ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಚುನಾವಣೆ ಇಡೀ ದೇಶದ ಗಮನಸೆಳೆದಿದ್ದು, ಏಷ್ಯಾದ ಶ್ರೀಮಂತ ಪಾಲಿಕೆ ಎಂದೇ ಖ್ಯಾತಿಗಳಿಸಿರುವ ಬಿಎಂಸಿಯನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಇತ್ತ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮ್ಹಾತ್ರೆ ಕುಟುಂಬ ವಿಶಿಷ್ಟ ಚುನಾವಣಾ ಸಾಧನೆಯೊಂದನ್ನು ಮಾಡಿದ್ದು, ಮೂರು ಪಕ್ಷಗಳ ಟಿಕೆಟ್‌ಗಳಲ್ಲಿ ಸ್ಪರ್ಧಿಸಿ, ಮೂರು ವಾರ್ಡ್‌ಗಳನ್ನು ಸಹ ಗೆದ್ದುಕೊಂಡಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಭ್ಯರ್ಥಿಯಾಗಿ ಪ್ರಹ್ಲಾದ್ ಮ್ಹಾತ್ರೆ ಜಯಗಳಿಸಿದರೆ, ಶಿವಸೇನೆ ಟಿಕೆಟ್‌ನಲ್ಲಿ ರೇಖಾ ಮ್ಹಾತ್ರೆ ಗೆಲುವು ಸಾಧಿಸಿದರು. ಕುಟುಂಬದ ಮತ್ತೊಬ್ಬ ಸದಸ್ಯೆ ರವೀನ್ ಮ್ಹಾತ್ರೆ ಬಿಜೆಪಿಯಿಂದ ಗೆದ್ದು ಬೀಗಿದ್ದಾರೆ. ಥಾಣೆ ಪುರಸಭೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಅಧಿಕಾರ ಹಿಡಿಯುವುದು ಪಕ್ಕಾ ಆಗಿದೆ.
ಮ್ಹಾತ್ರೆ ಕುಟುಂಬ ಮಾತ್ರವಲ್ಲ, ಇನ್ನೊಂದು ಕುಟುಂಬದ ಮೂವರು ಸದಸ್ಯರು ಕೂಡ ಗೆಲುವು ಪಡೆದಿದ್ದು, ಆದರೆ ಅವರೆಲ್ಲರೂ ಶಿವಸೇನೆ ಟಿಕೆಟ್‌ನ ಅಡಿಯಲ್ಲಿ ಸ್ಪರ್ಧಿಸಿದ್ದರು. ಇದು ಮಹಾರಾಷ್ಟ್ರದಲ್ಲಿ ಕುಟುಂಬ ರಾಜಕೀಯದ ಪ್ರಭಾವವನ್ನು ತೋರಿಸುತ್ತದೆ. ಕೊಲ್ಹೆ ಕುಟುಂಬದ ಮೂವರು ಸದಸ್ಯರಾದ ಲಲಿತ್ ಕೊಲ್ಹೆ, ಸಿಂಧುತಾಯಿ ಕೊಲ್ಹೆ ಮತ್ತು ಪಿಯೂಷ್ ಲಲಿತ್ ಕೊಲ್ಹೆ ಜಲಗಾಂವ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಭಾವನಾತ್ಮಕ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದು, ಲಲಿತ್ ಜೈಲಿನಿಂದ ಸ್ಪರ್ಧಿಸಿ ಗೆದ್ದರು. ಲಲಿತ್ ಜೈಲಿನಿಂದ ಬಿಡುಗಡೆಯಾಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಕುಟುಂಬವು ಈ ಹಿಂದೆ ಪ್ರತಿಜ್ಞೆ ಮಾಡಿತ್ತು.
ನನ್ನ ಮಗ, ಗಂಡ ಮತ್ತು ಅತ್ತೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಲಲಿತ್ ಕೊಲ್ಹೆ ಬಂಧನವಾದಾಗಿನಿಂದ ನಾವು ಚಪ್ಪಲಿ ಧರಿಸಿಲ್ಲ. ಅವರು ಹಿಂತಿರುಗಿದ ನಂತರ ನಾನು ಚಪ್ಪಲಿ ಧರಿಸುತ್ತೇನೆ ಎಂದು ಹೇಳಿದ್ದೆ, ಆದರೆ ಸಾರ್ವಜನಿಕರು ಎಲ್ಲವನ್ನೂ ಸಾಧ್ಯವಾಗಿಸಿದರು ಎಂದು ಲಲಿತ್ ಕೊಲ್ಹೆ ಪತ್ನಿ ಸರಿತಾ ಹೇಳಿದರು.
ಥಾಣೆ ಕದನ
ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ತವರು ಕ್ಷೇತ್ರವಾದ ಥಾಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡರೆ, ಮಹಾಯುತಿಯ ಮತ್ತೊಂದು ಪಾಲುದಾರ ಪಕ್ಷವಾದ ಅಜಿತ್ ಪವಾರ್ರ ಎನ್‌ಸಿಪಿ ಏಕಾಂಗಿಯಾಗಿ ಸ್ಪರ್ಧಿಸಿತು. 131 ಸ್ಥಾನಗಳನ್ನು ಹೊಂದಿರುವ ಥಾಣೆ ಪುರಸಭೆಯಲ್ಲಿ, ಶಿಂಧೆ ಸೇನೆ 87 ಸ್ಥಾನಗಳಲ್ಲಿ ಮತ್ತು ಬಿಜೆಪಿ 40 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದವು.
ಇತ್ತ ಒಂದು ಕಾಲದಲ್ಲಿ ದಾಯಾದಿ ಕಲಹದಿಂದ ದೂರವಾಗಿದ್ದ ಸೋದರಸಂಬಂಧಿಗಳಾದ ಉದ್ಧವ್ ಮತ್ತು ರಾಜ್ ಠಾಕ್ರೆ 2 ದಶಕಗಳ ಬಳಿಕ ಒಂದಾಗಿ ಮಹಾರಾಷ್ಟ್ರ ನಾಗರಿಕ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿದರು. 2017 ರಲ್ಲಿ ನಡೆದ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನೆ 131 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿತ್ತು, ಎನ್‌ಸಿಪಿ 34 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಬಿಜೆಪಿ 23 ಸ್ಥಾನಗಳನ್ನು ಪಡೆದುಕೊಂಡಿತು.
ಥಾಣೆಯಲ್ಲಿ ಏಕನಾಥ್ ಶಿಂಧೆ ಈಗಾಗಲೇ ಬಹುಮತ ಗಳಿಸಿದ್ದರು, 2017 ರಲ್ಲಿ ಆಯ್ಕೆಯಾದ 67 ಸೇನಾ ಕಾರ್ಪೊರೇಟರ್‌ಗಳಲ್ಲಿ 66 ಜನರು ಉಪಮುಖ್ಯಮಂತ್ರಿಯನ್ನು ಬೆಂಬಲಿಸಿದ್ದರು. 1987-1993 ಹೊರತುಪಡಿಸಿ, ಅವಿಭಜಿತ ಶಿವಸೇನೆಯು ಥಾಣೆಯ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದ್ದು, ಇದಕ್ಕೆ ಪಕ್ಷದ ಹಿರಿಯ ನಾಯಕರಾದ ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಪರಂಪರೆ ಮತ್ತು ಪರಿಶ್ರಮ ಪ್ರಮುಖ ಕಾರಣ(ಏಜೆನ್ಸೀಸ್).