸಲ್ಲಿಸುವಾಗ ಮಧ್ಯದಲ್ಲೇ ಸೆಷನ್ ಎಕ್ಸ್‌ಪೈರ್ಡ್ (Session Expired) ಆಗುವುದನ್ನು ತಡೆಯಲು ತಾಂತ್ರಿಕ ಸಮಯದ ಮಿತಿಯನ್ನು ವಿಸ್ತರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ಗಡಿಬಿಡಿಯಿಲ್ಲದೆ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.
ನಮ್ಮ ತಾಂತ್ರಿಕ ತಂಡಗಳು ದಿನದ 24 ಗಂಟೆಯೂ ಪೋರ್ಟಲ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸೇವೆ ಒದಗಿಸಲು ನಾವು ಸದಾ ಜಾಗರೂಕರಾಗಿದ್ದೇವೆ ಎಂದು ಸಿಬಿಎಸ್‌ಇ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದೆ. ಇತ್ತೀಚೆಗೆ ಸಿಬಿಎಸ್‌ಇಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಸಿಸ್ಟಮ್‌ನಲ್ಲಿ ತಾಂತ್ರಿಕ ದೋಷಗಳು ಮತ್ತು ಫಲಿತಾಂಶದ ನಂತರದ ಸೇವೆಗಳಲ್ಲಿ ವಿಳಂಬವಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರುತ್ತಿರುವ ಬೆನ್ನಲ್ಲೇ ಈ ಸೈಬರ್ ದಾಳಿಯ ಬೆಳವಣಿಗೆ ನಡೆದಿದೆ(ಏಜೆನ್ಸೀಸ್).